24 ವರ್ಷಗಳ ಹಿಂದೆ ಬಿಬಿ ಶಿವಪ್ಪ, ಈಗ ಶೆಟ್ಟರ್: ಬಿಜೆಪಿಯಲ್ಲಿ ಲಿಂಗಾಯತರಿಗೆ ಅವಮಾನಿಸುವ ಇತಿಹಾಸ- ಏನಿದು ವರದಿ?
ಬೆಂಗಳೂರು, ಏಪ್ರಿಲ್ 18: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಬಿಜೆಪಿಯಲ್ಲಿ ಅವರಿಗೆ ಟಿಕೆಟ್ ನಿರಾಕರಿಸಿದ ನಂತರ ಕೇಸರಿ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಈ ಹಿಂದೆ ಪ್ರಬಲ ಲಿಂಗಾಯತ ನಾಯಕರಾಗಿದ್ದ ಬಿಬಿ ಶಿವಪ್ಪ ಅವರನ್ನು ಬಿಜೆಪಿ ಇದೇ ರೀತಿಯಾಗಿ ಅವಮಾನಿಸಿತ್ತು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿವೆ.
24 ವರ್ಷಗಳ ಹಿಂದೆ ಬಿಬಿ ಶಿವಪ್ಪ ಅವರಿಗೆ ವಿರೋಧ ಪಕ್ಷದ ನಾಯಕ ಸ್ಥಾನವನ್ನು ನಿರಾಕರಿಸಲಾಗಿತ್ತು. ಬಿಎಸ್ ಯಡಿಯೂರಪ್ಪ ಹಾಗೂ ದಿವಂಗತ ಅನಂತಕುಮಾರ್ ಅವರಂತೆ ಬಿಬಿ ಶಿವಪ್ಪ ಅವರು ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರು.

1999ರಲ್ಲಿ ವಿರೋಧ ಪಕ್ಷದ ನಾಯಕರಾಗುವ ಅವಕಾಶವನ್ನು ನಿರಾಕರಿಸಿದ ನಂತರ ಪಕ್ಷದ ಹಿರಿಯ ನಾಯಕ ಬಿ.ಬಿ.ಶಿವಪ್ಪ ಅವರು ಪಕ್ಷದ ವಿರುದ್ಧ ಬಂಡಾಯವೆದ್ದರು. ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಜಗದೀಶ್ ಶೆಟ್ಟರ್ ಅವರನ್ನು ತಂದು ಕೂರಿಸಲಾಯಿತು.
ಶಿವಪ್ಪ ಅವರನ್ನು 1999 ರಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲಾಗುವುದು ಎಂದು ಪಕ್ಷದ ಅನೇಕರು ನಂಬಿದ್ದರು. ಬಿ.ಎಸ್. ಯಡಿಯೂರಪ್ಪ ಮತ್ತು ಕೆ.ಎಸ್. ಈಶ್ವರಪ್ಪ ಅವರು ಆಗಿನ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರು.
ಆದರೆ, ಶಿವಪ್ಪ ಅವರನ್ನು ಕಡೆಗಣಿಸಿ ಬಿಜೆಪಿಯು ಜಗದೀಶ್ ಶೆಟ್ಟರ್ ಅವರನ್ನು ಆಯ್ಕೆ ಮಾಡಿತ್ತು. ಇದರಿಂದ ಕೆರಳಿದ ಶಿವಪ್ಪ ಬೆಂಬಲಿಗರು ಪ್ರತಿಪಕ್ಷ ನಾಯಕರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದ ಬೆಂಗಳೂರಿನ ಬಹುರಾವ್ ದೇಶಪಾಂಡೆ ಭವನದ ಬಿಜೆಪಿ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದರು.
ಇದರ ಬೆನ್ನಲ್ಲೇ ಬಿಜೆಪಿ ಅಶಿಸ್ತು ಆರೋಪದ ಮೇಲೆ ಶಿವಪ್ಪ ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು. ಇದರಿಂದ ಕೋಪಗೊಂಡಿದ್ದ ಶಿವಪ್ಪ ಅವರು ಕಾಂಗ್ರೆಸ್ ಸೇರಿದ್ದರು.
ಶಿವಪ್ಪ ಅವರಿಗೆ ಹಿರಿತನವಿದ್ದರೂ ವಿರೋಧ ಪಕ್ಷದ ನಾಯಕರಾಗಲು ಅವಕಾಶ ನಿರಾಕರಿಸಿದ್ದು ಏಕೆ ಎಂದು ಸಾರ್ವಜನಿಕವಾಗಿ ಪ್ರಶ್ನಿಸಲಾಗಿತ್ತು. ಶೆಟ್ಟರ್ ಅವರ ಬೆಂಬಲಿಗರು ಈಗ ಇದೇ ಪ್ರಶ್ನೆಗಳನ್ನು ಕೇಳುತ್ತಿರುವುದು ಕುತೂಹಲಕಾರಿಯಾಗಿದೆ. ಹಿರಿಯ ನಾಯಕ ಶೆಟ್ಟರ್ ಅವರನ್ನು ಬಿಜೆಪಿ ಗೌರವಯುತವಾಗಿ ನಡೆಸಿಕೊಂಡಿಲ್ಲ ಎಂದು ಅವರು ಹಿಂಬಾಲಕರು ಆರೋಪಿಸಿದ್ದಾರೆ.
ಬಿಬಿ ಶಿವಪ್ಪ ಹಾಗೂ ಜಗದೀಶ್ ಶೆಟ್ಟರ್ ಅವರು ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಶಿವಪ್ಪ ಅವರು ರಾಜಕೀಯ ಅವಕಾಶವನ್ನು ಕಳೆದುಕೊಂಡಿದ್ದಕ್ಕಾಗಿ ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಅವರನ್ನು ಸಾರ್ವಜನಿಕವಾಗಿ ದೂಷಿಸಿದ್ದರು.
ಶೆಟ್ಟರ್ ಅವರನ್ನು ಬಿಬಿ ಶಿವಪ್ಪನವರ ಹಾಗೆಯೇ ನಡೆಸಿಕೊಳ್ಳಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಲಿಂಗಾಯತರಿಗೆ ಬಿಜೆಪಿ ಅವಮಾನಿಸುತ್ತಿದೆ ಎಂಬ ನಿರೂಪಣೆಯನ್ನು ಕಾಂಗ್ರೆಸ್ ಕಟ್ಟಿಕೊಡುತ್ತಿದೆ. ಆದರೆ, ಶೆಟ್ಟರ್ ಅವರ ಪ್ರಭಾವ ಕೇವಲ ಹುಬ್ಬಳ್ಳಿ- ಧಾರವಾಡಕ್ಕೆ ಮಾತ್ರ ಸೀಮಿತವಾಗಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.
ತಮಗೆ ಟಿಕೆಟ್ ತಪ್ಪಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಸ್ ಸಂತೋಷ್ ಹಾಗೂ ಪ್ರಹ್ಲಾದ್ ಜೋಶಿ ಕಾರಣವೆಂದು ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ. 24 ವರ್ಷಗಳ ಬಳಿಕ ಬಿಜೆಪಿಯಲ್ಲಿ ಇತಿಹಾಸ ಮರುಕಳಿಸಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications