30 ಬಿಜೆಪಿ ಶಾಸಕರು ಜೆಡಿಎಸ್ ಸೇರಲು ಕಾಯುತ್ತಿದ್ದಾರೆ: ರೇವಣ್ಣ
ಬೆಂಗಳೂರು, ಆಗಸ್ಟ್ 10: 30 ಜನ ಬಿಜೆಪಿ ಶಾಸಕರು ನಮ್ಮ ಜೊತೆ ಸಂಪರ್ಕದಲ್ಲಿದ್ದು ಜೆಡಿಎಸ್ ಸೇರ್ಪಡೆಗೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಲೋಕೋಪಯೋಗಿ ಸಚಿವ ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ಮನ ನೋಯಿಸಲು ಇಷ್ಟವಿಲ್ಲದೆ ಅವರನ್ನು ನಾವೇ ತಡೆದಿದ್ದೇವೆ ಎಂದು ಅವರು ಹೇಳಿದ್ದಾರೆ.
'ಯಡಿಯೂರಪ್ಪ ಅವರ ಆರೋಗ್ಯ ಸರಿಯಿಲ್ಲ, ನೀವು ಇತ್ತ ಬಂದರೆ ಅವರಿಗೆ ಆಘಾತವಾಗುತ್ತದೆ, ನಾವೇ ಹೇಳುತ್ತೇವೆ ಆಗ ಬರುವಿರಂತೆ' ಎಂದು ಹೇಳಿ ಜೆಡಿಎಸ್ ನವರೆ ಬಿಜೆಪಿ ಶಾಸಕರನ್ನು ಪಕ್ಷಾಂತರ ಮಾಡದೆ ತಡೆದಿದ್ದಾರಂತೆ.

ಎ ಟೀಮ್ ಬಿ ಟೀಮ್ ಹೇಳಿಕೆಯಿಂದ ಪೆಟ್ಟು
ವಿಧಾನಸಭೆ ಚುನಾವಣೆ ಪ್ರಚಾರ ಸಮಯದಲ್ಲಿ ಕಾಂಗ್ರೆಸ್‌ನವರು ಎ ಟೀಮ್, ಬಿ ಟೀಮ್ ಎಂದು ಅಪಪ್ರಚಾರ ಮಾಡದೇ ಇದ್ದಿದ್ದರೆ ಬಿಜೆಪಿಗೆ 30 ಸೀಟು ಕಡಿಮೆ ಆಗಿ, ಜೆಡಿಎಸ್‌ನ 30 ಸೀಟುಗಳು ಹೆಚ್ಚಾಗಿರುತ್ತಿದ್ದವು ಎಂದು ಅವರು ಕೈ-ಕೈ ಹಿಸುಕಿಕೊಂಡರು.

ಬೆಳಗಾವಿಯನ್ನು ಕೆ-ಶಿಪ್ ಕೆಲಸ ಮುಗಿದಿತ್ತು
ಕೆ-ಶಿಪ್ ಕಚೇರಿಯನ್ನು ಬೆಳಗಾವಿಯಿಂದ ಹಾಸನಕ್ಕೆ ವರ್ಗಾಯಿಸಿದ ಬಗ್ಗೆ ಮಾತನಾಡಿದ ರೇವಣ್ಣ, ಬೆಳಗಾವಿಯಲ್ಲಿ ಅದರ ಕೆಲಸ ಮುಗಿದಿತ್ತು ಹಾಗಾಗಿ ಅದನ್ನು ಹಾಸನದ ಸಕಲೇಶಪುರಕ್ಕೆ ವರ್ಗಾಯಿಸಲಾಗಿದೆ ಎಂದು ಅವರು ಹೇಳಿದರು.

670 ಕೋಟಿ ಮೌಲ್ಯದ ಕೆಲಸ
ಕೆ-ಶಿಪ್ ಕಚೇರಿ ಸ್ಥಳಾಂತರಿಸುವಂತೆ ವಿಶ್ವಬ್ಯಾಂಕ್ ಕೆಲವು ತಿಂಗಳುಗಳ ಹಿಂದೆಯೇ ಪತ್ರ ಬರೆದಿತ್ತು. ಅದರಂತೆ ಈಗ ಸ್ಥಳಾಂತರಿಸಲಾಗಿದೆ. ಕೆ-ಶಿಪ್‌ನ ಈಗಿನ ಕಚೇರಿಯಲ್ಲಿ 670 ಕೋಟಿ ಮೌಲ್ಯದ ಕೆಲಸಗಳು ನಡೆಯುತ್ತಿವೆ. ಬಿಜೆಪಿಯವರು ಮಾಹಿತಿ ತಿಳಿದುಕೊಳ್ಳದೆ ಆರೋಪ ಮಾಡುತ್ತಾರೆ ಎಂದು ಅವರು ಹರಿಹಾಯ್ದರು.

ಬಿಜೆಪಿಯಿಂದ ತೀವ್ರ ವಿರೋಧ
ಬೆಳಗಾವಿಯಲ್ಲಿದ್ದ ಕೆ-ಶಿಪ್ ಕಚೇರಿಯನ್ನು ಹಾಸನದ ಸಕಲೇಶಪುರಕ್ಕೆ ವರ್ಗಾಯಿಸಿದ ಬಗ್ಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಉತ್ತರ ಕರ್ನಾಟಕ ಅಭಿವೃದ್ಧಿ ಮಾಡುತ್ತೇನೆ ಎಂದು ಕೆಲವು ದಿನಗಳ ಹಿಂದೆಯಷ್ಟೆ ಹೇಳಿ ಈಗ ಮತ್ತೆ ತಮ್ಮ ಜಿಲ್ಲೆಯ ಅಭಿವೃದ್ಧಿಗಾಗಿ ಕೆ-ಶಿಪ್ ಕಚೇರಿಯನ್ನು ಸ್ಥಳಾಂತರಿಸಲಾಗಿದೆ ಎಂದು ಬಿಜೆಪಿ ಆರೋಪ ಮಾಡಿತ್ತು.












Click it and Unblock the Notifications