7th Pay Commission: ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ
ಬೆಂಗಳೂರು, ಫೆಬ್ರವರಿ 26: 7 ನೇ ವೇತನ ಆಯೋಗ ಜಾರಿಗೆ ನಿರೀಕ್ಷೆಯಲ್ಲಿದ್ದ ಸರ್ಕಾರ ನೌಕರರಿಗೆ ಸಿದ್ದರಾಮಯ್ಯ ಸರ್ಕಾರ ಸಿಹಿ ಸುದ್ದಿ ಸಿಕ್ಕಿದೆ. ಈಗಾಗಲೇ ರಾಜ್ಯ ಸರ್ಕಾರ 2024-25 ನೇ ಸಾಲಿನ ನೌಕರರ ವೇತನ ಬಾಬ್ತಿಗೆ ಹೆಚ್ಚುವರಿಯಾಗಿ 15,431 ಕೋಟಿ ಅನುದಾನ ಹಂಚಿಕೆ ಮಾಡಿದೆ.
ಹೌದು, ರಾಜ್ಯ ಸರಕಾರವು 15,431 ಕೋಟಿ ರೂ. ಅನುದಾನ ಹಂಚಿಕೆ ಮಾಡಿರುವುದರಿಂದ 7ನೇ ವೇತನ ಆಯೋಗದ ವರದಿ ಜಾರಿಯಾಗಬಹುದೆಂಬ ನಿರೀಕ್ಷೆಯನ್ನು ಸರಕಾರಿ ನೌಕರರಲ್ಲಿ ಹುಟ್ಟುಹಾಕಿದೆ. ಆದರೆ, 7ನೇ ವೇತನ ಆಯೋಗದ ವರದಿ ಜಾರಿಯಾದರೆ ಮುಂದಿನ ಆರ್ಥಿಕ ವರ್ಷದಲ್ಲಿ ಖಾಲಿ ಹುದ್ದೆ ನೇಮಕಾತಿ ಪ್ರಕ್ರಿಯೆ ನಡೆಯುವುದು ಅನುಮಾನ ಎಂದು ಸರಕಾರದ ಉನ್ನತ ಮೂಲಗಳು ತಿಳಿಸಿವೆ.

ಇನ್ನೂ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ್ದ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿರುವ ರಾಜ್ಯ ಸರ್ಕಾರಕ್ಕೆ ಇತರೆ ವೆಚ್ಚಗಳಿಗೆ ಹಣ ಹೊಂದಿಸುವುದು ಸವಾಲಾಗಿ ಎಂದು ಹೇಳಲಾಗಿದೆ. ಇತ್ತ ಸರ್ಕಾರ ಪ್ರತಿಯೊಂದು ವೆಚ್ಚಕ್ಕೂ ಅಳೆದು ಅನುದಾನ ನೀಡುತ್ತಿದೆ.
ಹೀಗಿರುವಾಗ ಸರ್ಕಾರಿ ನೌಕರರ ವೇತನ, ಪಿಂಚಣಿ ಬಾಬ್ರಿಗೆ ಮುಂದಿನ ವರ್ಷ ಹೆಚ್ಚುವರಿ ಹಣ ಹೊಂದಿಸಿರುವುದು ಗಮನ ಸೆಳೆದಿದೆ.ಇತ್ತ ಪ್ರಸಕ್ತ 2023-24ನೇ ಸಾಲಿನಲ್ಲಿ ಮಾರ್ಚ್ 31 ರವರೆಗೆ ನೌಕರರ ವೇತನ ಬಾಬ್ರಿಗೆ 65,003 ಕೋಟಿ ರೂ. ವೆಚ್ಚದ ಅಂದಾಜಿದೆ.
ಆದರೆ ಮುಂದಿನ ಆರ್ಥಿಕ ವರ್ಷದಲ್ಲಿ ಸರಕಾರಿ ನೌಕರರಿಗೆ ವೇತನ ಪಾವತಿಗೆ 80,434 ಕೋಟಿ ರೂ. ವಿನಿಯೋಗಿಸುವುದಾಗಿ ಅಂದಾಜಿಸಲಾಗಿದೆ. ಅಂದರೆ ಮುಂದಿನ ವರ್ಷ ನೌಕರರ ವೇತನಕ್ಕಾಗಿ ಹೆಚ್ಚುವರಿಯಾಗಿ 15,431 ಕೋಟಿ ರೂ. ವೆಚ್ಚ ಮಾಡುವುದಾಗಿ ಉಲ್ಲೇಖಿಸಲಾಗಿದೆ.
