ನನ್ನನ್ನು ಬಂಧಿಸಲು ನೂರು ಜನ ಸಿದ್ದರಾಮಯ್ಯರು ಬರಬೇಕು-ಕೇಂದ್ರ ಸಚಿವ ಕುಮಾರಸ್ವಾಮಿ
ಬೆಂಗಳೂರು, ಆಗಸ್ಟ್ 21: ಅಗತ್ಯವಿದ್ದರೆ ಕುಮಾರಸ್ವಾಮಿಯನ್ನು ಮುಲಾಜಿಲ್ಲದೆ ಬಂಧಿಸುತ್ತೇವೆ ಎಂದು ಕೊಪ್ಪಳದಲ್ಲಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದು, ನನಗೆ ಭಯ ಶುರುವಾಗಿದೆಯಾ? ನನ್ನ ನೋಡಿದರೆ ನಿಮಗೆ ಹಾಗೆ ಅನಿಸುತ್ತಾ? ಸಿಎಂ ಕಳೆದ ವಾರದಿಂದ ಹೇಗೆ ನಡೆದುಕೊಡಿದ್ದಾರೆ ನೋಡಿದ್ದೀರಲ್ಲಾ? ನನ್ನನ್ನು ಬಂಧಿಸಲು ನೂರು ಜನ ಸಿದ್ದರಾಮಯ್ಯಗಳು ಬರಬೇಕುಎಂದು ಸವಾಲು ಹಾಕಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಮೈಸೂರಿನ ಮೂಡಾ ದಾಖಲೆ ಇದೆಯಲ್ಲ. ಮುಡಾ ಆಸ್ತಿಯನ್ನು ನನ್ನ ಆಸ್ತಿ ಎಂದು ಹೇಳುತ್ತಿದ್ದಾರೆ. ಇಂತಹ ಭಂಡತನ ಯಾವ ಸಿಎಂ ಕೂಡ ತೋರಿಲ್ಲ. ನನ್ನ ಬಂಧನ ಮಾಡುವುದಕ್ಕೆ ನೂರು ಜನ ಸಿದ್ದರಾಮಯ್ಯರು ಬರಬೇಕು ಎಂದು ವಾಗ್ದಾಳಿ ನಡೆಸಿದರು.

ನನಗೆ ಯಾವುದೇ ಭಯ ಇಲ್ಲ. ನನ್ನ ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ಅನುಮೋದನೆಗೆ ಕೋರಿದ್ದಾರೆ. ಅನುಮತಿ ಕೋರಿರೋದು 2023 ನವೆಂಬರ್‌ನಲ್ಲಿ. ಸುಮಾರು ಹತ್ತು ತಿಂಗಳಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದೇನು..?
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಬಂಧಿಸುವ ಅಗತ್ಯಬಿದ್ದರೆ ಮುಲಾಜಿಲ್ಲದೇ ಬಂಧಿಸುತ್ತೇವೆ. ಆದರೆ ಈಗ ಇನ್ನೂ ಬಂಧಿಸುವ ಸನ್ನಿವೇಶ ಬಂದಿಲ್ಲ. ಹೆಚ್.ಡಿ.ಕುಮಾರಸ್ವಾಮಿ ಅವರ ಪ್ರಕರಣದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯಪಾಲರು, ನನ್ನ ವಿರುದ್ಧ ಮಾತ್ರ ಯಾವುದೇ ತನಿಖಾ ವರದಿಯನ್ನು ಆಧರಿಸದೇ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಇದು ತಾರತಮ್ಯವಲ್ಲದೆ ಮತ್ತೇನು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದರು.
ಕುಮಾರಸ್ವಾಮಿಯವರು ಈಗಲೇ ಹೆದರಿದ್ದಾರೆ. ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಬಹುದು ಎಂಬ ಭಯ ಅವರನ್ನು ಕಾಡುತ್ತಿದೆ. ಅವರ ವಿರುದ್ಧ ಲೋಕಾಯುಕ್ತ ಎಸ್.ಐ.ಟಿ ಯವರು ತನಿಖಾ ವರದಿ ನೀಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದ್ದಾಗ್ಯೂ ರಾಜ್ಯಪಾಲರಿಂದ ಯಾವುದೇ ಕ್ರಮವಾಗದ ಕಾರಣ, ಎಸ್.ಐ.ಟಿ ಮತ್ತೊಮ್ಮೆ ಅರ್ಜಿ ಸಲ್ಲಿಸಿದೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.












Click it and Unblock the Notifications