15 ಕ್ಷೇತ್ರದ ಉಪ ಚುನಾವಣೆ; ಯಡಿಯೂರಪ್ಪಗೆ ಅಮಿತ್ ಶಾ ಕರೆ!
Recommended Video
ಬೆಂಗಳೂರು, ನವೆಂಬರ್ 23 : ಕರ್ನಾಟಕದ 15 ಕ್ಷೇತ್ರದ ಉಪ ಚುನಾವಣೆ ಪ್ರಚಾರ ಬಿರುಸಿನಿಂದ ಸಾಗಿದೆ. ಆಡಳಿತಾರೂಢ ಬಿಜೆಪಿಗೆ ಇದು ಮಹತ್ವದ ಚುನಾವಣೆಯಾಗಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಉಪ ಚುನಾವಣೆ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪಗೆ ಕರೆ ಮಾಡಿದ್ದಾರೆ.
ಉಪ ಚುನಾವಣೆಯಲ್ಲಿ ಗೆಲ್ಲುವ ತಂತ್ರಗಳ ಬಗ್ಗೆ ಮಾತುಕತೆ ನಡೆಸಿರುವ ಅಮಿತ್ ಶಾ, ಹಲವು ಸೂಚನೆಗಳನ್ನು ಸಹ ನೀಡಿದ್ದಾರೆ. "ಸರ್ಕಾರವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ. 15 ಕ್ಷೇತ್ರಗಳ ಪೈಕಿ ಕನಿಷ್ಠ 12ರಲ್ಲಿ ಗೆಲವು ಸಾಧಿಸಬೇಕು" ಎಂದು ಸೂಚನೆ ನೀಡಿದ್ದಾರೆ.
ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಶಾಸಕರು, ಸಚಿವರು ಕೆಲಸ ಮಾಡಬೇಕು. ಉಪ ಚುನಾವಣೆ ಬಗ್ಗೆ ಆಸಕ್ತಿ ತೋರಿಸದ ನಾಯಕರು ಇದ್ದರೆ ನಮ್ಮ ಗಮನಕ್ಕೆ ತನ್ನಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಅಭಯ ನೀಡಿದ್ದಾರೆ.
ಹಲವಾರು ಕ್ಷೇತ್ರಗಳಲ್ಲಿ ವಿರೋಧವಿದ್ದರೂ ನೀವು ಹೇಳಿದವರಿಗೆ ಟಿಕೆಟ್ ಕೊಡಲಾಗಿದೆ. ಅವರನ್ನು ಗೆಲ್ಲಿಸಿಕೊಂಡು ಬರುವ ಹೊಣೆ ನಿಮ್ಮ ಮೇಲಿದೆ. ಪ್ರತಿ ಕ್ಷೇತ್ರದಿಂದ ಪ್ರತಿದಿನ ವರದಿ ತರಿಸಿಕೊಳ್ಳಿ ಎಂದು ಅಮಿತ್ ಶಾ ಸೂಚನೆ ಕೊಟ್ಟಿದ್ದಾರೆ.

ಮೇಲುಸ್ತುವಾರಿ ನಡೆಸಿ
15 ಕ್ಷೇತ್ರದ ಚುನಾವಣಾ ತಯಾರಿ ಬಗ್ಗೆ ಖುದ್ದಾಗಿ ನಿವೇ ಮೇಲುಸ್ತುವಾರಿ ನಡೆಸಿ. ಯಾರನ್ನು ನಂಬಿ ಕೂರಬೇಡಿ. ಪ್ರತಿ ಕ್ಷೇತ್ರದ ಮಾಹಿತಿಯನ್ನು ಪಡೆದು ಸೂಚನೆಗಳನ್ನು ಕೊಡಿ. ಪಕ್ಷ ನಿಮ್ಮ ನಾಯಕತ್ವದ ಮೇಲೆ ವಿಶ್ವಾಸವಿಟ್ಟಿದೆ. ಕನಿಷ್ಠ 12 ಕ್ಷೇತ್ರ ಗೆಲ್ಲಬೇಕು ಎಂದು ಅಮಿತ್ ಶಾ ಸೂಚನೆ ಕೊಟ್ಟಿದ್ದಾರೆ.

ಪ್ರಚೋದನಾಕಾರಿ ಹೇಳಿಕೆ
ಪ್ರತಿಪಕ್ಷದ ನಾಯಕರು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವ ಮೂಲಕ ವಿವಾದವೆಬ್ಬಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಎಲ್ಲಾ ಹೇಳಿಕೆಗಳಿಗೂ ಪ್ರತಿಕ್ರಿಯೆ ನೀಡಬೇಕೆಂದಿಲ್ಲ. ರಾಜ್ಯ ಸರ್ಕಾರದ ಸಾಧನೆಯನ್ನು ಮುಂದಿಟ್ಟುಕೊಂಡು ಮತ ಕೇಳಿ ಎಂದು ಅಮಿತ್ ಶಾ ನಿರ್ದೇಶನ ನೀಡಿದ್ದಾರೆ.

ಸ್ವಂತ ಬಲದ ಮೇಲೆ ಅಧಿಕಾರ
ಉಪ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಪಡೆದು ಸ್ಥಿರವಾದ ಸರ್ಕಾರ ಆಗಬೇಕು. ಗೊಂದಲಕಾರಿ ಹೇಳಿಕೆಗಳನ್ನು ನೀಡಿ ಪ್ರತಿಪಕ್ಷದವರು ರಾಜಕಾರಣ ಮಾಡುತ್ತಿದ್ದಾರೆ. ಅವರ ಉದ್ದೇಶವೇ ಬೇರೆ. ಅವುಗಳನ್ನು ನಂಬಿ ಕುಳಿತುಕೊಳ್ಳುವುದು ಬೇಡ ಎಂದು ಅಮಿತ್ ಶಾ ಯಡಿಯೂರಪ್ಪ ಬಳಿ ಮಾತುಕತೆ ನಡೆಸಿದ್ದಾರೆ.

ಡಿಸೆಂಬರ್ 5ರಂದು ಚುನಾವಣೆ
ಡಿಸೆಂಬರ್ 5ರಂದು 15 ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಅದರಲ್ಲೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಳಿಸಿದ ಶಾಸಕರು ಬಿಜೆಪಿಯಿಂದ ಕಣಕ್ಕಿಳಿದಿದ್ದು, ಪಕ್ಷದ ಜವಾಬ್ದಾರಿಯನ್ನು ಹೆಚ್ಚಿಸಿದೆ. ಡಿಸೆಂಬರ್ 9ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications