7th Pay Commission; ಸರ್ಕಾರಿ ನೌಕರರಿಗೆ ನೀತಿ ಸಂಹಿತೆಯ ಚಿಂತೆ
ಬೆಂಗಳೂರು, ಜನವರಿ 10: ಕರ್ನಾಟಕದ ಸರ್ಕಾರಿ ನೌಕರರು 7ನೇ ರಾಜ್ಯ ವೇತನ ಆಯೋಗದ ವರದಿ ಯಾವಾಗ ಜಾರಿಯಾಗಲಿದೆ? ಎಂದು ಕಾದು ಕಾಯುತ್ತಿದ್ದಾರೆ. ಆದರೆ ಸಾಲು ಸಾಲು ಚುನಾವಣೆಗಳು ಎದುರಾಗಲಿದ್ದು, ನೌಕರರಿಗೆ ಚುನಾವಣಾ ಮಾದರಿ ನೀತಿ ಸಂಹಿತೆಯ ಚಿಂತೆ ಎದುರಾಗಿದೆ.
ಮಂಡ್ಯದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಣಿ ಸಭೆ ನಡೆಯಿತು. ಈ ಸಭೆಯಲ್ಲಿಯೂ ರಾಜ್ಯ 7ನೇ ವೇತನ ಆಯೋಗದ ವರದಿ ಬಗ್ಗೆ ಚರ್ಚೆ ನಡೆಯಿತು. ರಾಜ್ಯ ಸರ್ಕಾರಿ ನೌಕರರ ಸಂಘದ ಸಿ. ಎಸ್. ಷಡಕ್ಷರಿ ಸಭೆಯಲ್ಲಿ ಮಾತನಾಡಿದ್ದರು.

"7ನೇ ವೇತನ ಆಯೋಗ ರಚಿಸಿ ವರ್ಷಗಳೇ ಕಳೆದಿವೆ. ಎರಡು ಬಾರಿ ಅವಧಿ ವಿಸ್ತರಣೆ ಮಾಡಿದ್ದು, ಇದರಿಂದಾಗಿ ವರದಿ ಜಾರಿ ವಿಳಂಬವಾಗಿದೆ. ನಮಗೆ ತಿಳಿದಿರುವ ಮಾಹಿತಿ ಪ್ರಕಾರ ಆಯೋಗ ಕೆಲಸವನ್ನು ಸಂಪೂರ್ಣವಾಗಿ ಮುಗಿಸಿದೆ. ಆದರೆ ಸರ್ಕಾರ ವರದಿಯನ್ನು ತರಿಸಿಕೊಂಡು ಅನುಷ್ಠಾನ ಮಾಡುವ ಕೆಲಸ ಮಾಡುತ್ತಿಲ್ಲ" ಎಂದು ದೂರಿದ್ದರು.
"2024ರ ಲೋಕಸಭೆ ಚುನಾವಣೆಗೆ ಮಾರ್ಚ್ 2ನೇ ವಾರದಲ್ಲಿ ಅಧಿಸೂಚನೆ ಪ್ರಕಟವಾಗುವ ನಿರೀಕ್ಷೆ ಇದೆ. ಅಷ್ಟರೊಳಗೆ ಅಂದರೆ ಫೆಬ್ರವರಿ ಅಂತ್ಯದೊಳಗೆ ರಾಜ್ಯ 7ನೇ ವೇತನ ಆಯೋಗದ ವರದಿಯನ್ನು ಪಡೆದು ಜಾರಿಗೊಳಿಸಬೇಕು"ಎಂದು ಸಿ. ಎಸ್. ಷಡಕ್ಷರಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು.
ಸಾಲು-ಸಾಲು ಚುನಾವಣೆಗಳು; ಲೋಕಸಭೆ ಚುನಾವಣೆ ಮತ್ತು ಬಳಿಕ ಸಾಲು ಸಾಲು ಚುನಾವಣೆಗಳು ಎದುರಾಗಲಿವೆ. ಆದ್ದರಿಂದ ರಾಜ್ಯ ಸರ್ಕಾರ ಕೆ. ಸುಧಾಕರ್ ರಾವ್ ಅಧ್ಯಕ್ಷತೆಯ 7ನೇ ರಾಜ್ಯ ವೇತನ ಆಯೋಗದ ವರದಿಯನ್ನು ಪಡೆದು ಅನುಷ್ಠಾನಗೊಳಿಸಲು ಚುನಾವಣಾ ಮಾದರಿ ನೀತಿ ಸಂಹಿತೆ ಅಡ್ಡಬರಲಿದೆ.
ಲೋಕಸಭೆ ಚುನಾವಣೆಯ ಬಳಿಕ 7 ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆ ನಡೆಯಬೇಕಿದೆ. ಬಳಿಕ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಯಬೇಕು. ಆ ಬಳಿಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ನಡೆಯಲಿದೆ. ಆದ್ದರಿಂದ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಇದರಿಂದಾಗಿ ಆಯೋಗದ ವರದಿ ಅನುಷ್ಠಾನ ಕಷ್ಟ ಎಂಬುದು ಸರ್ಕಾರಿ ನೌಕರರ ವಾದ ವಾಗಿದೆ.
ರಾಜ್ಯ ಸರ್ಕಾರದ ಆದೇಶದಂತೆ 7ನೇ ರಾಜ್ಯ ವೇತನ ಆಯೋಗದ ಅವಧಿಯನ್ನು 15/3/2023ರ ತನಕ ವಿಸ್ತರಣೆ ಮಾಡಲಾಗಿದೆ. ಆದರೆ ಫೆಬ್ರವರಿ 17ರಂದು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 2024-25ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್‌ನಲ್ಲಿ ವೇತನ ಆಯೋಗದ ಶಿಫಾರಸು ಜಾರಿಗೆ ಅನುದಾನ ಮೀಸಲಿಡಲಾಗುತ್ತದೆಯೇ? ಕಾದು ನೋಡಬೇಕಿದೆ.
ಕರ್ನಾಟಕ ಸರ್ಕಾರ 7ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಬೇಕಾದರೆ ಸರ್ಕಾರಕ್ಕೆ ಆರ್ಥಿಕ ಹೊರೆಯಾಗಲಿದೆ. ವೇತನ ಆಯೋಗದ ಶಿಫಾರಸು ಜಾರಿಗೊಳಿಸಬೇಕಾದರೆ ಸುಮಾರು 12 ಸಾವಿರ ಕೋಟಿ ರೂ. ಹೊರೆ ಎದುರಿಸಬೇಕು ಎಂದು ಅಂದಾಜಿಸಲಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಸರ್ಕಾರ ಆಯೋಗದ ಶಿಫಾರಸು ಜಾರಿಗೆ ಹೇಗೆ ಹಣ ಹೊಂದಿಸಲಿದೆ? ಎಂಬುದು ಸದ್ಯದ ಪ್ರಶ್ನೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಕೆಲವು ದಿನಗಳ ಹಿಂದೆ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭೇಟಿಯಾಗಿದ್ದರು. 7ನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು.
ಕರ್ನಾಟಕ ಸರ್ಕಾರ ಬಜೆಟ್ ತಯಾರಿಯಲ್ಲಿ ತೊಡಗಿದೆ. ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಭೆಯಲ್ಲಿ ಜನವರಿ 20ರೊಳಗೆ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸರ್ಕಾರದ ಸಚಿವರುಗಳಿಗೆ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಈ ಕುರಿತು ಮನವಿ ಪತ್ರವನ್ನು ಸಲ್ಲಿಸಲು ತೀರ್ಮಾನಿಸಲಾಗಿದೆ.












Click it and Unblock the Notifications