ಜಿಲ್ಲೆಗೊಂದು ಪ್ರಣಾಳಿಕೆ ಬಿಡುಗಡೆ ಮಾಡಲಿದೆ ಕಾಂಗ್ರೆಸ್!
ಬೆಂಗಳೂರು, ಫೆಬ್ರವರಿ 22 : ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. 30 ಜಿಲ್ಲೆಗಳಿಗೆ ಪ್ರತ್ಯೇಕ ಪ್ರಣಾಳಿಕೆಯನ್ನು ಪಕ್ಷ ಬಿಡುಗಡೆ ಮಾಡಲಿದೆ.
ಬೆಂಗಳೂರಿನಲ್ಲಿ ಮಾತನಾಡಿದ ಪಕ್ಷದ ಪ್ರಣಾಳಿಕೆ ಸಮಿತಿ ಮುಖ್ಯಸ್ಥ ಎಂ.ವೀರಪ್ಪ ಮೊಯ್ಲಿ ಅವರು ಈ ಕುರಿತು ಮಾಹಿತಿ ನೀಡಿದರು. 'ಮಾರ್ಚ್ 16 ಅಥವ 17ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ' ಎಂದರು.
'ವಿಶಿಷ್ಠವಾದ ಪ್ರಣಾಳಿಕೆ ರಚನೆ ಮಾಡಬೇಕು ಎಂದು ವಿವಿಧ ಕ್ಷೇತ್ರಗಳ ಪರಿಣಿತರ ಜೊತೆ ಚರ್ಚೆ ನಡೆಸಲಾಗಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವರ ಜೊತೆಗೂ ಚರ್ಚೆ ನಡೆಸಲಾಗಿದೆ' ಎಂದು ಮೊಯ್ಲಿ ಹೇಳಿದರು.

'ಮೈಸೂರು, ಮಂಗಳೂರು, ಕಲಬುರಗಿ, ಚಿತ್ರದುರ್ಗ ಸೇರಿದಂತೆ ಒಟ್ಟು 6 ವಿಭಾಗಗಳನ್ನಾಗಿ ಮಾಡಿ ಪ್ರಣಾಳಿಕೆ ಕುರಿತು ಚರ್ಚೆ ನಡೆಸಲಾಗಿದೆ. ವಿಭಾಗದ ಮುಖ್ಯಸ್ಥರು ಅಲ್ಲಿ ಚರ್ಚಿಸಿದ ಅಂಶಗಳನ್ನು ನಮಗೆ ಕಳುಹಿಸಿದ್ದಾರೆ' ಎಂದರು.
'ನವ ಕರ್ನಾಟಕ 2025ರ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗಿದೆ. ಈ ಎಲ್ಲಾ ಅಂಶಗಳನ್ನು ಒಳಗೊಂಡ ಪ್ರಣಾಳಿಕೆಯನ್ನು ಅಂತಿಮಗೊಳಿಸುವ ಕಾರ್ಯ ನಡೆಯುತ್ತಿದೆ' ಎಂದು ವೀರಪ್ಪ ಮೊಯ್ಲಿ ಹೇಳಿದರು.
'30 ಜಿಲ್ಲೆಗಳಿಗೆ ಪ್ರತ್ಯೇಕ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗುತ್ತದೆ. ಅಂತಿಮ ಹಂತದ ಕೆಲಸಗಳು ನಡೆಯುತ್ತಿದ್ದು, ಮಾರ್ಚ್‌ನಲ್ಲಿ ಪ್ರಣಾಳಿಕೆ ಬಿಡುಗಡೆಯಾಗಲಿದೆ' ಎಂದು ವೀರಪ್ಪ ಮೊಯ್ಲಿ ಹೇಳಿದರು.












Click it and Unblock the Notifications