ಇಂದಿರಾಗಾಂಧಿ, ರಾಜೀವ್ ಗಾಂಧಿ, ಅಲ್ಲಿನ ಶೌಚಾಲಯಕ್ಕೆ ಅವರದೇ ಕುಟುಂಬದ ಇನ್ಯಾರದೋ ಹೆಸರು: ಬಿ ಎಲ್ ಸಂತೋಷ್ ಕಿಡಿ
ಬೆಂಗಳೂರು, ಆಗಸ್ಟ್ 18: ವಿಮಾನನಿಲ್ದಾಣ ಇಂದಿರಾಗಾಂಧಿ, ಕ್ರಾಸ್ ರೋಡ್ ರಾಜೀವ್ ಗಾಂಧಿ, ಗಲ್ಲಿ ಜವಾಹರಲಾಲ್ ನೆಹರೂ, ಅಲ್ಲಿನ ಶೌಚಾಲಯಕ್ಕೆ ಅವರದೇ ಕುಟುಂಬದ ಇನ್ಯಾರದೋ ಹೆಸರು. ಇಂದಿರಾ ನಗರ, ರಾಜೀವ್ ನಗರ, 297 ರಾಷ್ಟ್ರೀಯ ಮಟ್ಟದ ಸಂಸ್ಥೆಗಳಿಗೆ ಅವರದೇ 4 ಜನರ ಹೆಸರು ಇಡಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಅವರು ಹೇಳಿದರು.
ಮಾಜಿ ಪ್ರಧಾನಮಂತ್ರಿ, ಭಾರತರತ್ನ ದಿ. ಅಟಲ್ ಬಿಹಾರಿ ವಾಜಪೇಯಿ ಅವರ "ಅಟಲ್ ಜೀ ಅವರ ಜನ್ಮ ಶತಮಾನೋತ್ಸವದ ಸ್ಮರಣ ಸಂಚಿಕೆ ಲೋಕಾರ್ಪಣೆ" ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಬಿ ಎಲ್ ಸಂತೋಷ್ ಅವರು, 100ಕ್ಕಿಂತ ಜಾಸ್ತಿ ಯೋಜನೆಗಳಿಗೆ ಅವರದೇ ಹೆಸರು ಸ್ಮರಿಸಬೇಕಿದೆ. ದೇವರ ಹೆಸರು ಇಟ್ಟಿದ್ದರೆ ಸ್ಮರಣೆ ಮಾಡಿದರೆ ನಮಗೆ ಪುಣ್ಯವಾದರೂ ಬರುತ್ತಿತ್ತೇನೋ ಎಂದು ಬಿ.ಎಲ್. ಸಂತೋಷ ಅವರು ತಿಳಿಸಿದರು. ಆದರೆ, ಅಟಲ್‍ಜೀ, ಮೋದಿಯವರ ಹೆಸರಿನಲ್ಲಿ ಎಲ್ಲೂ ಯೋಜನೆಗಳಿಲ್ಲ. ನಮ್ಮ ಪ್ರಧಾನಿಗಳು, ಮುಖ್ಯಮಂತ್ರಿಗಳು ತಮ್ಮ ಹೆಸರನ್ನು ಹಾಕಿಕೊಂಡಿಲ್ಲ ಎಂದು ತಿಳಿಸಿದರು.

ಸಚಿವರಾಗಬೇಕೆಂಬ ಹಪಾಹಪಿ ಇಲ್ಲದ ಶ್ರೇಷ್ಠ ವ್ಯಕ್ತಿತ್ವ ಅಟಲ್ ಜೀ ಅವರದಾಗಿತ್ತು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಅವರು ತಿಳಿಸಿದ್ದಾರೆ. ನಂಬಿರುವ ವಿಚಾರ, ಸಂಘಟನೆ, ಕಾರ್ಯಪದ್ಧತಿಯನ್ನು ಅವರು ಬದ್ಧತೆಯಿಂದ ನಿರ್ವಹಿಸಿದ್ದರು. ಬಿಜೆಪಿ 2 ಸಂಸದರನ್ನು ಹೊಂದಿದ್ದ ಸ್ಥಿತಿಯೂ ಇತ್ತು. ಈಗ ದೇಶದಲ್ಲಿ 22 ರಾಜ್ಯಗಳಲ್ಲಿ ಎನ್‍ಡಿಎ ಜೊತೆಗೂಡಿ ಅಧಿಕಾರ ಪಡೆದಿದೆ. ಅಟಲ್‍ಜೀ ಅವರ ಬುನಾದಿಯಿಂದ ಪಕ್ಷ ದೃಢವಾಗುತ್ತ ಸಾಗಿದೆ ಎಂದು ವಿಶ್ಲೇಷಿಸಿದರು. ಅವರು ನಮ್ಮ ಪಕ್ಷಕ್ಕೆ ಮೌಲ್ಯ, ವಿಚಾರಗಳ ಅಡಿಪಾಯವನ್ನು ಹಾಕಿದ್ದರು ಎಂದು ವಿವರಿಸಿದರು.
