7th Pay Commission: ಓಪಿಎಸ್, ಎನ್‌ಪಿಎಸ್ ಆಯೋಗ ಹಣಕಾಸು ಇಲಾಖೆ ಮಾಡಿರುವ ಶಿಫಾರಸುಗಳು
ಬೆಂಗಳೂರು, ಸೆಪ್ಟೆಂಬರ್ 22: ರಾಜ್ಯ ಸರ್ಕಾರಿ ನೌಕರರು ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸಿ, ಹಳೆಯ ಪಿಂಚಣಿ ವ್ಯವಸ್ಥೆ (ಒಪಿಎಸ್) ಮರು ಸ್ಥಾಪಿಸಬೇಕು ಎಂದು ಕರ್ನಾಟಕ ಸರ್ಕಾರದ ಮುಂದೆ ಬೇಡಿಕೆಯನ್ನು ಇಟ್ಟಿದ್ದಾರೆ. ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ಮುಂದೆಯೂ ಈ ಕುರಿತು ಮನವಿಯನ್ನು ಸಲ್ಲಿಕೆ ಮಾಡಿದ್ದರು. ಆಯೋಗ ಈ ಕುರಿತು ವಿವರವಾಗಿ ಪರಿಶೀಲಿಸಿ, ಬೇರೆ ರಾಜ್ಯಗಳ ಮಾದರಿಗಳನ್ನು ಸಹ ಅಧ್ಯಯನ ಮಾಡಿ ಸರ್ಕಾರ ಮತ್ತು ಹಣಕಾಸು ಇಲಾಖೆಗೆ ತನ್ನ 558 ಪುಟಗಳ ಸಂಪುಟ-1ರ ವರದಿಯಲ್ಲಿ ಹಲವು ಶಿಫಾರಸುಗಳನ್ನು ಮಾಡಿದೆ.
ಆಯೋಗ ತನ್ನ ವರದಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರವು 01.04.2006ರ ಮೊದಲು ನೇಮಕಾತಿಗಾಗಿ ಆಹ್ವಾನಿಸಲಾದ ಅಧಿಸೂಚನೆಯ ಮೂಲಕ 01.04.2006ರ ಮೊದಲು ಮತ್ತು ಆ ದಿನದಂದು ಅಥವಾ ನಂತರ ನೇಮಕಗೊಂಡ ರಾಜ್ಯ ಸರ್ಕಾರದ ಎಲ್ಲಾ ನೌಕರರಿಗೆ ಎನ್‌ಪಿಎಸ್ ನಿಂದ ಹಳೆಯ ಪಿಂಚಣಿ ಯೋಜನೆಗೆ ಹಿಂದಿರುಗಲು ಒಂದು ಬಾರಿಯ ಆಯ್ಕೆಯನ್ನು (30.6.2024ರೊಳಗೆ ಆಯ್ಕೆ ಚಲಾಯಿಸುವಂತೆ) ನೀಡಿ ದಿನಾಂಕ 24.01.2024 ರಂದು ಆದೇಶವನ್ನು ಹೊರಡಿಸಿತು. ಈ ಆಯ್ಕೆಯನ್ನು ನೌಕರರು ದಿನಾಂಕ 30.06.2024ರ ಅಂತಿಮ ಗಡುವಿನೊಳಗೆ ಚಲಾಯಿಸಬಹುದಾಗಿದ್ದು, ಇಲ್ಲದಿದ್ದಲ್ಲಿ, ಅಂತಹ ನೌಕರರು ಎನ್‌ಪಿಎಸ್ ಅಡಿಯಲ್ಲಿ ಮುಂದುವರೆಯುತ್ತಾರೆ ಎಂದು ಹೇಳಿದೆ.

