42 ಕೋಟಿ ಹಿಂದಿರುವ ‘ಕೈ’ಗಳನ್ನು ಪತ್ತೆ ಮಾಡಲು ಸಿಬಿಐ ತನಿಖೆ: ಡಿ.ವಿ.ಸದಾನಂದಗೌಡ ಆಗ್ರಹ
ಬೆಂಗಳೂರು,ಅಕ್ಟೋಬರ್ 17: ಗುತ್ತಿಗೆದಾರರ ಮನೆಯಲ್ಲಿ ಸಿಕ್ಕಿದ ಹಣದ ಕುರಿತ ಪರದೇ ಕೆ ಪೀಛೇ ಇರುವ ಕಾಂಗ್ರೆಸ್ ಕೈಗಳನ್ನು ಹೊರಕ್ಕೆ ತರಲು ಸಿಬಿಐ ಈ ಪ್ರಕರಣದ ತನಿಖೆಯನ್ನು ಸ್ವಯಂಪ್ರೇರಿತವಾಗಿ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದಗೌಡ ಆಗ್ರಹಿಸಿದರು.
ಈ ಕುರಿತು ಮಂಗಳವಾರ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬಿಜೆಪಿ ವತಿಯಿಂದ ಇಂದು ನಡೆದ ಬೃಹತ್ ಪ್ರತಿಭಟನೆಯ ಸಂದರ್ಭದಲ್ಲಿ ಅವರು ಮಾತನಾಡಿ, ಕಾಂಗ್ರೆಸ್ಸಿನ ಮುಖವಾಡ ಕಳಚುವ ಕೆಲಸ ಆಗಬೇಕು. ಇಡೀ ದೇಶಕ್ಕೆ ಒಂದು ಸಂದೇಶ ಕೊಡುವ ಕೆಲಸ ಆಗಲಿ ಎಂದು ಅವರು ಆಶಿಸಿದರು. ಸರಕಾರ 650 ಕೋಟಿ ಕೊಟ್ಟದ್ದಕ್ಕೆ ಪ್ರತಿಯಾಗಿ ಕಮಿಷನ್ ರೂಪದಲ್ಲಿ ಗುತ್ತಿಗೆದಾರರು ಹಣ ನೀಡಿದ್ದಾರೆ. ಇದರಲ್ಲಿ ಒಂದಷ್ಟು ಮೊತ್ತ ಈಗಾಗಲೇ ಬೇರೆಬೇರೆ ರಾಜ್ಯಗಳಿಗೆ ಕಳಿಸಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಮುಕ್ತ ಭಾರತ ಮಾಡುವ ಸಂಕಲ್ಪದಲ್ಲಿ ಒಂದಷ್ಟು ಹಂತವನ್ನು ನಾವು ತಲುಪಿದ್ದೇವೆ. ಆಸೆ, ಆಮಿಷ ತೋರಿಸಿ ಜನರ ಹಾದಿ ತಪ್ಪಿಸಿ ಚುನಾವಣೆಯಲ್ಲಿ ಅಧಿಕಾರ ಪಡೆದ ಕಾಂಗ್ರೆಸ್ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿದೆ ಎಂದು ತಿಳಿಸಿದರು. ರಾಜ್ಯದ ಪರಿಸ್ಥಿತಿ ಅಧೋಗತಿಗೆ ಬಂದ ಬಗ್ಗೆ ಬಿಜೆಪಿಯ ನಮಗೆಲ್ಲರಿಗೂ ನೋವಿದೆ. ದೇಶದೆಲ್ಲೆಡೆ ಜನರು ಕರ್ನಾಟಕದ ಬಗ್ಗೆ ನಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಭ್ರಷ್ಟಾಚಾರ, ಲೂಟಿ ಕಾಂಗ್ರೆಸ್ಸಿನ ರಕ್ತದಲ್ಲಿದೆ. ಕಾಂಗ್ರೆಸ್, ರಾಜ್ಯದ ಅಭಿವೃದ್ಧಿಗೆ ಅನ್ಯಾಯ ಮಾಡುತ್ತಿದೆ. ಅಂಬಿಕಾಪತಿಗೆ 42 ಕೋಟಿ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ ಅವರು, ಈ ಪ್ರಕರಣವನ್ನು ಮುಚ್ಚಿಹಾಕಲು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ನಮ್ಮ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ. ಅತ್ಯಂತ ನೋವಿನ ಸ್ಥಿತಿಯಲ್ಲಿರುವ ರಾಜ್ಯದ ಜನರ ಪರವಾಗಿ ಬಿಜೆಪಿ ನಿಲ್ಲಲಿದೆ ಎಂದು ಅವರು ತಿಳಿಸಿದರು. ಮಹಿಳೆಯರಿಗೆ ನೀಡುವ 2 ಸಾವಿರ ರೂಪಾಯಿ ಹಣ ರಾಜ್ಯದ ಅರ್ಧದಷ್ಟು ಜನರಿಗೆ ಸಿಕ್ಕಿಲ್ಲ. ಹಣ ಸಿಕ್ಕಿದ ವಿಷಯವೂ ತನಿಖೆಗೆ ಯೋಗ್ಯವಾಗಿದೆ; ಅದು ಇವರ ಜೋಬಿಗೆ ಹೋಗಿರುವ ಸಾಧ್ಯತೆ ಇದೆ. ಹಣ ಲೂಟಿ ಹೊಡೆಯಲೆಂದೇ 5 ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ಈ ಪ್ರತಿಭಟನೆಯಲ್ಲಿ ರಾಜ್ಯದ ಮಾಜಿ ಸಚಿವಸಿ.ಎನ್.ಅಶ್ವತ್ಥ್‍ನಾರಾಯಣ್, ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಮುಖಂಡರಾದ ನೆ.ಲ.ನರೇಂದ್ರ ಬಾಬು, ಭಾಸ್ಕರ ರಾವ್, ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ನಗರ ಜಿಲ್ಲಾ ಅಧ್ಯಕ್ಷರಾದ ಮಂಜುನಾಥ ಜಿ, ನಾರಾಯಣ ಗೌಡ, ಪಕ್ಷದ ಮುಖಂಡರು, ಕಾರ್ಯ ಕರ್ತರು ಭಾಗವಹಿಸಿದ್ದರು.












Click it and Unblock the Notifications