ಸರ್ಕಾರಿ ನೌಕರರ ಶೇ 17ರಷ್ಟು ತಾತ್ಕಾಲಿಕ ಪರಿಹಾರ ವಿಸ್ತರಣೆ ಆದೇಶ
ಬೆಂಗಳೂರು, ಜೂನ್ 18; ಕರ್ನಾಟಕ ಸರ್ಕಾರ ಮಾರ್ಚ್‌ನಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಶೇ 17ರಷ್ಟು ತಾತ್ಕಾಲಿಕ ಪರಿಹಾರವನ್ನು ಘೋಷಣೆ ಮಾಡಿತ್ತು. ಈಗ ಅದನ್ನು ಸ್ಥಳೀಯ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳು/ ನಗರ ಸ್ಥಳೀಯ ಸಂಸ್ಥೆಗಳಿಗೆ ವಿಸ್ತರಿಸುವ ಬಗ್ಗೆ ಸ್ಪಷ್ಟೀಕರಣ ನೀಡುವ ಕುರಿತು ಆದೇಶ ಹೊರಡಿಸಿದೆ.
ಕರ್ನಾಟಕ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಆರ್ಥಿಕ ಇಲಾಖೆ ಇವರಿಂದ ಅನುಮೋದಿತ ಆದೇಶವನ್ನು ಉಮಾ ಕೆ. ಸರ್ಕಾರದ ಉಪ ಕಾರ್ಯದರ್ಶಿ ಆರ್ಥಿಕ ಇಲಾಖೆ (ಸೇವೆಗಳು-2) ಈ ಕುರಿತು ಆದೇಶವನ್ನು ಹೊರಡಿಸಿದ್ದಾರೆ.

ರಾಜ್ಯ ಸರ್ಕಾರಿ ನೌಕರರಿಗೆ ಮಂಜೂರು ಮಾಡಿರುವ ಶೇ 17ರಷ್ಟು ತಾತ್ಕಾಲಿಕ ಪರಿಹಾರವನ್ನು ಸ್ಥಳೀಯ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳು/ ನಗರ ಸ್ಥಳೀಯ ಸಂಸ್ಥೆಗಳಿಗೆ ವಿಸ್ತರಿಸುವ ಬಗ್ಗೆ ಸ್ಪಷ್ಟಿಕರಣ ನೀಡುವ ಕುರಿತು ಎಂಬ ವಿಷಯವನ್ನು ಆದೇಶ ಒಳಗೊಂಡಿದೆ. ದಿನಾಂಕ 01/03/2023ರ ಸರ್ಕಾರಿ ಆದೇಶವನ್ನು ಉಲ್ಲೇಖಿಸಿ ಆದೇಶಿಸಲಾಗಿದೆ.
ಆದೇಶದಲ್ಲಿ ಏನಿದೆ?; ರಾಜ್ಯ ಸರ್ಕಾರದ ನೀತಿ ನಿರ್ಣಯದಂತೆ 7ನೇ ರಾಜ್ಯ ವೇತನ ಆಯೋಗದ ಅಂತಿಮ ವರದಿಯನ್ನು ಕಾಯ್ದಿರಿಸಿ, ಉಲ್ಲೇಖಿತ ದಿನಾಂಕ 01/03/2023ರ ಆದೇಶದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ/ ನಿವೃತ್ತ ನೌಕರರಿಗೆ ದಿನಾಂಕ 01/04/2023ರಿಂದ ಜಾರಿಗೆ ಬರುವಂತೆ, ಮೂಲ ವೇತನದ/ ಮೂಲ ಪಿಂಚಣಿಯ ಶೇ 17ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಿ ಆದೇಶವನ್ನು ಹೊರಡಿಸಲಾಗಿರುತ್ತದೆ.
ರಾಜ್ಯ ಸರ್ಕಾರಿ ನೌಕರರಿಗೆ/ ನಿವೃತ್ತ ನೌಕರರಿಗೆ ತಾತ್ಕಾಲಿಕ ಪರಿಹಾರ ಭತ್ಯೆಯನ್ನು ಮಂಜೂರು ಮಾಡಿ ಹೊರಡಿಸಲಾದ ಮತ್ತು ಈ ಕೆಳಕಂಡಂತೆ ಸ್ಪಷ್ಟೀಕರಣ ನೀಡಲಾಗಿದೆ.
* ರಾಜ್ಯದಲ್ಲಿನ ನಗರ ಸ್ಥಳೀಯ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ನೌಕರರ ಪ್ರಕರಣಗಳಲ್ಲಿ, ಮಧ್ಯಂತರ ಪರಿಹಾರ ಸೌಲಭ್ಯವನ್ನು ಮಂಜೂರು ಮಾಡುವುದರಿಂದ, ಉಂಟಾಗುವ ಹೆಚ್ಚುವರಿ ಆರ್ಥಿಕ ಹೊರೆಯನ್ನು ಅನ್ವಯಿಸುವ ಸಂಸ್ಥೆಗಳ ಸ್ವಂತ ನಿಧಿ (ಸಂಪನ್ಮೂಲ) ಗಳಿಂದ ಭರಿಸತಕ್ಕದ್ದು.
* ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳು (ಶಾಲಾ/ ಕಾಲೇಜುಗಳು/ ಪಾಲಿಟೆಕ್‌ನಿಕ್/ ಇಂಜಿನಿಯರಿಂಗ್ ಕಾಲೇಜುಗಳು) ಸೇರಿದಂತೆ ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳಲ್ಲಿ ರಾಜ್ಯ ವೇತನ ಶ್ರೇಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಯಂ ನೌಕರರಿಗೆ ಮಧ್ಯಂತರ ಪರಿಹಾರ ಭತ್ಯೆಯನ್ನು ಮಂಜೂರು ಮಾಡುವುದರಿಂದ, ಉಂಟಾಗುವ ವೆಚ್ಚವನ್ನು ಸರ್ಕಾರದ ಅನುದಾನದಡಿ ಭರಿಸತಕ್ಕದ್ದು.
* ಗುತ್ತಿಗೆ ಹಾಗೂ ಹೊರ ಗುತ್ತಿಗೆ/ ತಾತ್ಕಾಲಿಕ ನೇಮಕಾತಿಯಡಿ ಕಾರ್ಯನಿರ್ವಹಿಸುತ್ತಿರುವ ನೌಕರರು ಹಾಗೂ UGC/ ICAR/ AICTE ವೇತನ ಶ್ರೇಣಿ ಕಾರ್ಯನಿರತ ನೌಕರರುಗಳಿಗೆ ಉಲ್ಲೇಖಿತ ಆದೇಶವು ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಮುಷ್ಕರ ಆರಂಭಿಸಿದ್ದರು; 2023ರ ಮಾರ್ಚ್‌ನಲ್ಲಿ 7ನೇ ವೇತನ ಆಯೋಗದ ಶಿಫಾರಸು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕದ ಸರ್ಕಾರಿ ನೌಕರರು ಮುಷ್ಕರ ಆರಂಭಿಸಿದ್ದರು. ಆಗ ಹಣಕಾಸು ಸಚಿವ, ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಮುಷ್ಕರ ನಿರತ ನೌಕರರ ಜೊತೆ ಮಾತುಕತೆ ನಡೆಸಿದ್ದರು.
ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಅವರು, "ಸರ್ಕಾರಿ ನೌಕರರಿಗೆ ಮಧ್ಯಂತರವಾಗಿ ಶೇ 17ರಷ್ಟು ವೇತನ ಹೆಚ್ಚಳ ಮಾಡುವ ತೀರ್ಮಾನ ಆಗಿದೆ. ಎನ್‌ಪಿಎಸ್ ಬೇರೆ-ಬೇರೆ ರಾಜ್ಯಗಳಲ್ಲಿ ಏನು ಆಗಿದೆ ಎಂದು ಎರಡು ತಿಂಗಳಿನಲ್ಲಿ ಎಸಿಎಸ್ ನೇತೃತ್ವದಲ್ಲಿ ವರದಿ ತರಿಸಿಕೊಳ್ಳುತ್ತೇವೆ" ಎಂದು ಹೇಳಿದ್ದರು. ಬಳಿಕ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಸೇವೆಗಳು-2) ಶೇ 17ರಷ್ಟು ವೇತನ ಹೆಚ್ಚಳದ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ್ದರು. ಈ ಆದೇಶ 2023ರ ಏಪ್ರಿಲ್‌ನಿಂದ ಜಾರಿಗೆ ಬರಲಿದೆ ಎಂದು ಆದೇಶದಲ್ಲಿ ತಿಳಿಸಿದ್ದರು.
ಈ ಆದೇಶದಲ್ಲಿ ದಿನಾಂಕ 19/11/2022ರ ಸರ್ಕಾರಿ ಆದೇಶದಲ್ಲಿ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಪರಿಶೀಲಿಸಲು 7ನೇ ರಾಜ್ಯ ವೇತನ ಆಯೋಗವನ್ನು ರಚಿಸಿ ಆದೇಶಗಳನ್ನು ಹೊರಡಿಸಲಾಗಿರುತ್ತದೆ. ಪ್ರಸ್ತುತ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳ ಹಿನ್ನೆಲೆಯಲ್ಲಿ, ಸರ್ಕಾರದ ನೀತಿ ನಿರ್ಣಯದಂತೆ 7ನೇ ರಾಜ್ಯ ವೇತನ ಆಯೋಗದ ಅಂತಿಮ ವರದಿಯನ್ನು ಕಾಯ್ದಿರಿಸಿ, ರಾಜ್ಯ ಸರ್ಕಾರಿ ನೌಕರರಿಗೆ, ಸ್ಥಳೀಯ ಸಂಸ್ಥೆಗಳ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹಾಗೂ ವಿಶ್ವವಿದ್ಯಾನಿಲಯಗಳ ಬೋಧಕೇತರ ಸಿಬ್ಬಂದಿಗಳಿಗೆ ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲು ಸರ್ಕಾರವು ನಿರ್ಧರಿಸಿರುತ್ತದೆ ಎಂದು ಹೇಳಲಾಗಿತ್ತು.












Click it and Unblock the Notifications