20,000 ರೂ. ಮೌಲ್ಯದ ನೋಟ್ ಬದಲಾಯಿಸಲು ಅವಕಾಶ!
ಬೆಂಗಳೂರು: ₹2000 ಮುಖಬೆಲೆಯ ನೋಟ್ ಚಲಾವಣೆ ರದ್ದು ಮಾಡಲು ಆರ್‌ಬಿಐ ತಯಾರಿ ನಡೆಸಿದೆ. ಈ ಕಾರಣಕ್ಕೆ ಇನ್ನು 4 ತಿಂಗಳ ನಂತರ ₹2000 ಮುಖಬೆಲೆ ನೋಟ್ ಅಸ್ತಿತ್ವದಲ್ಲಿ ಇರುವುದಿಲ್ಲ. ಆದರೆ ನೋಟು ಬದಲಾಯಿಸಿಕೊಳ್ಳಲು ಇರುವ ನಿಯಮಗಳ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ತಿಳಿದಿದೆಯಾ? ಹಾಗಿದ್ದರೆ ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ ಬನ್ನಿ.
ಹೌದು, ಕಳೆದ ಕೆಲವು ತಿಂಗಳಿಂದ ಜನರ ನಡುವೆ ಓಡಾಡುತ್ತಿದ್ದ ಮಾತು ನಿಜವಾಗಿದೆ, ಕರ್ನಾಟಕ ಚುನಾವಣೆ ಮುಗಿಯುತ್ತಿದ್ದಂತೆ ₹2000 ಮುಖಬೆಲೆ ನೋಟ್‌ಗೆ ಅಂತ್ಯ ಹಾಡಿದೆ ಆರ್‌ಬಿಐ. ಪ್ರಮುಖವಾಗಿ ಗಮನಿಸಬೇಕಾದ ಅಂಶವಿದೆ, 2016ರಲ್ಲಿ 500, 1000 ನೋಟ್ ಅಮಾನ್ಯ ಅಥವಾ ನೋಟ್ ಬ್ಯಾನ್ (Note Ban) ಬಳಿಕ 2000 ರೂಪಾಯಿ ಮುಖಬೆಲೆ ನೋಟ್ ಚಲಾವಣೆಗೆ ಬಂದಿದ್ದವು. ಇದೀಗ ದಿಢೀರ್ ಆರ್‌ಬಿಐ ಪ್ರಮುಖ ನಿರ್ಧಾರ ಪ್ರಕಟಿಸಿ ಭಾರತದಲ್ಲಿ ಚಲಾವಣೆಯಲ್ಲಿದ್ದ 2000 ಮುಖಬೆಲೆ ನೋಟ್ ಚಲಾವಣೆ ಸ್ಥಗಿತಗೊಳಿಸಲು ನಿರ್ಧರಿಸಿದೆ.

ಒಂದು ದಿನಕ್ಕೆ 20,000 ನಿಗದಿ
2000 ರೂಪಾಯಿ ಮುಖಬೆಲೆಯ ನೋಟುಗಳನ್ನು ವಾಪಸ್ ಪಡೆಯಲು RBI ಬ್ಯಾಂಕ್‌ಗಳಿಗೆ ಆದೇಶ ನೀಡಿದೆ. ಈ ನಿಯಮದ ಪ್ರಕಾರ ಇನ್ನು ಗ್ರಾಹಕರು ತಮ್ಮಲ್ಲಿನ 2000 ರೂಪಾಯಿ ನೋಟುಗಳನ್ನ ಬ್ಯಾಂಕ್ ಖಾತೆಯಲ್ಲಿ ತಮ್ಮ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಬಹುದು. 2000 ರೂಪಾಯಿ ನೋಟು ವಿನಿಮಯಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿದೆ. ಬ್ಯಾಂಕ್ ಚಟುವಟಿಕೆಗೆ ಸಮಸ್ಯೆಯಾಗದ ರೀತಿ ನೋಡಿಕೊಳ್ಳಲು ಒಂದು ದಿನಕ್ಕೆ, ಒಬ್ಬ ವ್ಯಕ್ತಿಗೆ ಗರಿಷ್ಠ 20,000 ರೂ. ಮಾತ್ರ ವಿನಿಮಯ ಮಾಡಿಕೊಳ್ಳಲು ಅವಕಾಶ ಮಾಡಲಾಗಿದೆ. ಆರ್‌ಬಿಐ ಬ್ಯಾಂಕ್‌ಗಳಿಗೆ ಈ ಬಗ್ಗೆ ಖಡಕ್ ಸೂಚನೆ ರವಾನಿಸಿದೆ.
ಜನರಿಗೆ ಮೊದಲೇ ಗೊತ್ತಿತ್ತಾ?
ಹೌದು, ಸುಮಾರು ದಿನಗಳಿಂದ ATMಗಳಲ್ಲಿ ಮುಖಬೆಲೆಯ ನೋಟ್‌ಗಳು ಸಿಗದೇ ಇದ್ದ ಕಾರಣ, ಜನರಲ್ಲೇ ಈ ಬಗ್ಗೆ ಚರ್ಚೆ ಶುರುವಾಗಿತ್ತು. ಅದರಲ್ಲೂ 2000 ನೋಟ್ ನೋಡಿದ್ರೆ ಸಾಕು ಅಂಗಡಿಗಳಲ್ಲಿ ಜನ ಬೇಡ, ಬೇಡ ಅನ್ನುತ್ತಿದ್ದರು. ಹೀಗಾಗಿ 2000 ಮುಖಬೆಲೆ ನೋಟ್ ಚಲಾವಣೆ ಮಾಡಲು ಹಲವರು ಪದಾಡಿದ್ದೂ ಇದೆ. ಈ ಎಲ್ಲಾ ಘಟನೆಗಳ ಬೆನ್ನಲ್ಲೇ 2000 ರೂ. ಮುಖಬೆಲೆಯ ನೋಟ್ ಚಲಾವಣೆ ಸ್ಥಗಿತಗೊಳಿಸಿದೆ RBI. ವಾಪಸ್ ಪಡೆಯಲು ಆರ್‌ಬಿಐ ಬ್ಯಾಂಕ್‌ಗಳಿಗೆ (Note Ban) ಆದೇಶ ನೀಡಿದೆ.
RBI ಎಷ್ಟು ತಿಂಗಳು ಅವಕಾಶ ನೀಡಿದೆ?
ಹೌದು, 2016ರಲ್ಲಿ ಘೋಷಣೆ ಮಾಡಿದಂತೆ ದಿಢೀರ್ ನೋಟ್ ಬ್ಯಾನ್ ಮಾಡುತ್ತಿಲ್ಲ ಆರ್‌ಬಿಐ. ಈಗ ಜನರಿಗೆ ಅನುಕೂಲ ಆಗಲಿ ಎಂದು ಬರೋಬ್ಬರಿ 4 ತಿಂಗಳ ಅವಕಾಶ ಕಲ್ಪಿಸಿದೆ. ನೀವು ನಿಮ್ಮ ಬಳಿ ಇರುವ 2000 ಮುಖಬೆಲೆಯ ನೋಟ್ ಬದಲಾವಣೆ ಮಾಡಿಕೊಳ್ಳಲು ಸೆಪ್ಟೆಂಬರ್ 30ರವರೆಗೆ ಅವಕಾಶವಿದ್ದು, ಅಕ್ಟೋಬರ್ 1ರಿಂದ ನೋಟ್ ಚಲಾವಣೆಯನ್ನು ಸಂಪೂರ್ಣ ಬ್ಯಾನ್ ಮಾಡಲಾಗುವುದು ಎಂದು ಆರ್‌ಬಿಐ ಹೇಳಿದೆ. ಆರ್‌ಬಿಐ ಹೊರಡಿಸಿರುವ ಆದೇಶ 2000 ರೂ. ಮುಖಬೆಲೆ ನೋಟ್‌ಗಳಿಗೆ ಗುಡ್ ಬೈ ಹೇಳುವಂತೆ ಮಾಡಿದೆ.

