5 ಕ್ಷೇತ್ರಗಳ ಉಪ ಚುನಾವಣೆ : ಶೇ 65.57 ರಷ್ಟು ಮತದಾನ
ಬೆಂಗಳೂರು, ನವೆಂಬರ್ 04 : 5 ಕ್ಷೇತ್ರಗಳ ಉಪ ಚುನಾವಣೆ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. 3 ಲೋಕಸಭಾ ಕ್ಷೇತ್ರ ಮತ್ತು 2 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 65.57ರಷ್ಟು ಮತದಾನ ನಡೆದಿದೆ.
ಬಳ್ಳಾರಿ, ಶಿವಮೊಗ್ಗ, ಮಂಡ್ಯ ಲೋಕಸಭಾ ಕ್ಷೇತ್ರ ಮತ್ತು ಜಮಖಂಡಿ, ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮತದಾನ ನವೆಂಬರ್ 3ರ ಶನಿವಾರ ನಡೆಯಿತು. ಶಾಂತಿಯುತವಾಗಿ ಮತದಾನ ನಡೆದಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ.
ಜಮಖಂಡಿಯಲ್ಲಿ ಅತಿ ಹೆಚ್ಚು ಅಂದರೆ 81.58 ಮತ್ತು ಮಂಡ್ಯದಲ್ಲಿ ಅತಿ ಕಡಿಮೆ ಎಂದರೆ 53.93 ರಷ್ಟು ಮತದಾನವಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ಈಗ ಯಾರು ಗೆಲ್ಲುತ್ತಾರೆ?, ಎಷ್ಟು ಮತಗಳ ಅಂತರದಲ್ಲಿ ಗೆಲ್ಲುತ್ತಾರೆ? ಎಂದು ಲೆಕ್ಕಾಚಾರ ಆರಂಭವಾಗಿದೆ.

ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಯಾಗಿ ಸರ್ಕಾರ ನಡೆಸುತ್ತಿವೆ. ಉಪ ಚುನಾವಣೆಯಲ್ಲಿಯೂ ಮೈತ್ರಿ ಮಾಡಿಕೊಂಡು ಮಂಡ್ಯ, ಶಿವಮೊಗ್ಗ, ರಾಮನಗರದಲ್ಲಿ ಜೆಡಿಎಸ್ ಮತ್ತು ಬಳ್ಳಾರಿ, ಜಮಖಂಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಉಪ ಚುನಾವಣೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗೆ ಕಾರಣವಾಗುವ ಸಾಧ್ಯತೆ ಇದೆ. ನವೆಂಬರ್ 6ರ ಮಂಗಳವಾರ ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಯಾರಿಗೆ ದೀಪಾವಳಿ ಉಡುಗೊರೆ ಸಿಗಲಿದೆ? ಎಂದು ಕಾದು ನೋಡಬೇಕು.
ಮತದಾನದ ವಿವರ
* ಜಮಖಂಡಿ ವಿಧಾನಸಭಾ ಕ್ಷೇತ್ರ - 81.58
* ರಾಮನಗರ ವಿಧಾನಸಭಾ ಕ್ಷೇತ್ರ - 73.71
* ಬಳ್ಳಾರಿ ಲೋಕಸಭಾ ಕ್ಷೇತ್ರ 63.85
* ಶಿವಮೊಗ್ಗ ಲೋಕಸಭಾ ಕ್ಷೇತ್ರ 61.05
* ಮಂಡ್ಯ ಲೋಕಸಭಾ ಕ್ಷೇತ್ರ 53.93












Click it and Unblock the Notifications