ಗ್ಯಾರಂಟಿ ಯೋಜನೆಗಳಿಗೆ ಅಗತ್ಯ ಅನುದಾನ ಒದಗಿಸು ವುದು ಸೇರಿದಂತೆ ಬದ್ಧತಾ ವೆಚ್ಚಗಳಿಗೂ ಯಶಸ್ವಿಯಾಗಿ ಸರಕಾರ ಹಣ ಹೊಂದಿಸಿದೆ. ಸರಕಾರಿ ನೌಕರರ ವೇತನ, ಪಿಂಚಣಿ ಬಾಬ್ರಿಗೆ ಹೆಚ್ಚುವರಿ ಹಣ ಕಾಯ್ದಿರಿಸುವುದನ್ನು ಗಮನಿಸಿದರೆ ವೇತನ ಆಯೋಗದ ವರದಿ ಅನುಷ್ಠಾನದ ಸಾಧ್ಯತೆ ಹೆಚ್ಚಾಗಿರುವಂತಿದೆ ಎಂದು ಮೂಲಗಳು ತಿಳಿಸಿವೆ.
ಸರಕಾರ ಈ ಹೆಚ್ಚುವರಿ ಹಣವನ್ನು ಎರಡು ಪ್ರಮುಖ ಅಂಶಗಳ ಪೈಕಿ ಒಂದಕ್ಕಷ್ಟೇ ವಿನಿಯೋಗಿಸುವುದು ಸ್ಪಷ್ಟ. ಮೊದಲಿಗೆ 7ನೇ ವೇತನ ಆಯೋಗದ ವರದಿ ಅನುಷ್ಠಾನವಾಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ. ಏಕೆಂದರೆ ವರದಿ ಅನುಷ್ಠಾನವಾದರೆ ವೇತನ ಶ್ರೇಣಿಯಲ್ಲಿನ ಹೆಚ್ಚಳ ಆಧರಿಸಿ ಮೊದಲ ವರ್ಷದಲ್ಲೇ 15,000 ಕೋಟಿ ರೂ.ನಿಂದ 20,000 ಕೋಟಿ ರೂ. ಬೇಕಾಗಲಿದೆ ಎಂದು ಅಂದಾಜಿಸಿದೆ. ಈ ಬಗ್ಗೆ 2024-28ನೇ ಮಧ್ಯಮಾವಧಿ ವಿತ್ತೀಯ ಯೋಜನೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
2023-24ನೇ ಸಾಲಿನಲ್ಲಿ ಪಿಂಚಣಿಗಾಗಿ 25,116 ಕೋಟಿ ರೂ. ಕಾಯ್ದಿರಿಸಿದ್ದರೆ, 2024-25ನೇ ಆರ್ಥಿಕ ವರ್ಷದಲ್ಲಿ 32,355 ಕೋಟಿ ರೂ. ವೆಚ್ಚದ ಅಂದಾಜಿದೆ. ಒಟ್ಟಾರೆ ಸರಕಾರಿ ನೌಕರರ ವೇತನ ಹಾಗೂ ಪಿಂಚಣಿಗೆ ಮುಂದಿನ ವರ್ಷ ಹೆಚ್ಚುವರಿಯಾಗಿ 22,670 ಕೋಟಿ ರೂ. ಹಂಚಿಕೆ ಮಾಡಿರುವುದು ವೇತನ ಆಯೋಗದ ವರದಿ ಅನುಷ್ಠಾನ ಸನ್ನಿಹಿತ ಎನಿಸಿದೆ.
ಖಾಲಿ ಹುದ್ದೆಗಳೇಷ್ಟು ಗೊತ್ತಾ?
ರಾಜ್ಯದಲ್ಲಿ 7.21 ಲಕ್ಷ ಸರಕಾರಿ ಮಂಜೂರಾದ ಹುದ್ದೆಗಳಿವೆ. ಈ ಹುದ್ದೆಗಳಲ್ಲಿ ಸದ್ಯ 2.53 ಲಕ್ಷ ಹುದ್ದೆ ಖಾಲಿ ಇವೆ. ಸರಕಾರ ವೇತನ ಆಯೋಗದ ವರದಿ ಜಾರಿಗೊಳಿಸದಿದ್ದರೆ ಖಾಲಿ ಹುದ್ದೆ ನೇಮಕಾತಿಯನ್ನು ದೊಡ್ಡ ಪ್ರಮಾಣದಲ್ಲಿ ಕೈಗೊಂಡು ವೇತನ, ಇತರೆ ವೆಚ್ಚಕ್ಕೆ ಹೆಚ್ಚುವರಿ ಹಣ ಬಳಸುತ್ತದೆ ಎಂದು ಭಾವಿಸಬೇಕಾಗುತ್ತದೆ. ಖಾಲಿ ಹುದ್ದೆ ಮಾತ್ರವಲ್ಲದೇ, ಆಗಾಗ್ಗೆ ನಿವೃತ್ತಿಯಿಂದ ತೆರವಾಗುವ ಹುದ್ದೆಗಳ ಭರ್ತಿ ಸಾಧ್ಯತೆಯೂ ಕಡಿಮೆ ಎನ್ನಬಹುದಾಗಿದೆ.












Click it and Unblock the Notifications