ಸಮಯ ಇದೆ, ಸುಲಭವಾಗಿ ಬದಲಾಯಿಸಿ!
ಇನ್ಮುಂದೆ ಗ್ರಾಹಕರಿಗೆ 2,000 ರೂ. ಮುಖಬೆಲೆಯ ನೋಟುಗಳನ್ನು ನೀಡದಂತೆ ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ ನೀಡಿದೆ. ಗ್ರಾಹಕರು ಕೂಡ ಆತಂಕ ಪಡುವ ಅಗತ್ಯವಿಲ್ಲ, ನೋಟು ಬದಲಿಸಿಕೊಳ್ಳಲು ಸೆಪ್ಟೆಂಬರ್ 30ರವರೆಗೂ ಅವಕಾಶ ನೀಡಲಾಗಿದೆ. ಇದೀಗ ದೇಶದಲ್ಲಿ ಚಲಾವಣೆಯಲ್ಲಿರುವ 2,000 ರೂ. ಮುಖಬೆಲೆ ನೋಟುಗಳಲ್ಲಿ ಶೇ.89ರಷ್ಟು ನೋಟುಗಳು 2017ರ ಮಾರ್ಚ್ ತಿಂಗಳಿಗೂ ಮೊದಲೇ ಮುದ್ರಿಸಿ ಬಿಡುಗಡೆ ಮಾಡಲಾಗಿತ್ತು. 2000 ರೂ. ನೋಟುಗಳ ಕಾಲಾವಧಿ 4-5 ವರ್ಷ ಮಾತ್ರ, ಹೀಗಾಗಿ ಈ ನೋಟು ಹಿಂಪಡೆಯಲಾಗುತ್ತಿದೆ ಎನ್ನಲಾಗಿದೆ.
ಒಟ್ಟಾರೆ ಹೇಳುವುದಾದರೆ ಜನರು ಇಷ್ಟುದಿನ ಅಂದುಕೊಳ್ಳುತ್ತಿದ್ದ ಮಾತು ನಿಜವಾದಂತೆ ಕಾಣುತ್ತಿದೆ. ಇದೀಗ ಮತ್ತೆ ಹೊಸದಾಗಿ ಯಾವ ನೋಟ್ ಚಲಾವಣೆಗೆ ಬರಲಿದೆ ಎಂಬ ಕುತೂಹಲ ಕೂಡ ಹೆಚ್ಚಾಗಿದೆ. ಈ ಪ್ರಶ್ನೆಗೆ ಇನ್ನೇನು ಕೆಲವೇ ದಿನದಲ್ಲಿ ಉತ್ತರ ಸಿಗಲಿದ್ದು, ಅಲ್ಲಿಯವರೆಗೂ ಕಾದು ನೋಡಬೇಕು ಅಷ್ಟೇ. ಮತ್ತೆ 1000 ರೂ. ಮುಖಬೆಲೆಯ ನೋಟುಗಳು ಬರುತ್ತೋ ಅಥವಾ 2000 ಮುಖಬೆಲೆಯ ಹೊಸ ನೋಟು ಬರಲಿದೆಯೋ ಎಂಬ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ.












Click it and Unblock the Notifications