ಎನ್‌ಪಿಎಸ್, ಒಪಿಎಸ್ ಚರ್ಚೆ ಹೆಚ್ಚು: ಇತ್ತೀಚಿನ ದಿನಗಳಲ್ಲಿ, ಎನ್‌ಪಿಎಸ್ ಮತ್ತು ಒಪಿಎಸ್ ಚರ್ಚೆಯು ತುರ್ತು ಗಮನವನ್ನು ಪಡೆದುಕೊಂಡಿದೆ. ಛತ್ತೀಸ್‌ಗಢ್, ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದ ರಾಜ್ಯ ಸರ್ಕಾರಗಳು ನಾಗರಿಕ ಸೇವೆಗಳ (ವಂತಿಗೆ ಪಿಂಚಣಿ) ವಂತಿಗೆ ನಿಯಮಗಳನ್ನು ರದ್ದುಪಡಿಸುವ ಮೂಲಕ ಎನ್‌ಪಿಎಸ್ ಅನ್ನು ರದ್ದುಗೊಳಿಸಲು ಮತ್ತು ಒಪಿಎಸ್‌ಅನ್ನು ಮರುಜಾರಿಗೊಳಿಸಲು ಆದೇಶಗಳನ್ನು ಹೊರಡಿಸಿವೆ. ಮಹಾರಾಷ್ಟ್ರದಲ್ಲಿ ಸರ್ಕಾರಿ ನೌಕರರು ಕರೆ ನೀಡಿದ ಮುಷ್ಕರವು ಈ ವಿಷಯದ ಬಗ್ಗೆ ಅಧ್ಯಯನ ಮಾಡಲು ಸಮಿತಿಯ ರಚನೆಗೆ ಕಾರಣವಾಯಿತು. ಕೇಂದ್ರ ಸರ್ಕಾರವು ಸಹ ದಿನಾಂಕ 06.4.2023 ರಂದು ಕೇಂದ್ರ ಹಣಕಾಸು ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ 3 ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿತು.
ಸರ್ಕಾರಿ ನೌಕರರಿಗೆ ಅನ್ವಯವಾಗುವಂತೆ ಅಸ್ತಿತ್ವದಲ್ಲಿರುವ ಎನ್‌ಪಿಎಸ್‌ನ ಚೌಕಟ್ಟು ಮತ್ತು ರಚನೆಯಲ್ಲಿ ಬದಲಾವಣೆಗಳ ಅಗತ್ಯವಿರುವ ಬಗ್ಗೆ ಅಧ್ಯಯನ ಮಾಡಲು ಮತ್ತು ಅಗತ್ಯವಿದ್ದಲ್ಲಿ, ಹಣಕಾಸಿನ ಪರಿಣಾಮಗಳು ಮತ್ತು ಒಟ್ಟಾರೆ ಆಯವ್ಯಯ ಅವಕಾಶವನ್ನು ಗಮನದಲ್ಲಿಟ್ಟುಕೊಂಡು ಎನ್‌ಪಿಎಸ್ ಅಡಿಯಲ್ಲಿ ಬರುವ ಸರ್ಕಾರಿ ನೌಕರರ ಪಿಂಚಣಿ ಸೌಲಭ್ಯಗಳನ್ನು ಸಮರ್ಪಕವಾಗಿ ಸುಧಾರಿಸಲು ಸೂಕ್ತ ಕ್ರಮಗಳ ಬಗ್ಗೆ, ಸಲಹೆ ನೀಡುವಂತೆ ಸೂಚಿಸಿದೆ.
ಕರ್ನಾಟಕದಲ್ಲಿಯೂ ಸಹ, ಈ ಹಿಂದೆ ಹೇಳಿದಂತೆ ಆಗ್ರಹಪೂರ್ವಕ ಬೇಡಿಕೆಗಳನ್ನು ಅನುಸರಿಸಿ ರಾಜ್ಯ ಸರ್ಕಾರವು ದಿನಾಂಕ 01.03.2023 ರಂದು ಎನ್‌ಪಿಎಸ್‌ಗೆ ಸಂಬಂಧಿಸಿದ ವಿಷಯಗಳನ್ನು ನಿರ್ದಿಷ್ಟವಾಗಿ ಪರಿಶೀಲಿಸಲು ಮತ್ತು ತಮ್ಮ ನೌಕರರಿಗೆ ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಮರುಜಾರಿಗೊಳಿಸಲು ನಿರ್ಧರಿಸಿರುವ ರಾಜ್ಯಗಳು ಅಳವಡಿಸಿಕೊಂಡ ವಿಧಾನಗಳನ್ನು ವಿಶ್ಲೇಷಿಸಿ, ಪರಾಮರ್ಶಿಸಿದ ನಂತರ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸುಗಳನ್ನು ಸೂಚಿಸಲು ಸಮಿತಿಯನ್ನು ರಚಿಸಿತು.
ಕೇರಳ ರಾಜ್ಯ ವಿಧಾನಸಭೆಯಲ್ಲಿ ಫೆಬ್ರವರಿ 6, 2024 ರಂದು ಮಂಡಿಸಿದ ಆಯವ್ಯಯದಲ್ಲಿ ಎನ್‌ಪಿಎಸ್ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರವು ಎನ್‌ಪಿಎಸ್ ಅನ್ನು ಪರಿಶೀಲಿಸಲು ಮತ್ತು ಪರಿಷ್ಕೃತ ಯೋಜನೆಯನ್ನು ಜಾರಿಗೆ ತರುವುದರೊಂದಿಗೆ ನೌಕರರಿಗೆ ಭದ್ರತೆ ಒದಗಿಸಲು ಯೋಜಿಸಲಾಗುತ್ತಿದೆ. ಕೇಂದ್ರ ಸರ್ಕಾರಕ್ಕೆ ನೀಡಿರುವ ಪಾಲನ್ನು ಹಿಂಪಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ನಿಶ್ಚಿತ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಲು ಪರಿಷ್ಕೃತ ಯೋಜನೆಯನ್ನು ರೂಪಿಸಲಾಗುವುದು. ಇತರ ರಾಜ್ಯಗಳಲ್ಲೂ ಇದೇ ಮಾದರಿಯ ಹೊಸ ಯೋಜನೆಗಳ ಕುರಿತು ಅಧ್ಯಯನ ನಡೆಸಿ ರಾಜ್ಯದಲ್ಲಿ ಜಾರಿಗೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ವಾಸ್ತವವಾಗಿ, ಸರ್ಕಾರಗಳು ಎನ್‌ಪಿಎಸ್ ಅನ್ನು ಹೆಚ್ಚು ಆಕರ್ಷಕವಾಗಿರುವಂತೆ ಮಾಡಲು ಪ್ರಯತ್ನಿಸುತ್ತಿವೆ. ಕೇಂದ್ರ ಸರ್ಕಾರವು ತನ್ನ ವಂತಿಗೆಯನ್ನು ಶೇ.10 ರಿಂದ ಶೇ.14ಕ್ಕೆ ಹೆಚ್ಚಿಸಿದ ಮತ್ತು ಇದನ್ನು ಕೆಲ ರಾಜ್ಯ ಸರ್ಕಾರಗಳು ಅನುಕರಿಸುತ್ತಿದ್ದು, ವಾಸ್ತವವಾಗಿ ಇದನ್ನು ಎಲ್ಲಾ ಸರ್ಕಾರಿ ನೌಕರರು ಅಳವಡಿಸಿಕೊಳ್ಳಬೇಕು. ಅಲ್ಲದೆ ನೌಕರರಿಗೆ ತಮ್ಮ ನಿಧಿ ನಿರ್ವಾಹಕರನ್ನು ಮತ್ತು ಸ್ವತ್ತಿನ ಹಂಚಿಕೆಯನ್ನು ಆಯ್ಕೆ ಮಾಡಿಕೊಳ್ಳಲು ಸಹ ಅನುಮತಿಸಲಾಗಿದೆ. ಅಲ್ಲದೆ ಪಿಎಫ್‌ಆರ್‌ಡಿಎಯು ದಿನಾಂಕ 27.10.2023ರಂದು ಸುತ್ತೋಲೆಯೊಂದನ್ನು ಹೊರಡಿಸಿ ಎನ್‌ಪಿಎಸ್ ಚಂದಾದಾರರು ಅವರ ಆಯ್ಕೆಯಂತೆ ಅವರ ಸಂಚಿತ ಪಿಂಚಣಿಯ ಮೊತ್ತದ ಶೇ.60 ರಷ್ಟನ್ನು ಮಾಸಿಕವಾಗಿ, ತ್ರೈಮಾಸಿಕವಾಗಿ, ಆರು ತಿಂಗಳಿಗೆ ಅಥವಾ ವಾರ್ಷಿಕ ಆಧಾರದ ಮೇಲೆ 75 ವರ್ಷ ವಯಸ್ಸಿನವರೆಗೆ SLW facility ಮೂಲಕ ಹಿಂತೆಗೆದುಕೊಳ್ಳಬಹುದಾಗಿ ತಿಳಿಸಿರುತ್ತದೆ.
