Karnataka 7th pay commission; ಶಿಕ್ಷಕರ ಗಳಿಕೆ ರಜೆ ಹೆಚ್ಚಳ?
ಬೆಂಗಳೂರು, ಸೆಪ್ಟೆಂಬರ್ 12; ಶೈಕ್ಷಣಿಕ ಕೆಲಸದ ಜೊತೆಗೆ ಬಿಎಲ್‌ಒ, ಜನಗಣತಿ, ಮನೆ ಗಣತಿ, ಜನ ಜಾಗೃತಿ ಮುಂತಾದ ಕಾರ್ಯದಲ್ಲಿ ತೊಡಗುವ ಶಿಕ್ಷಕರಿಗೆ ಗಳಿಕೆ ರಜೆ ಹೆಚ್ಚಿಸಬೇಕು ಎಂದು ಬೇಡಿಕೆ ಇಡಲಾಗಿದೆ. ಈ ಕುರಿತು 7ನೇ ರಾಜ್ಯ ವೇತನ ಆಯೋಗಕ್ಕೆ ಮನವಿ ಸಲ್ಲಿಕೆ ಮಾಡಲಾಗಿದೆ.
ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿ ಪರಿಷ್ಕರಿಸಲು ಮತ್ತು ನೂತನ ವೇತನ ಶ್ರೇಣಿ ರಚನೆ ಇತ್ಯಾದಿಗಳನ್ನು ರೂಪಿಸಲು ಸುಧಾಕರ್ ರಾವ್ ಅಧ್ಯಕ್ಷತೆಯ 7ನೇ ರಾಜ್ಯ ವೇತನ ಆಯೋಗ ರಚಿದೆ.

ಸರ್ಕಾರದ ಪರಿಶೀಲನಾ ಅಂಶಗಳ ಮೇಲೆ ಆಯೋಗ ಕೆಲಸ ಮಾಡುತ್ತಿದೆ. ಶಿಕ್ಷಕರ ಸಂಘದ ಮುಖ್ಯಸ್ಥರೊಂದಿಗೆ ಸಂಘದ ಪ್ರತಿಕ್ರಿಯೆ/ ಬೇಡಿಕೆಗಳ ಕುರಿತು ಸೆಪ್ಟೆಂಬರ್ 6ರಂದು 7ನೇ ರಾಜ್ಯ ವೇತನ ಆಯೋಗ ಸಭೆ ನಡೆಸಿತ್ತು. ಈ ಸಭೆಯಲ್ಲಿ ಹಲವಾರು ವಿಚಾರಗಳ ಕುರಿತು ಗಮನ ಸೆಳೆಯಲಾಗಿದೆ.
ಸಭೆಯಲ್ಲಿ ಪ್ರಮುಖವಾಗಿ ಏಪ್ರಿಲ್, ಮೇ ತಿಂಗಳ (ಬೇಸಿಗೆ) ರಜೆ ಹಾಗೂ ಅಕ್ಟೋಬರ್ ತಿಂಗಳ (ದಸರಾ) ರಜೆಗಳನ್ನು ಪಡೆಯುವ ಕಾರಣ ನೀಡಿ ಶಿಕ್ಷಕರಿಗೆ ಹಲವು ವರ್ಷಗಳಿಂದ ರಜೆಗಳನ್ನು ಕಡಿತಗೊಳಿಸಲಾಗಿದೆ. ಶಿಕ್ಷಕರ ಗಳಿಕೆ ರಜೆಯನ್ನು ಹೆಚ್ಚು ಮಾಡಬೇಕು ಎಂದು ಆಯೋಗಕ್ಕೆ ಮನವಿ ಮಾಡಲಾಗಿದೆ.
ಶಿಕ್ಷಕರ ರಜೆ ಹೆಚ್ಚಿಸಿ; ಶಿಕ್ಷಕರು ಪಡೆಯುವ ರಜೆಗಳು 143, ಸಾಂದರ್ಭಿಕ ರಜೆ 15, ನಿರ್ಬಂಧಿತ ರಜೆ 2, ಗಳಿಕೆ ರಜೆ 10, ಸ್ಥಳೀಯ ವಿವೇಚನಾ ರಜೆ 4, ಬೇಸಿಗೆ ರಜೆ 44, ದಸರಾ ರಜೆ 15, ಭಾನುವಾರಗಳು 52, ಸಾರ್ವಜನಿಕ ರಜೆ 17 ಒಟ್ಟು 159 ರಜೆಗಳಿವೆ. ಆದರೆ, ಬೇಸಿಗೆ ಮತ್ತು ದಸರಾ ರಜೆಯಲ್ಲಿನ ಭಾನುವಾರಗಳು 8 ಬೇಸಿಗೆ ಮತ್ತು ದಸರಾ ರಜೆಯಲ್ಲಿನ ಸಾರ್ವಜನಿಕ ರಜೆಗಳು 8, ಒಟ್ಟು ರಜೆಗಳು ಮಾತ್ರ 143 ಲಭ್ಯವಾಗುತ್ತವೆ ಎಂದು ಸಭೆಯಲ್ಲಿ ವಿವರಣೆ ಕೊಡಲಾಗಿದೆ.
