CP Yogeshwar: ಬಾಜಿ ಕಟ್ಟಿ ನೋಡುವ ಬಾರಾ... ಸಿಪಿ ಯೋಗೇಶ್ವರ್ ಪರ ಕಟ್ಟಿದ್ದಾರಂತೆ 15 ಕೋಟಿ ಬೆಟ್ಟಿಂಗ್!?
ಚನ್ನಪಟ್ಟಣ ಚುನಾವಣಾ ಅಖಾಡದಲ್ಲಿ ಬೆಟ್ಟಿಂಗ್ ಅಬ್ಬರ ಶುರುವಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯದಲ್ಲಿ ಕೋಟಿ ಕೋಟಿ ಲೆಕ್ಕದಲ್ಲಿ ಬಾಜಿ ನಡೆಯುತ್ತಿದೆ. ಚನ್ನಪಟ್ಟಣ ಉಪಚುನಾವಣೆ ಮುಗಿದು ಒಂದು ವಾರದ ಮೇಲೇಲಾಗಿದೆ. ಫಲಿತಾಂಶ ಹೊರ ಬೀಳುವುದಕ್ಕೆ ಇನ್ನೇನು ಒಂದೇ ಒಂದು ದಿನ ಬಾಕಿ ಇದೆ. ಹೀಗಾಗಿ ಗೊಂಬೆನಾಡಲ್ಲಿ ಕೊನೆ ಕ್ಷಣದಲ್ಲಿ ಬೆಟ್ಟಿಂಗ್ ಅಬ್ಬರ ಜೋರಾಗಿದೆ.
ತಮ್ಮ ತಮ್ಮ ಅಭ್ಯರ್ಥಿಗಳ ಪರ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಲಕ್ಷ ಲಕ್ಷ ಬೆಟ್ಟಿಂಗ್ ಕಟ್ಟಿ ಬಾಜಿಗೆ ನಿಂತಿದ್ದಾರಂತೆ. ಚುನಾವಣೆ ಮುಗಿದು ಒಂದೇ ದಿನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಪ್ರೆಸ್‌ಮೀಟ್ ಮಾಡಿದ್ರು. ಚುನಾವಣೆ ಗುಂಗು ಮರೆಯೋಕು ಮುಂಚೆಯೇ ಸೋಲಿನ ಸುಳಿವು ಕೊಟ್ಟಿದ್ದರು. ಇಲ್ಲಿಂದಲೇ ಬೆಟ್ಟಿಂಗ್ ಭರಾಟೆ ಶುರುವಾಗಿದೆ.

ದಳಪತಿಗಳಿಗಿಂತ ಕಾಂಗ್ರೆಸ್ ನವರೆ ಹೆಚ್ಚೆಚ್ಚು ಬೆಟ್ಟಿಂಗ್ ಕಟ್ಟುತ್ತಿದ್ದಾರಂತೆ. ಜೆಡಿಎಸ್‌ನವರು 50,000 ಕೊಡ್ತೀವಿ ಅಂದ್ರೆ ಕಾಂಗ್ರೆಸ್‌ನವರು 1 ಲಕ್ಷ ಕೊಡ್ತೀವಿ ಅಂತ ಆಫರ್ ಕೊಡ್ತಿದ್ದಾರಂತೆ. ಅಲ್ಲದೆ ಸಿಪಿ ಯೋಗೇಶ್ವರ್ ಸೋಲಿನ ಸುಳಿವು ಕೊಟ್ಟರೂ ಕೂಡ ಯೋಗೇಶ್ವರ್ ಪರವೇ ಬೆಟ್ಟಿಂಗ್ ಕಟ್ಟುತ್ತಿದ್ದಾರಂತೆ ಆಪ್ತರು. ಅಷ್ಟಕ್ಕೂ ಯೋಗೇಶ್ವರ್ ಪರ ಬೆಟ್ಟಿಂಗ್ ಎಷ್ಟಕ್ಕೆ ನಡೆಯುತ್ತಿದೆ ಅಂತ ನೀವು ಕೇಳಿದರೆ ಧಂಗಾಗಿ ಹೋಗ್ತೀರಾ!
ಯೋಗೇಶ್ವರ್ ಪರ ಕಟ್ಟಿದ್ದಾರಂತೆ 15 ಕೋಟಿ ಬೆಟ್ಟಿಂಗ್!?
ಚನ್ನಪಟ್ಟಣ ಫಲಿತಾಂಶದ ಮೇಲೆ ಚನ್ನಪಟ್ಟಣಕ್ಕಿಂತ ರಾಮನಗರ, ಮದ್ದೂರು, ಮಂಡ್ಯ ಹಾಗೂ ಮೈಸೂರಿನ ಜನರೇ ಹೆಚ್ಚಾಗಿ ತಲೆ ಕೆಡಿಸಿಕೊಂಡವರಂತೆ ಕಾಣಿಸುತ್ತಿದೆ. ಲ್ಯಾಂಡ್ ಡವಲೆಪರ್ಸ್ ಸಹ ಚನ್ನಪಟ್ಟಣ ಅಖಾಡಕ್ಕೆ ಇಳಿದಿದ್ದು, ಕೋಟಿ ಕೋಟಿ ಹಣ ಸುರಿಯುತ್ತಿದ್ದಾರಂತೆ. ಅಷ್ಟೇ ಅಲ್ಲ ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಶಾಸಕರೊಬ್ಬರು ಸಿಪಿ ಯೋಗೇಶ್ವರ್ ಪರ ಬರೋಬ್ಬರಿ 15 ಕೋಟಿಗೂ ಹೆಚ್ಚು ಬೆಟ್ಟಿಂಗ್ ಕಟ್ಟಿದ್ದಾರೆಂದು ಹೇಳಲಾಗುತ್ತಿದೆ.

