ಕರ್ನಾಟಕದಲ್ಲಿ ಕೋವಿಡ್ ಬೂಸ್ಟರ್ ಲಸಿಕೆ ಪಡೆದವರು ಎಷ್ಟು?
ಬೆಂಗಳೂರು, ಏಪ್ರಿಲ್ 15; ಕೇಂದ್ರ ಸರ್ಕಾರ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಕೋವಿಡ್ ಬೂಸ್ಟರ್ ಡೋಸ್ ಪಡೆಯಲು ಅನುಮತಿ ನೀಡಿದೆ. ಆದರೆ ಏಪ್ರಿಲ್ 14ರ ಮಾಹಿತಿಯಂತೆ ಕರ್ನಾಟಕದಲ್ಲಿ ಕೇವಲ 8041 ಜನರು ಲಸಿಕೆ ಪಡೆದಿದ್ದಾರೆ.
ಏಪ್ರಿಲ್ 10ರಿಂದ ಖಾಸಗಿ ಆಸ್ಪತ್ರೆಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರೂ ಬೂಸ್ಟರ್ ಡೋಸ್ ಪಡೆಯಬಹುದಾಗಿದೆ ಎಂದು ಹೇಳಿತ್ತು. ಆದರೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಜನರು ಬೂಸ್ಟರ್ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.
ಕರ್ನಾಟಕದಲ್ಲಿ 18 ರಿಂದ 59 ವರ್ಷದ ವಯೋಮಾನದ 8041 ಜನರು ಮಾತ್ರ ಬೂಸ್ಟರ್ ಡೋಸ್ ಲಸಿಕೆ ಪಡೆದಿದ್ದಾರೆ. ಇದರಲ್ಲಿ 6,994 ಜನರು ಬಿಬಿಎಂಪಿ ವ್ಯಾಪ್ತಿಯಲ್ಲಿಯೇ ಲಸಿಕೆ ಪಡೆದಿದ್ದಾರೆ. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಸಿಗುತ್ತಿದೆ.

ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂ ಒಕ್ಕೂಟ (ಫನಾ) ಅಧ್ಯಕ್ಷ ಡಾ. ಹೆಚ್. ಎಂ. ಪ್ರಸನ್ನ ಮಾತನಾಡಿ, "6000 ಜನರು ಎರಡನೇ ಡೋಸ್ ಲಸಿಕೆ ಪಡೆದಿಲ್ಲ. ಇದರಲ್ಲಿ ಬೆಂಗಳೂರು ನಗರದಲ್ಲಿಯೇ 5 ಸಾವಿರ ಜನರು ಲಸಿಕೆ ಪಡೆದಿಲ್ಲ. ಈ ಕುರಿತು ಆಸ್ಪತ್ರೆ ಇನ್ನೂ 152 ಆಸ್ಪತ್ರೆಗಳು ಪ್ರತಿಕ್ರಿಯೆ ನೀಡಿಲ್ಲ" ಎಂದರು.
"ಮಾರ್ಚ್ ತಿಂಗಳ ಅಂತ್ಯದ ತನಕ ಖಾಸಗಿ ಆಸ್ಪತ್ರೆಗಳಲ್ಲಿ 2 ಲಕ್ಷ ಲಸಿಕೆಗಳು ಉಪಯೋಗವಾಗದೇ ಉಳಿದ್ದಿದ್ದವು. ಅತಿ ಹೆಚ್ಚು ಲಸಿಕೆಗಳು ಮಣಿಪಾಲ್, ಸ್ಪರ್ಶ್, ಅಪೊಲೋ, ಬ್ಲಾಸಂ ಮತ್ತು ನಾರಾಯಣ ಹೆಲ್ತ್‌ನಲ್ಲಿ ಬಾಕಿ ಉಳಿದಿದ್ದವು" ಎಂದು ಹೇಳಿದರು.
ಯಾವ ಜಿಲ್ಲೆ ಎಷ್ಟು?; ಬೆಂಗಳೂರು ಬಳಿಕ ಮೈಸೂರು ಎರಡನೇ ಸ್ಥಾನದಲ್ಲಿದೆ. ಮೈಸೂರಿನಲ್ಲಿ 351, ಬೆಂಗಳೂರು ಗ್ರಾಮಾಂತರ 334, ದಕ್ಷಿಣ ಕನ್ನಡದಲ್ಲಿ 188 ಡೋಸ್ ಬೂಸ್ಟರ್ ಡೋಸ್ ಲಸಿಕೆ ಪಡೆಯಲಾಗಿದೆ.
ಉಳಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳು ಒಂದು ಅಂಕಿಯಲ್ಲಿವೆ. 16 ಜಿಲ್ಲೆಗಳಲ್ಲಿ ಯಾರೂ ಸಹ ಒಂದೇ ಒಂದು ಡೋಸ್ ಲಸಿಕೆಯನ್ನು ಪಡೆದಿಲ್ಲ. ತುಮಕೂರು ಮತ್ತು ಕೊಡಗು ಜಿಲ್ಲೆಯಲ್ಲಿ ಎರಡು ಡೋಸ್ ಲಸಿಕೆ ನೀಡಲಾಗಿದೆ.
ಬೂಸ್ಟರ್ ಡೋಸ್‌ಗೆ ಜನರು 386 ರೂ. ನೀಡಲು ತಯಾರಿಲ್ಲ. ಆದ್ದರಿಂದ ಬೂಸ್ಟರ್ ಡೋಸ್ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಸರ್ಕಾರ ಎಲ್ಲಾ ವಯಸ್ಕರಿಗೆ ಉಚಿತವಾಗಿ ಲಸಿಕೆ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಈಗ ಕೋವಿಡ್ ಬಗ್ಗೆ ಜನರಿಗೆ ಹೆಚ್ಚಿನ ಭೀತಿ ಇಲ್ಲ. ಇದೇ ಕಾರಣಕ್ಕೆ ಜನರು ಬೂಸ್ಟರ್ ಡೋಸ್ ಪಡೆಯಲು ಆಸಕ್ತಿ ತೋರುತ್ತಿಲ್ಲ. ಬೆಂಗಳೂರು, ಮೈಸೂರು ಮತ್ತು ಮಂಗಳೂರಿನ ಖಾಸಗಿ ಆಸ್ಪತ್ರೆಗಳು ಮಾತ್ರ ಲಸಿಕೆ ಖರೀದಿಗೆ ಆಸಕ್ತಿ ತೋರುತ್ತಿವೆ.
85,000 ಜನರು ಮಾತ್ರ ಲಸಿಕೆ; ಕೋವಿಡ್ ಬೂಸ್ಟರ್ ಡೋಸ್ ಲಸಿಕೆ ನೀಡಲು ಆರಂಭಿಸಿ 4 ದಿನಗಳು ಕಳೆದರೂ ಇಡೀ ದೇಶದಲ್ಲಿ 85,000 ಜನರು ಮಾತ್ರ ಬೂಸ್ಟರ್ ಡೋಸ್ ಪಡೆದಿದ್ದಾರೆ. 18 ರಿಂದ 44ರ ವಯೋಮಾನದ 18,406, 45-59 ವಯೋಮಾನದ 66,748 ಬೂಸ್ಟರ್ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.
ಕೋವಿಡ್ ಬೂಸ್ಟರ್ ಲಸಿಕೆ ಪಡೆದುಕೊಂಡ ಕೆಲವು ದಿನಗಳ ಬಳಿಕ ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ ಎಂದು ತಜ್ಞರು ಹೇಳಿದ್ದಾರೆ. ಆದರೆ ಸಹ ಬೂಸ್ಟರ್ ಡೋಸ್ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ.
ಜನರು 2ನೇ ಡೋಸ್ ಲಸಿಕೆ ಪಡೆದ 9 ತಿಂಗಳ ಬಳಿಕ ಬೂಸ್ಟರ್ ಡೋಸ್ ಪಡೆಯಬಹುದಾಗಿದೆ. ಎರಡನೇ ಡೋಸ್ ಲಸಿಕೆ ಪಡೆದು ತಿಂಗಳು ಕಳೆಯದ ಕಾರಣ ಜನರು ಬೂಸ್ಟರ್ ಡೋಸ್ ಪಡೆಯಲು ಮುಂದಾಗುತ್ತಿಲ್ಲ ಎಂದು ಸಹ ಅಂದಾಜಿಸಲಾಗಿದೆ.












Click it and Unblock the Notifications