ಕರ್ನಾಟಕದಿಂದ ಮೊದಲ ಬಾರಿ ಸಂಸತ್ತಿಗೆ ಆಯ್ಕೆಯಾದವರು
ಬೆಂಗಳೂರು, ಮೇ 17 : ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಕರ್ನಾಟಕದಲ್ಲಿ 28 ಕ್ಷೇತ್ರಗಳಲ್ಲಿ ಹಾಲಿ ಸಂಸದರು, ಮಾಜಿ ಮುಖ್ಯಮಂತ್ರಿಗಳು ಸೋಲು ಅನುಭವಿಸಿದ್ದಾರೆ. ಅಚ್ಚರಿ ಎಂಬಂತೆ 11 ಅಭ್ಯರ್ಥಿಗಳು ಮೊದಲ ಬಾರಿಗೆ ಕರ್ನಾಟಕದಿಂದ ಲೋಕಸಭೆಗೆ ಪ್ರವೇಶಿಸುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗದಲ್ಲಿ, ಮಾಜಿ ಸಚಿವ ಬಿ.ಶ್ರೀರಾಮುಲು ಬಳ್ಳಾರಿಯಲ್ಲಿ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಉಡುಪಿ-ಚಿಕ್ಕಮಗಳೂರಿನಲ್ಲಿ, ಸಚಿವ ಪ್ರಕಾಶ್ ಹುಕ್ಕೇರಿ ಚಿಕ್ಕೋಡಿ ಕ್ಷೇತ್ರದಲ್ಲಿ, ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಮಂಡ್ಯ ಕ್ಷೇತ್ರದಲ್ಲಿ ಜಯಗಳಿಸಿದ್ದು ಮೊದಲ ಬಾರಿಗೆ ಸಂಸತ್ ಪ್ರವೇಶಿಸುತ್ತಿದ್ದಾರೆ.
ಮೈಸೂರು-ಕೊಡಗು ಕ್ಷೇತ್ರದಲ್ಲಿ ಜಯಗಳಿಸಿದ ಪ್ರತಾಪ್ ಸಿಂಹ, ತುಮಕೂರಿನಲ್ಲಿ ಜಯಗಳಿಸಿದ ಮುದ್ದ ಹನುಮೇಗೌಡ, ರಾಯಚೂರಿನಲ್ಲಿ ಜಯಗಳಿಸಿದ ಬಿ.ವಿ.ನಾಯಕ, ಕೊಪ್ಪಳದಲ್ಲಿ ಜಯಗಳಿಸಿದ ಕರಡಿ ಸಂಗಣ್ಣ, ಚಿತ್ರದುರ್ಗದಲ್ಲಿ ಜಗಯಳಿಸಿದ ಬಿ.ಎನ್.ಚಂದ್ರಪ್ಪ ದೆಹಲಿ ವಿಮಾನವೇರುತ್ತಿದ್ದಾರೆ. ಮೊದಲ ಬಾರಿಗೆ ಗೆಲುವು ಸಾಧಿಸಿದ ಅಭ್ಯರ್ಥಿಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.

ಭರ್ಜರಿ ಗೆಲುವು ಸಾಧಿಸಿದ ಯಡಿಯೂರಪ್ಪ
ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿ.ಎಸ್.ಯಡಿಯೂರಪ್ಪ 3,63,305 ಮತಗಳ ಭರ್ಜರಿ ಅಂತರದಿಂದ ಜಯಗಳಿಸಿ ಸಂಸತ್ ಪ್ರವೇಶಿಸಿದ್ದಾರೆ. ಕರ್ನಾಟಕ ಮಾಜಿ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದವರು.

ದೆಹಲಿಗೆ ಹೊರಟ ಶೋಭಾ ಕರಂದ್ಲಾಜೆ
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಹಾಲಿ ಸಂಸದ ಜಯಪ್ರಕಾಶ್ ಹೆಗ್ಡೆ ವಿರುದ್ಧ 1,18,643 ಮತಗಳ ಅಂತರದಿಂದ ಜಯಗಳಿಸಿದ ಶೋಭಾ ಕರಂದ್ಲಾಜೆ ಅವರು ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ. ಸಚಿವೆಯಾಗಿ, ಶಾಸಕರಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ಅವರು, ಸಂಘ ಪರಿವಾರದಲ್ಲಿ ಕೆಲಸ ಮಾಡಿ ನಂತರ ರಾಜಕೀಯ ಪ್ರವೇಶ ಮಾಡಿದರು.

ಬಳ್ಳಾರಿಯಿಂದ ದೆಹಲಿವರೆಗೆ
ಬಳ್ಳಾರಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ 5,34,406 ಮತಗಳನ್ನು ಪಡೆದ ಶ್ರೀರಾಮುಲು ಅವರು ಚುನಾವಣೆಯಲ್ಲಿ ಜಯಗಳಿಸಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ.ಹನುಮಂತಪ್ಪ ಅವರನ್ನು 85,144ಮತಗಳ ಅಂತದಿಂದ ಸೋಲಿಸಿದ ಶ್ರೀರಾಮುಲು ಕರ್ನಾಟಕ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಹುಕ್ಕೇರಿಗೆ ಬೇಡ ಅಂದರೂ ಗೆಲುವು ಸಿಕ್ತು
ನಾನು ದೆಹಲಿಗೆ ಹೋಗುವುದಿಲ್ಲ ಎಂದು ಹಠ ಹಿಡಿದಿದ್ದ ಸಕ್ಕೆರೆ ಮತ್ತು ಮುಜರಾಯಿ ಖಾತೆ ಸಚಿವ ಪ್ರಕಾಶ್ ಹುಕ್ಕೇರಿ ಅವರಿಗೆ ಬೇಡವೆಂದರು ಜಯಸಿಕ್ಕಿದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ 3,003 ಮತಗಳ ಅಂತರದಿಂದ ಗೆಲುವು ಸಾಧಿಸಿ ಅವರು ಸಂಸತ್ ಪ್ರವೇಶಿಸಿದ್ದಾರೆ. ಸದಲಗಾ ವಿಧಾನಸಭೆಯಿಂದ ಮೂರು ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಹುಕ್ಕೇರಿ ಅವರು ಸದ್ಯ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರು.

ಪುಟ್ಟರಾಜು ದೆಹಲಿಗೆ ಹೊರಟರು
ಮಂಡ್ಯ ಕ್ಷೇತ್ರದಲ್ಲಿ ಹಾಲಿ ಸಂಸದೆ ರಮ್ಯಾ ಅವರನ್ನು 5,518 ಮತಗಳ ಅಂತರದಿಂದ ಸೋಲಿಸಿರುವ ಸಿ.ಎಸ್.ಪುಟ್ಟರಾಜು ಮಂಡ್ಯದಿಂದ ದೆಹಲಿಗೆ ಹೊರಟಿದ್ದಾರೆ. ಮೇಲುಕೋಟೆ ಕ್ಷೇತ್ರದಿಂದ ಜೆಡಿಎಸ್ ಶಾಸಕರಾಗಿ ಆಯ್ಕೆ ಆಗಿದ್ದ ಅವರು, ಮೊದಲ ಬಾರಿಗೆ ಸಂಸದರಾಗಿ ಆಯ್ಕೆ ಆಗಿದ್ದಾರೆ.

ಮೈಸೂರಿನಲ್ಲಿ ಘರ್ಜಿಸಿದ ಸಿಂಹ
ಯಾವುದೇ ರಾಜಕೀಯ ಅನುಭವಿಲ್ಲದಿದ್ದರೂ ಹಿರಿಯ ಕಾಂಗ್ರೆಸ್ ನಾಯಕ ಎಚ್.ವಿಶ್ವನಾಥ್ ಅವರಿಗೆ ಮೈಸೂರು-ಕೊಡಗು ಕ್ಷೇತ್ರದಲ್ಲಿ ಸೋಲುಣಿಸಿರುವ ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ. 31,608 ಮತಗಳ ಅಂತರದಿಂದ ಜಯಗಳಿಸಿದ ಪ್ರತಾಪ ಸಿಂಹ ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ.

ನಾಯಕರು ದೆಹಲಿಗೆ ಹೊರಟರು
ರಾಯಚೂರು ಕ್ಷೇತ್ರದಲ್ಲಿ 1499 ಮತಗಳ ಅಂತರದಿಂದ ಜಯಗಳಿಸಿದ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ ಸಂಸತ್ ಪ್ರವೇಶಿಸಿದ್ದಾರೆ. ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ಇವರು 4,43,659 ಮತಗಳನ್ನು ಪಡೆದಿದ್ದಾರೆ.

ಮದ್ದಹನುಮೇಗೌಡರು ದೆಹಲಿಗೆ
ತುಮಕೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡರು ಸಂಸದ ಜಿ.ಎಸ್.ಬಸವರಾಜ್ ಅವರಿಗೆ ಸೋಲುಣಿಸುವ ಮೂಲಕ ಮೊದಲ ಬಾರಿಗೆ ಸಂಸತ್ ಪವೇಶಿಸಿದ್ದಾರೆ. ಕುಣಿಗಲ್ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ಅಯ್ಕೆಯಾಗಿದ್ದ ಮುದ್ದಹನುಮೇಗೌಡರು ಚುನಾವಣೆಯಲ್ಲಿ 74,041 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ವಿಧಾನಸಭೆ ಬದಲು ಲೋಕಸಭೆಗೆ ಹೊರಟರು
ಮೂಡಿಗೆರೆ ಕ್ಷೇತ್ರದಲ್ಲಿ ಎರಡು ಬಾರಿ ವಿಧಾನಸಭೆಗೆ ಸ್ಪರ್ಧಿಸಿ ಸೋತಿದ್ದ ಬಿ.ಎನ್.ಚಂದ್ರಪ್ಪ ಈ ಬಾರಿಯ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿ ಸಂಸತ್ ಪ್ರವೇಶಿಸಿದ್ದಾರೆ.

ಬೀದರ್ ಭಗವಂತ ಸಂಸತ್ ಪ್ರವೇಶಿಸಿದ
ಕಾಂಗ್ರೆಸ್ ಹಿರಿಯ ನಾಯಕ ಧರ್ಮಸಿಂಗ್ ಅವರಿಗೆ ಸೋಲುಣಿಸಿರುವ ಬೀದರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ. ಮ್ಯಾಕಾನಿಕಲ್ ಇಂಜಿನಿಯರ್ ಪದವಿ ಪಡೆದ ಭಗವಂತ್ ಅವರಿಗೆ ಇದು ಮೊದಲ ಚುನಾವಣೆ.

ತಾಲೂಕು ಪಂಚಾಯಿತಿಯಿಂದ ದೆಹಲಿವರೆಗೆ
ಕೊಪ್ಪಳ ಕ್ಷೇತ್ರದಲ್ಲಿ ಜಯಗಳಿಸಿದ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ. 4 ಬಾರಿ ಕೊಪ್ಪಳ ಕ್ಷೇತ್ರದ ಶಾಸಕರಾಗಿ ಕಾರ್ಯನಿರ್ವಹಿಸಿದ ಅನುಭವ ಕರಡಿ ಸಂಗಣ್ಣ ಬೆನ್ನಿಗಿದೆ.












Click it and Unblock the Notifications