7th Pay Commission: 7ನೇ ವೇತನ ಆಯೋಗ ವರದಿ ಶೀಘ್ರವೇ ಜಾರಿಗೆ ವಿಧಾನಸಭೆಯಲ್ಲಿ ಒತ್ತಾಯ
ಬೆಂಗಳೂರು, ಫೆಬ್ರವರಿ 22: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ 7ನೇ ವೇತನ ಆಯೋಗದ ವರದಿಯನ್ನು ಶೀಘ್ರವೇ ಜಾರಿಗೆ ತರಬೇಕು ಎಂದು ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ವಿಧಾನಸಭೆಯಲ್ಲಿಂದು ಒತ್ತಾಯಿಸಿದರು.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರ ರೂಪಿಸುವ ಯೋಜನೆಗಳನ್ನು ಜಾರಿಗೆ ತರುವುದೇ ಸರ್ಕಾರಿ ನೌಕರರು ಅವರನ್ನು ಚೆನ್ನಾಗಿ ನೋಡಿಕೊಂಡರೆ ಸರ್ಕಾರಕ್ಕೂ ಅನುಕೂಲವಾಗಲಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಹೆಚ್ಚಿನ ವೇತನ ದೊರೆಯುತ್ತಿದೆ. ಇದಕ್ಕೆ ಹೋಲಿಸಿದರೆ, ರಾಜ್ಯ ಸರ್ಕಾರಿ ನೌಕರರಿಗೆ ವೇತನದಲ್ಲಿ ತಾರತಮ್ಯವಾಗುತ್ತಿದೆ. ಇದನ್ನು ಸರಿಪಡಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವ ಸಂದರ್ಭದಲ್ಲಿ 7 ನೇ ವೇತನ ಆಯೋಗದ ವರದಿ ಜಾರಿ ಕುರಿತು ಸ್ಪಷ್ಟವಾದ ಘೋಷಣೆ ಮಾಡಬೇಕು ಎಂದು ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಆಗ್ರಹಿಸಿದರು.

ಬೇಡಿಕೆಗಳನ್ನು ಈಡೇರಿಕೆಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯ: ಹೆಚ್.ಕೆ. ಪಾಟೀಲ್
ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ ಪಾಟೀಲ್, ಅವರು ರೈತರೊಂದಿಗೆ ಸಂಘರ್ಷದ ಹಾದಿ ತುಳಿಯದೇ ಅತ್ಯಂತ ನ್ಯಾಯಯುತವಾದ ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಅಧಿಕೃತ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸಿದರು.
ರೈತರು ಬೆಳೆದ ಬೆಳೆಗಳಿಗೆ ಲಾಭದಾಯಕ ಬೆಲೆ ನಿಗದಿಯಾಗಬೇಕೆಂಬುದು ಭಾರತ ದೇಶದ ಪ್ರತಿಯೊಬ್ಬ ರೈತನ ಆಶಯ. ಈ ಸದಾಶಯವನ್ನು ಅನುಷ್ಠಾನಗೊಳಿಸಬೇಕೆಂದು ಮತ್ತು ಕೃಷಿಯನ್ನು ಲಾಭದಾಯಕಗೊಳಿಸಬೇಕೆಂಬುದು ಎಲ್ಲಾ ಜನಪರ ಪ್ರಜಾಸತ್ತಾತ್ಮಕ ನಾಗರೀಕ ಸರ್ಕಾರಗಳ ಒತ್ತಾಸೆಯಾಗಿದೆ. ರೈತರ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿದ ಡಾ. ಎಂ.ಎಸ್. ಸ್ವಾಮಿನಾಥನ್ ವರದಿಯನ್ವಯ ಕೃಷಿಕನ ಸಾಗುವಳಿ ವೆಚ್ಚದ ಶೇ.50% ರಷ್ಟನ್ನು ಸೇರಿಸಿ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಬೇಕೆಂದು ತನ್ಮೂಲಕ ಹಸಿರು ಕ್ರಾಂತಿಯನ್ನು ಸಾಧಿಸಿ ರಾಷ್ಟ್ರದಲ್ಲಿ ಕೃಷಿಯನ್ನು ಅವಲಂಬಿತ ಉದ್ಯೋಗವನ್ನಾಗಿ ನಿರೀಕ್ಷಿಸಬಹುದೆಂಬ ನಿರೀಕ್ಷೆಯನ್ನು ಸಾಧಿಸುವಲ್ಲಿ ಪ್ರಗತಿಯನ್ನು ಸಾಧಿಸಿಲ್ಲ ಅಥವಾ ನಿರೀಕ್ಷಿತ ಮಟ್ಟದಲ್ಲಿ ಬದಲಾವಣೆಯನ್ನು ತರುವಲ್ಲಿ ವಿಫಲವಾಗಿವೆ.