ಸರ್ಕಾರದ ಇತರ ಇಲಾಖಾ ನೌಕರರಿಗೆ 150 ರಜೆಗಳು ಸಿಗುತ್ತವೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಕರಿಗೆ ಕೆಲಸದ ದಿನಗಳು ಹೆಚ್ಚುತ್ತಿವೆ. ದಸರಾ ರಜೆಗಳನ್ನು ಕಡಿತ ಮಾಡಲಾಗುತ್ತಿದೆ. ಇತರ ಇಲಾಖೆ ನೌಕರರು 30 ಗಳಿಕೆ ರಜೆ ಪಡೆಯುತ್ತಿದ್ದಾರೆ. ಆದರೆ ಶಿಕ್ಷಕರಿಗೆ ಸಿಗುತ್ತಿರುವ ಗಳಿಕೆ ರಜೆ 10 ಮಾತ್ರ. ಇದರಿಂದ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ ಎಂದು ಸಭೆಯಲ್ಲಿ ಆಯೋಗದ ಗಮನ ಸೆಳೆಯಲಾಗಿದೆ.
ಆಯೋಗದ ಮುಂದೆ ಇತರ ಇಲಾಖೆಗಳಿಗೂ ನೀಡುವ ಮಾದರಿಯಲ್ಲಿ ಶಿಕ್ಷಕರಿಗೂ ಪ್ರತಿ ತಿಂಗಳು 2ನೇ ಮತ್ತು 4ನೇ ಶನಿವಾರ ರಜೆ ನೀಡಬೇಕು. ಶಿಕ್ಷಕರಿಗೆ ವಾರ್ಷಿಕ ಕನಿಷ್ಠ 25 ಗಳಿಕೆ ರಜೆ ಹಾಗೂ 10 ಅರ್ಧ ವೇತನ ರಜೆಗಳನ್ನು ಮಂಜೂರು ಮಾಡಬೇಕು ಎಂದು ಮನವಿ ಮಾಡಲಾಗಿದೆ.
ನವೆಂಬರ್‌ನಲ್ಲಿ ವರದಿ; ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದಾಗ 7ನೇ ರಾಜ್ಯ ವೇತನ ಆಯೋಗ ರಚನೆ ಮಾಡಲಾಗಿತ್ತು. ವಿಧಾನಸಭೆ ಚುನಾವಣೆ ಮುಗಿದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆಯೋಗಕ್ಕೆ ನಿಗದಿಪಡಿಸಿರುವ ಕಾಲಾವಧಿಯನ್ನು ದಿನಾಂಕ 19/5/2023 ರಿಂದ 6 ತಿಂಗಳು ವಿಸ್ತರಣೆ ಮಾಡಲಾಗಿದೆ. ಆಯೋಗ ಸರ್ಕಾರದ ವಿವಿಧ ಇಲಾಖೆಗಳ ನೌಕರರ ಸಂಘದ ಜೊತೆ ಸಭೆಗಳನ್ನು ನಡೆಸುತ್ತಿದೆ.
ಆಯೋಗ ವೇತನ, ಭತ್ಯೆ, ಪಿಂಚಣಿ, ರಜೆ ಸೌಲಭ್ಯ ಸೇರಿದಂತೆ ವಿವಿಧ ವಿಚಾರಗಳ ಸರ್ಕಾರದ ವಿವಿಧ ಇಲಾಖೆಗಳ ನೌಕರರ ಜೊತೆ ಸಭೆ ನಡೆಸುತ್ತಿದೆ. ಎಲ್ಲಾ ಸಭೆಗಳ ಬಳಿಕ ಆಯೋಗ ಸರ್ಕಾರಕ್ಕೆ ಶಿಫಾರಸುಗಳನ್ನು ಸಲ್ಲಿಕೆ ಮಾಡಲಿದೆ. ನವೆಂಬರ್‌ನಲ್ಲಿ ವೇತನ ಆಯೋಗದ ವರದಿ ಸರ್ಕಾರದ ಕೈ ಸೇರುವ ನಿರೀಕ್ಷೆ ಇದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ವೇತನ ಆಯೋಗದ ಕುರಿತು ಮಾತನಾಡಿದ್ದು, "7ನೇ ವೇತನ ಆಯೋಗ ನವೆಂಬರ್ ಅಂತ್ಯದ ವೇಳೆಗೆ ವೇತನ ಹೆಚ್ಚಳಕ್ಕೆ ಪೂರಕವಾಗಿರುವ ವರದಿ ಸಲ್ಲಿಸಲಿದೆ. ಸಮಿತಿಯ ಸದಸ್ಯರನ್ನು ಭೇಟಿ ಮಾಡಿ ಶೇ 38 ರಿಂದ 40ವೇತನ ಹೆಚ್ಚಳಕ್ಕೆ ಮನವಿ ಮಾಡಲಾಗಿದೆ" ಎಂದು ಹೇಳಿದ್ದಾರೆ.











Click it and Unblock the Notifications