ಬಹುಶ: ಪಿಎಫ್‌ಆರ್‌ಡಿಎ ನಿರ್ಧರಿಸಿದ ಎನ್‌ಪಿಎಸ್ ಅಥವಾ ತಮ್ಮದೆ ಸ್ವಂತ ಯೋಜನೆಯನ್ನು ರೂಪಿಸುವ ಆಯ್ಕೆ ಮಾಡಲು ರಾಜ್ಯಗಳಿಗೆ ಅವಕಾಶ ನೀಡುವ ಅವಶ್ಯಕತೆಯಿದೆ. ಉದಾಹರಣೆಗೆ ಆಂಧ್ರ ಪ್ರದೇಶವು ಮಿಶ್ರ ಯೋಜನೆಯೊಂದನ್ನು ಪರಿಚಯಿಸಿದ್ದು, ಅದು, ವಂತಿಗೆ ಖಾತರಿ ಪಿಂಚಣಿ ಯೋಜನೆ (ಜಿಪಿಎಸ್) ಯಾಗಿದ್ದು, ನೌಕರನು ಪಡೆಯುವ ಅಂತಿಮ ವೇತನದ ಅಂದಾಜು ಶೇ.50 ಪಿಂಚಣಿ ಪ್ರಮಾಣದ ಖಾತ್ರಿಯ ಮೂಲಕ ನಡುವಿನ ದಾರಿಯನ್ನು ತೋರಿಸುತ್ತದೆ. ಇದರಲ್ಲಿ ಯಾವುದೇ ಕೊರತೆ ಉಂಟಾದಲ್ಲಿ ಆ ಕೊರತೆಯನ್ನು ರಾಜ್ಯ ಸರ್ಕಾರವು ಭರಿಸುತ್ತದೆ. ಒಂದು ಅಂದಾಜಿನ ಲೆಕ್ಕಾಚಾರವು ಸೂಚಿಸುವಂತೆ, ಕೇಂದ್ರ ಸರ್ಕಾರದ ಯೋಜನೆಯ ಅನುಸಾರ, ನೌಕರನು ಅಂತಿಮವಾಗಿ ಪಡೆಯುವ ವೇತನದ ಶೇ.40 ರಷ್ಟು ಎನ್‌ಪಿಎಸ್ ಪಿಂಚಣಿಯಾಗಿರುತ್ತದೆ. ಆಂಧ್ರ ಪ್ರದೇಶದ ಮಿಶ್ರ ಯೋಜನೆಯ ಅಡಿಯಲ್ಲಿ ನೌಕರನು ಪಡೆಯುವ ಅಂತಿಮ ವೇತನದ ಶೇ.50 ರಷ್ಟು ಪಿಂಚಣಿಯನ್ನು ಖಾತ್ರಿ ಪಡಿಸಲು ರಾಜ್ಯ ಸರ್ಕಾರವು ಕೇವಲ ಉಳಿದ ಶೇ.10 ರಷ್ಟು ಮೊತ್ತವನ್ನು ಭರಿಸುವುದು ಅಗತ್ಯವಾಗಿರುತ್ತದೆ.
ಸರ್ಕಾರಿ ನೌಕರರಿಗೆ ಓಪಿಎಸ್ ಮರುಜಾರಿಗೊಳಿಸುವ ವಿಷಯವನ್ನು ಅಧ್ಯಯನ ಮಾಡುವುದಕ್ಕೆ ಕರ್ನಾಟಕವು ಪ್ರತ್ಯೇಕ ಸಮಿತಿಯೊಂದನ್ನು ರಚಿಸಿದೆ. ಇದನ್ನು ಗಮನಿಸಿರುವ ಆಯೋಗವು ಈ ವಿಷಯದ ಮೇಲೆ ಯಾವುದೇ ಶಿಫಾರಸ್ಸುಗಳನ್ನು ಮಾಡುವುದು ಸೂಕ್ತವಲ್ಲ ಎಂದು ಭಾವಿಸುತ್ತದೆ. ಆದರಿಂದ, ರಾಜ್ಯ ಸರ್ಕಾರವು ಈ ವಿಷಯವನ್ನು ಪರಿಶೀಲಿಸುವ ಮತ್ತು ಸಾಧ್ಯವಾದಷ್ಟು ಬೇಗ ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳುವ ಅಗತ್ಯವಿರುತ್ತದೆ ಎಂಬ ಅಭಿಪ್ರಾಯದೊಂದಿಗೆ ಎನ್‌ಪಿಎಸ್‌ಗೆ ಸಂಬಂಧಿಸಿದ ಎಲ್ಲಾ ಮನವಿಗಳನ್ನು ರಾಜ್ಯ ಹಣಕಾಸು ಇಲಾಖೆಗೆ ಕಳುಹಿಸಿದೆ ಎಂದು ಆಯೋಗ ಹೇಳಿದೆ.












Click it and Unblock the Notifications