ಎಲ್ಲಾ ಕೃಷಿ ಉತ್ಪನ್ನಗಳಿಗೂ ಕನಿಷ್ಠ ಲಾಭಾಂಶದ ಬೆಂಬಲ ಬೆಲೆಯನ್ನು ನಿಶ್ಚಿತಗೊಳಿಸುವ (ಗ್ಯಾರಂಟಿ) ಮತ್ತು ರೈತನ ಉತ್ಪನ್ನಗಳ ಬೆಲೆಯನ್ನು ಸ್ವಾಮಿನಾಥನ್ ಸಮಿತಿಯ ಶಿಫಾರಸ್ಸುಗಳ ಆಧಾರದ ಮೇಲೆ ನಿರ್ಧರಿಸುವಂತೆ" ಒತ್ತಾಯಿಸಿ, ಭಾರತದಾದ್ಯಂತ ರೈತರು ಚಳುವಳಿ, ಆಂದೋಲನ ಮತ್ತು ಹೋರಾಟ ಅನಿವಾರ್ಯವಾಗಿದೆ.
ರಾಷ್ಟ್ರದ ಅನ್ನದಾತರೆನ್ನಿಸಿಕೊಳ್ಳುವ ಮತ್ತು ಅರ್ಥವ್ಯವಸ್ಥೆಯ ಸವಾಂಗೀಣ ಅಭಿವೃದ್ಧಿಯ ಬೇರ್ಪಡಿಸಲಾಗದ ಭಾಗವಾಗಿರುವ ಕೃಷಿಕರ ಆದಾಯವನ್ನು ಸಂರಕ್ಷಿಸುವ ತನ್ಮೂಲಕ ಕೃಷಿಯನ್ನು ಲಾಭದಾಯಕಗೊಳಿಸುವ ಉದ್ದೇಶದಿಂದ ವಾಣಿಜ್ಯ ಬೆಳೆಗಳಿಗೆ ಬೆಲೆ ನಿಗದಿಪಡಿಸುವ ಮಾನದಂಡವನ್ನು ಇತರೆ ಕೃಷಿ ಉತ್ಪನ್ನಗಳಿಗೂ ಅನುಸರಿಸುವ ಕ್ರಮಗಳನ್ನು ಕರ್ನಾಟಕ ಬೆಂಬಲಿಸುತ್ತಲೇ ಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಕ್ರಮಗಳು ರೈತ ವಿರೋಧಿ ನೀತಿಯಾಗಿ ರೈತನಿಗೆ ಕನಿಷ್ಠ ಬೆಂಬಲ ಬೆಲೆ ದೊರಕದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿವೆ.
ಈ ಹಿನ್ನೆಲೆಯಲ್ಲಿ ರೈತರ ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಕೇಂದ್ರ ಸರಕಾರ ಶಾಸನ ರೂಪಿಸುವಂತೆ ಈ ಸದನ ಒಕ್ಕೂರಲಿನಿಂದ ಒತ್ತಾಯಿಸುತ್ತದೆ. ರೈತರೊಂದಿಗೆ ಸಂಘರ್ಷದ ಹಾದಿ ತುಳಿಯದೇ ಅತ್ಯಂತ ನ್ಯಾಯಯುತವಾದ ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಕೇಂದ್ರ ಸರ್ಕಾರವನ್ನು ಈ ಸದನವು ಒತ್ತಾಯಿಸುತ್ತದೆ ಎಂದು ಸದನದಲ್ಲಿ ನಿರ್ಣಯವನ್ನು ಮಂಡಿಸಿದರು. ನಿರ್ಣಯವನ್ನು ಸದನದಲ್ಲಿ ಅಂಗೀಕರಿಸಲಾಯಿತು.












Click it and Unblock the Notifications