ತಮಿಳುನಾಡಿಗೆ 3,000 ಕ್ಯೂಸೆಕ್ಸ್ ಹೆಚ್ಚುವರಿ ನೀರು ಬಿಡುಗಡೆ
ಬೆಂಗಳೂರು, ಜುಲೈ 29: ರೈತರ ವಿರೋಧದ ನಡುವೆಯೇ ಕೆಆರ್ಎಸ್ ಅಣೆಕಟ್ಟಿನಿಂದ ತಮಿಳುನಾಡಿಗೆ ಸೋಮವಾರ ಹೆಚ್ಚುವರಿ ನೀರು ಹರಿಸಲಾಗಿದೆ.
ಮೂರು ಸಾವಿರ ಕ್ಯೂಸೆಕ್‌ನಷ್ಟು ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಲಾಗಿದೆ. ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಕಡಿಮೆ ಇದ್ದು, ಕೆಆರ್ಎಸ್ ಜಲಾಶಯಕ್ಕೆ ನೀರಿನ ಒಳಹರಿವು ಕಡಿಮೆಯಾಗುತ್ತಿದ್ದರೂ, ಹೊರಹರಿವನ್ನು ಹೆಚ್ಚಿಸಲಾಗಿದೆ.
ಜಲಾಶಯದ ಒಳಹರಿವು 3,741 ಕ್ಯೂಸೆಕ್‌ನಷ್ಟಿದ್ದು, 7,883ರಷ್ಟಿದ್ದ ಹೊರಹರಿವನ್ನು 10,129 ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ. ಸುಮಾರು ಮೂರು ಸಾವಿರ ಕ್ಯೂಸೆಕ್‌ನಷ್ಟು ನೀರನ್ನು ಹೆಚ್ಚುವರಿಯಾಗಿ ಹರಿಬಿಡಲಾಗುತ್ತಿದೆ.

ಕೆಆರ್ಎಸ್ ಜಲಾಶಯದ ಮಟ್ಟ 124.80 ಅಡಿಗಳಷ್ಟಿದ್ದು, ಈಗ ಕೇವಲ 85.76 ಅಡಿಯಷ್ಟು ನೀರು ಇದೆ. ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ.
ಒಂದು ವಾರದಲ್ಲಿ ತಮಿಳುನಾಡಿಗೆ ಸುಮಾರು 2 ಟಿಎಂಸಿ ನೀರು ಹರಿಸಲಾಗಿದೆ. ವಿರಿಜಾ, ಸಿಡಿಎಸ್, ರಾಜಪರಮೇಶ್ವರಿ, ರಾಮಸ್ವಾಮಿ, ಮಾಧವಮಂತ್ರಿ ನಾಲೆಗಳಿಗೆ ಒಂದು ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಉಳಿದ ನೀರನ್ನು ವಿಶ್ವೇಶ್ವರಯ್ಯ ನಾಲೆ, ಬಲದಂಡೆ ನಾಲೆ ಮತ್ತು ಎಡದಂಡೆ ನಾಲೆಗೆ ಹರಿಸಲಾಗುತ್ತಿದೆ.











Click it and Unblock the Notifications