7th Pay Commission: ಸಂಪುಟದಲ್ಲಿ ಚರ್ಚೆಯಾಗದ 7ನೇ ವೇತನ ಆಯೋಗ ಶಿಫಾರಸು; ಸರ್ಕಾರಿ ನೌಕರರ ಸಂಘಗಳ ಆಕ್ರೋಶ!
ಬೆಂಗಳೂರು, ಜೂನ್ 14: ಬಹುದಿನಗಳ ಕಾಲ 7 ನೇ ವೇತನ ಆಯೋಗ ಜಾರಿ ಕನಸು ಕಂಡಿದ್ದ ಸರ್ಕಾರಿ ನೌಕರರಿಗೆ ಮತ್ತೆ ನಿರಾಸೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗುರುವಾರ ರಾಜ್ಯ ಸಚಿವ ಸಂಪುಟ ಸಭೆ ನಡೆದಿದ್ದು, ಸರ್ಕಾರಿ ನೌಕರರಿಗೆ ಮತ್ತೆ ನಿರಾಸೆಯಾಗಿದೆ.
ರಾಜ್ಯದಲ್ಲಿ ಏಳನೇ ವೇತನ ಆಯೋಗದ ಜಾರಿ ಕುರಿತು ಸಚಿವ ಸಂಪುಟ ಸಭೆಯಲ್ಲಿ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಇದರಿಂದಾಗಿ, ಏಳನೇ ವೇತನ ಆಯೋಗದ ಜಾರಿ ಕುರಿತು ಭಾರಿ ನಿರೀಕ್ಷೆಯಲ್ಲಿದ್ದ ನೌಕರರಿಗೆ ಇದರಿಂದ ನಿರಾಸೆಯಾದಂತಾಗಿದ್ದು, ಆಕ್ರೋಶ ವ್ಯಕ್ತಪಸಿಡಿದ್ದಾರೆ.

ಸಿದ್ದರಾಮಯ್ಯ ಅವರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಯಾವುದೇ ನಿರ್ಣಯ ಕೈಗೊಳ್ಳದಿರುವುದು ರಾಜ್ಯ ಸರ್ಕಾರದ ಸಮಸ್ತ ಸರ್ಕಾರಿ ನೌಕರರಿಗೆ ಬೇಸರವನ್ನುಂಟು ಮಾಡಿದೆ ಎಂಬುದಾಗಿ ಸಚಿವಾಲಯದ ನೌಕರರ ಸಂಘ ಹೇಳಿದೆ. ಆಯೋಗದ ಶಿಫಾರಸಿನ ಜಾರಿ ಕುರಿತು ನಿರೀಕ್ಷೆಯಲ್ಲಿದ್ದ ನಮಗೆ ನಿರಾಸೆಯಾಗಿದೆ ಎಂದು ತಿಳಿಸಿದೆ.
ಮುಖ್ಯಮಂತ್ರಿಗಳ ಸಚಿವ ಸಂಪುಟ ಸಭೆಯಲ್ಲಿ ಏಳನೇ ವೇತನ ಆಯೋಗದ ಬಗ್ಗೆ ಅಧಿಕೃತ ಪ್ರಸ್ತಾವನೆ ಬಂದಿದ್ದು, ಈ ಕುರಿತು ಚರ್ಚೆಯಾಗಿದೆ. ಆದರೆ, ಈ ಬಗ್ಗೆ ಯಾವುದೇ ನಿರ್ಣಯಗಳಾಗಿಲ್ಲ ಎಂದು ಸಚಿವರಾದ ಹೆಚ್ ಕೆ ಪಾಟೀಲ್ ಹೇಳಿದ್ದಾರೆ. ಹೀಗಾಗಿ ಬಹುದಿನಗಳಿಂದ ಕಾಯುತ್ತಿದ್ದ ಸರ್ಕಾರಿ ನೌಕರರ ಕನಸು ಮತ್ತೆ ಹುಸಿಯಾಗಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯನ್ನು ಪ್ರಕಟಿಸಿರುವ ಸಂಘದ ಅಧ್ಯಕ್ಷರಾದ ರಮೇಶ್ ಸಂಗಾ, 7ನೇ ವೇತನ ಆಯೋಗ ಜಾರಿ ಕುರಿತು ಸರ್ಕಾರ ಉದಾಸೀನ ಧೋರಣೆ ತಳೆಯುತ್ತಿರುವುದು ಸ್ಪಷ್ಟ. ಇದೇ ನಿಲುವು ಮುಂದುವರಿದರೆ ನೌಕರರ ಸಂಘವು ಪ್ರತಿ ಭಟನೆಯನ್ನು ಆಯೋಜಿಸುವುದು ಖಚಿತ ಎಂದು ಎಚ್ಚರಿಕೆ ನೀಡಿದ್ದಾರೆ.
ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗುವ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ 7ನೇ ವೇತನ ಆಯೋಗದ ಶಿಫಾರಸ್ಸನ್ನು ಜಾರಿ ಮಾಡುವಂತೆ ಸಚಿವಾಲಯದ ನೌಕರರ ಸಂಘದ ವತಿಯಿಂದ ಮನವಿ ಸಲ್ಲಿದ್ದೆವು. ಈ ವೇಳೆ ಅವರು ಚುನಾವಣೆ ಮುಗಿದ ಬಳಿಕ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಆದರೆ, ಚುನಾವಣೆ ಮುಗಿದ ಬಳಿಕ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳುವ ನಂಬಿಕೆ ಇರಿಸಿಕೊಂಡಿದ್ದೆವು. ಅದು ಹುಸಿಯಾಗಿದೆ ಎಂದು ಹೇಳಿದ್ದಾರೆ.
ಈಗಾಗಲೇ ವೇತನ ಆಯೋಗವು ಶಿಫಾರಸು ಮಾಡಿರುವ ಶೇ. 27.5 ಫಿಟ್ಮೆಂಟಿಗೆ, ಶೇಕಡಾ 2.5ರಷ್ಟು ಸೇರ್ಪಡೆಗೊಳಿಸಿ ಒಟ್ಟು ಶೇಕಡಾ 30ರಷ್ಟು ಫಿಟ್ಮೆಂಟ್ನೊಂದಿಗೆ ವೇತನ ಹೆಚ್ಚಳ ಮಾಡುವುದು ನಮ್ಮ ಬೇಡಿಕೆ ಎಂಬುದಾಗಿ ಸಂಗಾ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications