7th Pay Commission; ಸದನದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ
ಬೆಂಗಳೂರು, ಡಿಸೆಂಬರ್ 07; ಕರ್ನಾಟಕ ಸರ್ಕಾರ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ ರಚನೆ ಮಾಡಿರುವ ಕೆ. ಸುಧಾಕರ್ ರಾವ್ ಅಧ್ಯಕ್ಷತೆಯ 7ನೇ ರಾಜ್ಯ ವೇತನ ಆಯೋಗದ ಅವಧಿಯನ್ನು 15/3/2024ರವರೆಗೆ ವಿಸ್ತರಿಸಿ ಆದೇಶಿಸಿದೆ. ವೇತನ ಆಯೋಗದ ಕಾಲಮಿತಿ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿಯೂ ಪ್ರಶ್ನಿಸಲಾಗಿದೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾದ 7ನೇ ರಾಜ್ಯ ವೇತನ ಆಯೋಗದ ವರದಿ ಜಾರಿ ಕುರಿತು ಚರ್ಚೆಗಳು ನಡೆದಿವೆ. ವಿಧಾನ ಪರಿಷತ್‌ನಲ್ಲಿ 7ನೇ ವೇತನ ಆಯೋಗದ ಅವಧಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಧರಣಿ ನಡೆಸಿದರು.
ಶಾಸಕ ಐಹೊಳೆ ದುರ್ಯೋಧನ ವಿಧಾನಸಭೆಯಲ್ಲಿ 7ನೇ ರಾಜ್ಯ ವೇತನ ಆಯೋಗದ ಕುರಿತು ಕೇಳಿರುವ ಪ್ರಶ್ನೆಗೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ.

ಶಾಸಕರು ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗವನ್ನು ಜಾರಿ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ?. ಹಾಗಿದ್ದಲ್ಲಿ ಯಾವಾಗ ಜಾರಿ ಮಾಡಲಾಗುವುದು?. ಇಲ್ಲದಿದ್ದಲ್ಲಿ 7ನೇ ವೇತನ ಆಯೋಗವನ್ನು ಜಾರಿ ಮಾಡಲು ಈ ನೌಕರರುಗಳಿಗೆ ಅನುಕೂಲ ಕಲ್ಪಿಸಿಕೊಡಲು ಸರ್ಕಾರಕ್ಕಿರುವ ತೊಂದರೆಗಳೇನು?.
ರಾಜ್ಯ ಸರ್ಕಾರಿ ನೌಕರರುಗಳಿಗೆ 7ನೇ ವೇತನ ಆಯೋಗವನ್ನು ಯಾವ ಕಾಲಮಿತಿಯಲ್ಲಿ ಜಾರಿ ಮಾಡಲಾಗುವುದು? (ವಿವರ ನೀಡುವುದು) ಎಂದು ಪ್ರಶ್ನೆ ಮಾಡಿದ್ದರು.
ಸಿದ್ದರಾಮಯ್ಯ ಉತ್ತರ; ಈ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿದ್ದು, ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಪರಿಶೀಲಿಸಲು ದಿನಾಂಕ 9/11/2022ರ ಸರ್ಕಾರಿ ಆದೇಶದಲ್ಲಿ ತ್ರಿ ಸದಸ್ಯದ 7ನೇ ರಾಜ್ಯ ವೇತನ ಆಯೋಗವನ್ನು ರಚಿಸಿ ಆದೇಶಿಸಲಾಗಿರುತ್ತದೆ ಎಂದು ಹೇಳಿದ್ದಾರೆ.
ನಂತರ ದಿನಾಂಕ 6/11/2023ರ ಆದೇಶದಲ್ಲಿ ಆಯೋಗದ ಕಾಲಾವಧಿಯನ್ನು ದಿನಾಂಕ 15/3/2023ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಪ್ರಸ್ತುತ ರಾಜ್ಯ ಸರ್ಕಾರವು ವೇತನ ಆಯೋಗದ ಅಂತಿಮ ವರದಿಯ ನಿರೀಕ್ಷೆಯಲ್ಲಿರುತ್ತದೆ ಎಂದು ಸಿದ್ದರಾಮಯ್ಯ ಉತ್ತರದಲ್ಲಿ ತಿಳಿಸಿದ್ದಾರೆ.
ಎರಡು ಬಾರಿ ಅವಧಿ ವಿಸ್ತರಣೆ; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಗಿದು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಎರಡು ಬಾರಿ 7ನೇ ರಾಜ್ಯ ವೇತನ ಆಯೋಗದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ನವೆಂಬರ್ ತಿಂಗಳಿನಲ್ಲಿ ವೇತನ ಆಯೋಗದ ಅವಧಿ ವಿಸ್ತರಣೆ ಬಗ್ಗೆ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಉಮಾ ಕೆ. ಸರ್ಕಾರದ ಜಂಟಿ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಸೇವೆಗಳು-2) ಆದೇಶ ಹೊರಡಿಸಿದ್ದರು.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದಾಗ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಮತ್ತು ನೂತನ ವೇತನ ರಚನೆ ಇತ್ಯಾದಿಗಳನ್ನು ರೂಪಿಸಲು ದಿನಾಂಕ 19/11/2022ರಂದು 7ನೇ ರಾಜ್ಯ ವೇತನ ಆಯೋಗವನ್ನು ರಚಿಸಲಾಗಿತ್ತು.
ದಿನಾಂಕ 15/05/2023ರ ಸರ್ಕಾರಿ ಆದೇಶದಲ್ಲಿ 7ನೇ ರಾಜ್ಯ ವೇತನ ಆಯೋಗದ ಕಾಲಾವಧಿಯನ್ನು ದಿನಾಂಕ 18/11/202ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿತ್ತು. ಮತ್ತೆ ಸರ್ಕಾರ 7ನೇ ರಾಜ್ಯ ವೇತನ ಆಯೋಗವು ತನ್ನ ಕಾರ್ಯಕಲಾಪಗಳನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲು ಅನುಕೂಲವಾಗುವಂತೆ, ಆಯೋಗದ ಕಾಲಾವಧಿಯನ್ನು ದಿನಾಂಕ 15/3/2024ರವರೆಗೆ ವಿಸ್ತರಣೆ ಮಾಡಿದೆ.
ಕರ್ನಾಟಕ ಸರ್ಕಾರ ಈ ವರ್ಷದ ನವೆಂಬರ್‌ನಲ್ಲಿ 7ನೇ ರಾಜ್ಯ ವೇತನ ಆಯೋಗದ ವರದಿ ಸ್ವೀಕಾರ ಮಾಡಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ವೇತನ ಆಯೋಗದ ಅವಧಿಯನ್ನು 2024ರ ಮಾರ್ಚ್ ತನಕ ವಿಸ್ತರಣೆ ಮಾಡಲಾಗಿದೆ. ಆದ್ದರಿಂದ ಮುಂದಿನ ಬಜೆಟ್‌ನಲ್ಲಿ ವೇತನ ಆಯೋಗದ ಶಿಫಾರಸು ಜಾರಿಗೊಳಿಸಲು ಸರ್ಕಾರ ಅನುದಾನವನ್ನು ಮೀಸಲು ಇಡಬಹುದು ಎಂದು ಅಂದಾಜಿಸಲಾಗಿದೆ.
ಸೆಪ್ಟೆಂಬರ್ 29ರಂದು ವೇತನ ಆಯೋಗದ ಅಧ್ಯಕ್ಷ ಸುಧಾಕರ್ ರಾವ್ ಹಾಗೂ ಸದಸ್ಯರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾಗಿತ್ತು. 7ನೇ ರಾಜ್ಯ ವೇತನ ಆಯೋಗದ ವರದಿ ಸ್ವೀಕಾರ ಮಾಡಿದರೆ ಸರ್ಕಾರಿ ನೌಕರರು ವೇತನ ಪರಿಷ್ಕರಣೆಗೆ ಪಟ್ಟು ಹಿಡಿಯಲಿದ್ದಾರೆ. ಶಿಫಾರಸುಗಳನ್ನು ಒಪ್ಪಿದರೆ ಸರ್ಕಾರಕ್ಕೆ ಸುಮಾರು 8 ಸಾವಿರ ಕೋಟಿ ರೂ. ಹೆಚ್ಚುವರಿ ಹೊರೆ ಆಗಲಿದೆ ಎಂದು ಅಂದಾಜಿಸಲಾಗಿದೆ.
ಕರ್ನಾಟಕದ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು ರಾಜ್ಯದ ಜನರಿಗೆ ನೀಡಿ ರಾಜ್ಯದಲ್ಲಿ ಅಧಿಕಾರ ಪಡೆದಿದೆ. 4 ಗ್ಯಾರಂಟಿಗಳನ್ನು ಜಾರಿಗೆ ತಂದಿರುವ ಸರ್ಕಾರ ಆ ಯೋಜನೆಗಳಿಗೆ ಹಣ ಹೊಂದಿಕೆ ಮಾಡಲು ಪ್ರಯತ್ನ ನಡೆಸಿದೆ. ಇಂತಹ ಸಮಯದಲ್ಲಿ 7ನೇ ವೇತನ ಆಯೋಗದ ವರದಿ ಸ್ವೀಕಾರ ಮಾಡಿದರೂ ಸಹ ವೇತನ ಪರಿಷ್ಕರಣೆ ಮಾಡುವ ಸ್ಥಿತಿಯಲ್ಲಿ ಹಣಕಾಸು ಪರಿಸ್ಥಿತಿ ಇಲ್ಲ. ಆದ್ದರಿಂದ ಆಯೋಗದ ಅವಧಿ ವಿಸ್ತರಣೆ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.












Click it and Unblock the Notifications