ಇಂದು 24 ಜನರ ಪ್ರಮಾಣವಚನ; ರಾಜಭವನದ ಸುತ್ತಮುತ್ತ ಮಾರ್ಗ ಬದಲಾವಣೆ ಹೀಗಿದೆ ನೋಡಿ
ಬೆಂಗಳೂರು,ಮೇ 27: ಸಿದ್ದರಾಮಯ್ಯ ಸಚಿವ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನವನ್ನ ಕೊಡಿಸುವ ನಿಟ್ಟಿನಲ್ಲಿ ಶುಕ್ರವಾರ ಸರಣಿ ಸಭೆಗಳ ಬಳಿಕ ಹೈಕಮಾಂಡ್ ಅಂತಿಮ ಮುದ್ರೆ ಹಾಕಿದೆ.
ಮೇ 20 ರಂದು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಪ್ರಮಾಣ ವಚನದ ದಿನದಂದು 8 ಜನ ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದು, ಇಂದು (ಶನಿವಾರ) ರಾಜಭವನದಲ್ಲಿ 24 ಸಚಿವರ ಪ್ರಮಾಣವಚನ ಸ್ವೀಕಾರ ಬೆಳಗ್ಗೆ 11. 45 ಕ್ಕೆ ನಡೆಯಲಿದ್ದು, ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಮಾರ್ಗ ಬದಲಾವಣೆಯಾಗಲಿದೆ.

ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಮಾರ್ಗ ಬದಲಾವಣೆಯಾಗಲಿದ್ದು, ಕೆ.ಆರ್.ವೃತ್ತದಿಂದ ಗೋಪಾಲಗೌಡ ವೃತ್ತದವರೆಗೆ ಸಂಚಾರ ಬಂದ್ ಆಗಲಿದೆ. ಅಲ್ಲದೇ ನೃಪತುಂಗ ರಸ್ತೆ ಅಥವಾ ಕಬ್ಬನ್ಪಾರ್ಕ್ ಒಳಭಾಗದ ರಸ್ತೆಯಲ್ಲಿ ಸಂಚಾರಕ್ಕೆ ಅನುಮತಿಸಲಾಗಿದೆ.
ಬಾಳೇಕುಂದ್ರಿ ವೃತ್ತದಿಂದ ಬರುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದ್ದು, ಕಾಫಿ ಬೋರ್ಡ್ ಅಥವಾ ತಿಮ್ಮಯ್ಯ ವೃತ್ತದ ಕಡೆ ಸಂಚಾರ ನಿರ್ಬಂಧ ಹೇರಲಾಗಿದೆ. ಜೊತೆಗೆ ಪೊಲೀಸ್ ತಿಮ್ಮಯ್ಯ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಸಂಚಾರ ಸಂಪೂರ್ಣ ಬಂದ್ ಆಗಲಿದೆ. ಶಿವಾಜಿನಗರ ಬಸ್ ನಿಲ್ದಾಣದಿಂದ ಬರುವ ವಾಹನಗಳ ಹಾಗೂ ಕ್ವೀನ್ಸ್ ಸರ್ಕಲ್, ಸಿದ್ದಲಿಂಗಯ್ಯ ವೃತ್ತದ ಕಡೆಗೆ ಬರುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ರಾಜಭವನ, ಕಾಫಿಬೋರ್ಡ್ ಕಡೆಗೆ ಗೂಡ್ಸ್ ವಾಹನ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ರಾಜಭವನದ ಸುತ್ತಮುತ್ತ ವಾಹನಗಳ ನಿಲುಗಡೆಗೆ ಸಂಪೂರ್ಣ ನಿಷೇಧಿಸಲಾಗಿದೆ. ರಾಜಭವನ ರಸ್ತೆ, ಅಂಬೇಡ್ಕರ್ ರಸ್ತೆ, ಕ್ವೀನ್ಸ್ ರಸ್ತೆ, ಇನ್ಫೆಂಟ್ರಿ ರಸ್ತೆ, ಸ್ಯಾಂಕಿ ರಸ್ತೆ, ಪ್ಯಾಲೇಸ್ ರಸ್ತೆ, ಕಬ್ಬನ್ ರಸ್ತೆಯಲ್ಲಿ ನಿಲುಗಡೆ ನಿಷೇಧ ಮಾಡಲಾಗಿದೆ.
ಇನ್ನು ಪ್ರಮಾಣ ವಚನಕ್ಕೆ ಬರುವವರ ಬಳಿ ಪಾಸ್ ಇರುವ ವಾಹನಗಳು ರಾಜಭವನದ ಗೇಟ್ ಬಳಿಗೆ ಬರಬಹುದು, ರಾಜಭವನದ ಗೇಟ್ ಬಳಿ ಗಣ್ಯರನ್ನು ಇಳಿಸಿ ಮುಂದೆ ಸಾಗಬೇಕು. ಎಲ್ಹೆಚ್ ಗೇಟ್ ಮೂಲಕ ತೆರಳಿ ಪಾರ್ಕಿಂಗ್ ಕೊಟ್ಟ ಸ್ಥಳದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.












Click it and Unblock the Notifications