ಬಿಜೆಪಿ ಮತ್ತು ಜೆಡಿಎಸ್ ಸೇರಿ 30-35 ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ: ಎಂಬಿ ಪಾಟೀಲ್
ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯ ಸುಳಿವು ನೀಡಿರುವ ಕಾಂಗ್ರೆಸ್ ಸಚಿವ ಎಂ.ಬಿ.ಪಾಟೀಲ್, ಶೀಘ್ರದಲ್ಲೇ ಜನತಾ ದಳದ ಸುಮಾರು 10 ಶಾಸಕರು ಮತ್ತು ಬಿಜೆಪಿಯ 25 ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಪಾಟೀಲ್, ಕರ್ನಾಟಕದಲ್ಲಿ ಕಾಂಗ್ರೆಸ್‌ನ ಐವರು ಶಾಸಕರನ್ನು ಬಿಜೆಪಿ ಸೆಳೆಯಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು. ರಾಜ್ಯದಲ್ಲಿ ಆಪರೇಷನ್ ಕಮಲ ಮತ್ತು ಆಪರೇಷನ್ ಹಸ್ತ ಹೇಳಿಕೆ ಜೋರಾದ ಬೆನ್ನಲ್ಲೇ ಸಚಿವರ ಹೇಳಿಕೆ ಮತ್ತಷ್ಟು ಕುತೂಹಲ ಕೆರಳಿಸಿದೆ.

ಕಾಂಗ್ರೆಸ್ ಸಚಿವ ಎಂ.ಬಿ.ಪಾಟೀಲ್ ಹೇಳಿಕೆ ರಾಜ್ಯದಲ್ಲಿ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಅನೇಕ ಜೆಡಿಎಸ್ ಶಾಸಕರು ಹಳೆಯ ಪಕ್ಷಕ್ಕೆ ಬದಲಾಗಲು ಸಿದ್ಧರಿದ್ದಾರೆ ಎಂದು ಹಲವಾರು ಕಾಂಗ್ರೆಸ್ ನಾಯಕರು ಹೇಳಿಕೆ ಕೊಟ್ಟಿದ್ದ ಬೆನ್ನಲ್ಲೇ ಎಂಬಿ ಪಾಟೀಲ್ ಈ ಹೇಳಿಕೆ ನೀಡಿದ್ದಾರೆ.
ಹೆಚ್‌ಡಿಕೆ ವಿರುದ್ಧ ವಾಗ್ದಾಳಿ
ಡಿಕೆ ಶಿವಕುಮಾರ್ ಸಿಎಂ ಆಗುವುದಾದರೆ 19 ಜೆಡಿಎಸ್ ಶಾಸಕರ ಬೆಂಬಲ ನೀಡುವುದಾಗಿ ಕರ್ನಾಟಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ವ್ಯಂಗ್ಯವಾಡಿದ ಪಾಟೀಲ್, ಇದು ನಾಟಕೀಯ ಹೇಳಿಕೆ ಎಂದು ಬಣ್ಣಿಸಿದರು ಮತ್ತು ಕಾಂಗ್ರೆಸ್ ಸರ್ಕಾರದಲ್ಲಿ ಗೊಂದಲ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ಐವರು ಶಾಸಕರು ಕೂಡ ಕುಮಾರಸ್ವಾಮಿ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಪಾಟೀಲ್ ಸ್ಪಷ್ಟನೆ ನೀಡಿದರು.
ಬಿಜೆಪಿ & ಜೆಡಿಎಸ್ ಶಾಸಕರು ಕಾಂಗ್ರೆಸ್‌ಗೆ
ವಿರೋಧ ಪಕ್ಷದ ಸುಮಾರು 20-25 ಶಾಸಕರು ಕಾಂಗ್ರೆಸ್‌ಗೆ ಸೇರುವ ನಿರೀಕ್ಷೆಯಿದೆ ಎಂದು ಪಾಟೀಲ್ ಹೇಳಿಕೊಂಡಿದ್ದಾರೆ, ಇದು ರಾಜಕೀಯ ವಲಯದಲ್ಲಿ ಮಹತ್ವದ ಬದಲಾವಣೆಯ ಸೂಚನೆ ನೀಡಿದೆ. 65-70 ಶಾಸಕರನ್ನು ಖರೀದಿಸುವ ಬಿಜೆಪಿಯ ಕಾರ್ಯಸಾಧ್ಯತೆಯನ್ನು ಪ್ರಶ್ನಿಸಿದ ಅವರು, ಬಿಜೆಪಿ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಪ್ರಯತ್ನಿಸಿದರೆ, ಬಿಜೆಪಿಯ 25 ಶಾಸಕರು ಕಾಂಗ್ರೆಸ್‌ಗೆ ಬರಲಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆ 150-160 ಆಗಲಿದೆ ಎಂದು ಎಂ.ಬಿ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್‌ನ ಆಡಳಿತದ ಬಗ್ಗೆ ಪ್ರಶ್ನೆ ಮಾಡುತ್ತಿರುವ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಅವರು, ಬಿಜೆಪಿ ಇನ್ನೂ ವಿರೋಧ ಪಕ್ಷದ ನಾಯಕನ್ನು ಆಯ್ಕೆ ಮಾಡಿಲ್ಲ, ಅವರಲ್ಲಿ ಸಮರ್ಥ ನಾಯಕರು ಇಲ್ಲವೇ ಎಂದು ಪ್ರಶ್ನೆ ಮಾಡಿದರು.
ಆಡಳಿತಾರೂಢ ಕಾಂಗ್ರೆಸ್‌ನಲ್ಲಿನ ಗುಂಪುಗಾರಿಕೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಉಪ ಡಿಕೆ ಶಿವಕುಮಾರ್ ನಡುವಿನ ಹಗ್ಗಜಗ್ಗಾಟದ ನಡುವೆ, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಶನಿವಾರ ಡಿಕೆಶಿ ಅವರು ಸಿಎಂ ಆಗಲು ಬಯಸಿದರೆ 19 ಜೆಡಿಎಸ್ ಶಾಸಕರ ಬೆಂಬಲ ನೀಡುವುದಾಗಿ ಹೇಳುವ ಮೂಲಕ ಸಂಚಲನ ಸೃಷ್ಟಿಸಿದ್ದರು.
ಹೆಚ್‌ಡಿಕೆ ಹೇಳಿಕೆಗೆ ತಿರುಗೇಟು ನೀಡಿದ ಡಿ.ಕೆ. ಶಿವಕುಮಾರ್, ನಾನು ಸಿಎಂ ಸ್ಥಾನಕ್ಕೇರಲು ತುದಿಗಾಲಲ್ಲಿ ನಿಂತಿಲ್ಲ ಎಂದರು. "ನಾವು ಸಾಮೂಹಿಕ ನಾಯಕತ್ವದಲ್ಲಿ ರಾಜ್ಯ ಚುನಾವಣೆಗೆ ಸ್ಪರ್ಧಿಸಿದ್ದೇವೆ. ನಾವು ಉತ್ತಮ ಆಡಳಿತವನ್ನು ನೀಡಬೇಕಾಗಿದೆ. ನಾನು ಸಿಎಂ ಆಗಲು ಆತುರವಿಲ್ಲ. ನಾನು ಯಾರಿಂದಲೂ ಈ ಬಗ್ಗೆ ಬೇಡಿಕೆ ಇಟ್ಟಿಲ್ಲ, ಪಕ್ಷದ ನಾಯಕತ್ವದಿಂದಲೂ ಸಹ" ಎಂದು ಹೇಳಿದ್ದರು.












Click it and Unblock the Notifications