ಇದು ಬೈಟ್‍ಗಳ ಯುಗ. ಆದರೆ, ಯಾವಾಗ ಅಗತ್ಯವಿದೆಯೋ ಆಗ ಮಾತ್ರ ಮಾತನಾಡುವುದು ಅಟಲ್‍ಜೀ ಅವರಿಗೆ ಕರಗತ ಆಗಿತ್ತು. ಲೋಕಸಭಾ ಸದಸ್ಯ, ರಾಜ್ಯಸಭಾ ಸದಸ್ಯರಾಗಿ ಅವರು 1951ರಿಂದ 2018ರವರೆಗೆ ಹಲವು ದಶಕಗಳ ಕಾಲ ಕೆಲಸ ಮಾಡಿದ್ದರು ಎಂದು ನೆನಪಿಸಿದರು. ಚೌಕಟ್ಟುಗಳ ಜೊತೆ ಬಿಜೆಪಿ ಬೆಳೆಯುತ್ತ ಸಾಗಿದೆ ಎಂದು ವಿಶ್ಲೇಷಿಸಿದರು. ರಾಜ್ಯದಲ್ಲೂ ಕಮಲ ಚಿಹ್ನೆಯು ಅರಳಲಿದೆ ಎಂದು ವಿಶ್ವಾಸದಿಂದ ತಿಳಿಸಿದರು.
ಅಟಲ್ ಬಿಹಾರಿ ವಾಜಪೇಯಿ ಅವರ ನೀತಿಗಳು ಡಿಜಿಟಲ್ ಯುಗಕ್ಕೆ ಕಾರಣವಾದವು. ಗ್ರಾಮ ಸಡಕ್ ಯೋಜನೆ ಸೇರಿ ಅನೇಕ ಯೋಜನೆಗಳನ್ನು ಅವರು ಜಾರಿಗೊಳಿಸಿದ್ದರು. ಪೋಖ್ರಾಣ್ ಅಣ್ವಸ್ತ್ರ ಸ್ಫೋಟ ಸಣ್ಣಪುಟ್ಟ ಘಟನೆಯಲ್ಲ ಎಂದು ತಿಳಿಸಿದರು. ಅಸ್ಥಿರ ಸರಕಾರಗಳ ಯುಗದ ಬಳಿಕ ಸಮ್ಮಿಶ್ರ ಸರಕಾರದ ನೇತೃತ್ವವನ್ನು ಅಟಲ್‍ಜೀ ಅವರು ವಹಿಸಿದ್ದರು ಎಂದರು. ಪಾಕಿಸ್ತಾನವನ್ನು ಮಣಿಸುವ ಕಾರ್ಯ ಕೂಡ ಅವರಿಂದ ಆಗಿತ್ತು ಎಂದು ತಿಳಿಸಿದರು.
ಸ್ವಾತಂತ್ರ್ಯಪೂರ್ವ- ಸ್ವಾತಂತ್ರ್ಯಾನಂತರದ ಕಾಂಗ್ರೆಸ್ಸಿಗೆ ಯಾವುದೇ ಸಂಬಂಧ ಇಲ್ಲ. ಸ್ವಾತಂತ್ರ್ಯಪೂರ್ವ ಕಾಂಗ್ರೆಸ್ಸಿನಲ್ಲಿ ಎಲ್ಲರೂ ಇದ್ದರು. ಸ್ವಾತಂತ್ರ್ಯಾನಂತರದ ಕಾಂಗ್ರೆಸ್ಸಿನಲ್ಲಿ ಆ ಪಕ್ಷದಲ್ಲಿ ರಾಜಕಾರಣ ಮಾಡಲು ಆಸಕ್ತಿ ಉಳ್ಳವರು ಮಾತ್ರ ಉಳಿದಿದ್ದರು. ಆಗ ಜನರದು ಏಕಮುಖ ಶ್ರದ್ಧೆ ಇತ್ತು. ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿ ದಿನದಂದೇ ಈ ಕಾರ್ಯಕ್ರಮ ನಡೆಯುತ್ತಿದೆ. ಕರ್ನಾಟಕ ರಾಜ್ಯ ಸಮಿತಿಯು ದೊಡ್ಡ ಕೆಲಸ ಮಾಡುತ್ತಿದೆ. ಕರ್ನಾಟಕ ಘಟಕವು ಉತ್ತಮ ಕಾರ್ಯ ಮಾಡಿದೆ ಎಂದು ಅಭಿನಂದನೆ ಸಲ್ಲಿಸಿದರು. ದೊಡ್ಡದಾದ ಸಮಿತಿಯು ಚಟುವಟಿಕೆಗಳನ್ನು ಮಾಡುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು. ಸ್ಮರಣ ಸಂಚಿಕೆ ಮೂಲಕ ಶಬ್ದಾಂಜಲಿ ಮಾಡಿದ ಸಂಪಾದಕೀಯ ಸಮಿತಿಗೆ ಅಭಿನಂದನೆಗಳು ಎಂದರು.












Click it and Unblock the Notifications