ಇನ್ನೂ ಬೆಟ್ಟಿಂಗ್ ಬಗ್ಗೆ ಹಾಸನದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಯಾರೂ ಬೆಟ್ಟಿಂಗ್ ಕಟ್ಟಿ ನಿಮ್ಮ ಜೀವನ ಹಾಳು ಮಾಡಿಕೊಳ್ಳಬೇಡಿ ಅಂತ ಮನವಿ ಮಾಡಿಕೊಂಡಿದ್ದಾರೆ. ಆನ್‌ಲೈನ್ ಬೆಟ್ಟಿಂಗ್ ಆಡುವ ಮೂಲಕ ತುಂಬಾ ಜನ ಬಲಿಯಾಗುತ್ತಿದ್ದಾರೆ. ವಿಶೇಷವಾಗಿ ಯುವಕರು ಬೆಟ್ಟಿಂಗ್‌ನಲ್ಲಿ ಹೆಚ್ಚಾಗಿ ಹಾಳಾಗುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ನಾವು ಕಡಿವಾಣ ಹಾಕಬೇಕು. ಗ್ಯಾಮ್ಲಿಂಗ್ ಅನ್ನೋದು ಸಮಾಜಮುಖಿ ಕೆಲಸ ಅಲ್ಲ. ಇವು ಸಮಾಜವನ್ನು ಒಡೆಯುವ ಕೆಲಸಗಳು ಆಗಿವೆ. ಹೀಗಾಗಿ ಇದಕ್ಕೆ ಯುವಕರು ಬಲಿಯಾಗಬಾರದು ಎಂದು ನಿಖಿಲ್ ಬೆಟ್ಟಿಂಗ್ ಆಡುವವರಿಗೆ ಕಿವಿ ಮಾತು ಹೇಳಿದ್ದಾರೆ.
ಒಟ್ಟಿನಲ್ಲಿ ಚನ್ನಪಟ್ಟಣ ಬೈ ಎಲೆಕ್ಷನ್ ಫಲಿತಾಂಶಕ್ಕೆ ಇನ್ನೇನು ಒಂದೇ ದಿನ ಬಾಕಿ ಉಳಿದಿದ್ದು ಬೆಟ್ಟಿಂಗ್ ಭರಾಟೆ ಸದ್ದು ಜೋರಾಗಿ ಸುದ್ದಿ ಮಾಡ್ತಾಯಿದೆ. ಕೊನೆಯ ಕ್ಷಣದಲ್ಲಾದ ತಮ್ಮ ಅಭ್ಯರ್ಥಿಗಳ ಪರ ಬೆಟ್ಟಿಂಗ್ ಕಟ್ಟಿ ಅದೃಷ್ಟ ಪರೀಕ್ಷೆಗೆ ಕೆಲ ಜನ ಮುಂದಾಗಿದ್ದಾರೆ. ಇದರ ಪ್ರಭಾವ ಹೇಗಿರುತ್ತೆ ಅನ್ನೋದನ್ನು ಚುನಾವಣೆ ಫಲಿತಾಂಶ ಹೊರ ಬಂದ ಬಳಿಕವಷ್ಟೇ ಗೊತ್ತಾಗಲಿದೆ. ಇದಕ್ಕಾಗಿ ಮಂಡ್ಯ, ಮೈಸೂರು, ಮದ್ದೂರು, ರಾಮನಗರ ಜನ ನವೆಂಬರ್ 23ನೇ ತಾರೀಖನ್ನು ಎದುರು ನೋಡುತ್ತಿದ್ದಾರೆ.












Click it and Unblock the Notifications