ಕಾಂಗ್ರೆಸ್‍ನಲ್ಲಿ ಒಂದು ಸಿಎಂ ಕುರ್ಚಿಗಾಗಿ 10 ಜನ ಕಾಯುತ್ತಿದ್ದಾರೆ: ಅಮಿತ್ ಶಾ
ಬೀದರ್ ಗೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಚುನಾವಣಾ ತಂತ್ರಗಾರಿಕೆಯ ಕುರಿತು ಸಾಕಷ್ಟು ವಿಚಾರಗಳನ್ನ ರಾಜ್ಯ ಬಿಜೆಪಿ ನಾಯಕರಿಗೆ ತಿಳಿಸಲಿದ್ದಾರೆ.
ಬೀದರ್,ಮಾರ್ಚ್ 3: ಬಿಜೆಪಿ ಪಾಳಯದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿದ್ದು, ಪದೇ ಪದೇ ರಾಜ್ಯಕ್ಕೆ ಹೈಕಮಾಂಡ್ ನಾಯಕರು ಆಗಮಿಸುತ್ತಿದ್ದು ಅಬ್ಬರದ ಪ್ರಚಾರ ಕಾರ್ಯವನ್ನ ಮುಂದುವರೆಸಿದೆ.
ಈಗಾಗಲೇ ರಾಜ್ಯಕ್ಕೆ ಐದಾರು ಬಾರಿ ಆಗಮಿಸಿದ್ದ ಅಮಿತ್ ಶಾ ಇಂದು ಬೀದರ್ ನಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆ 3 ನೇ ರಥಯಾತ್ರೆಗೆ ಚಾಲನೆ ನೀಡಿದ್ದು, ರಾಜಕೀಯ ವಿರೋಧಿಯಾಗಿರುವ ಕಾಂಗ್ರೆಸ್ ವಿರುದ್ದ ಅಮಿತ್ ಶಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ, ಕಾಂಗ್ರೆಸ್‍ನಲ್ಲಿ ಒಂದು ಸಿಎಂ ಕುರ್ಚಿಗಾಗಿ 10 ಜನ ನಾಯಕರಿದ್ದಾರೆ. ಇವರು ಕರ್ನಾಟಕಕ್ಕೆ ಒಳಿತನ್ನು ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಬಳಿ ಗೆಲುವಿನ ಸೂತ್ರ ಉಳಿದಿಲ್ಲ. ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸ್ಥಿತಿ ಕುಸಿಯುತ್ತಿದೆ. ಮೋದಿಜಿ ಅವರ ಸಾವಿಗಾಗಿ ಘೋಷಣೆ ಕೂಗುತ್ತಿದ್ದಾರೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಟೀಕೆಯಿಂದ ಕಮಲ ಇನ್ನಷ್ಟು ಪ್ರಬಲವಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಕಾಸದ ವಿರೋಧಿ ಕಾಂಗ್ರೆಸ್ಸನ್ನು ಸೋಲಿಸಿ. ಮೋದಿಜಿ ಸಾವನ್ನು ಬಯಸುವ ಕಾಂಗ್ರೆಸ್ಸಿಗರನ್ನು ಸೋಲಿಗೆ ಸಂಕಲ್ಪ ಕಲ್ಯಾಣ ಕರ್ನಾಟಕದ ಜನತೆಯದಾಗಲಿ. ಹೈದರಾಬಾದ್ ಕರ್ನಾಟಕದ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಬದಲಿಸಿದ ಬಿಜೆಪಿ, ಈ ಪ್ರದೇಶದ ಅಭಿವೃದ್ಧಿಗೆ ಬದ್ಧವಿದೆ. ಗರಿಷ್ಠ ಹಣವನ್ನೂ ಈ ಭಾಗಕ್ಕೆ ಕೊಟ್ಟಿದ್ದೇವೆ. ಸಿದ್ದರಾಮಯ್ಯ ಸರಕಾರವು ಕಾಂಗ್ರೆಸ್ ಎಟಿಎಂ ಆಗಿತ್ತು ಎಂದು ಆರೋಪಿಸಿದರು.
ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಕುಟುಂಬವಾದವನ್ನು ಪೋಷಿಸುವ ಪಕ್ಷಗಳು. ಜೆಡಿಎಸ್‍ಗೆ ಕೊಡುವ ಮತ ಸಂಪೂರ್ಣ ಹಾಳಾಗುತ್ತದೆ. ಅದು ಕಾಂಗ್ರೆಸ್‍ಗೆ ಮತ ಕೊಟ್ಟಂತೆ ಎಂದ ಅವರು, ಟುಕ್ಡೇ ಟುಕ್ಡೇ ಗ್ಯಾಂಗ್ ಬೆಂಬಲಿಸುವ, ಆತಂಕವಾದಕ್ಕೆ ಬೆಂಬಲ ಕೊಡುವ ಕಾಂಗ್ರೆಸ್ ಪಕ್ಷಕ್ಕೆ ಮತ ಕೊಡದಿರಿ ಎಂದು ಜನರಲ್ಲಿ ಮನವಿ ಮಾಡಿದ ಅವರು, ಕಾಂಗ್ರೆಸ್ ಪಕ್ಷವು ಕರ್ನಾಟಕದ ನಾಯಕರಿಗೆ ಸದಾ ಅವಮಾನ ಮಾಡುತ್ತ ಬಂದಿದೆ. ಕರ್ನಾಟಕ, ಇಲ್ಲಿನ ನಾಯಕರಿಗೆ ಗೌರವ- ಸನ್ಮಾನ ನೀಡಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಹೇಳಿದರು.
10 ಕೋಟಿ ಶೌಚಾಲಯ ನೀಡಿದ್ದು, 13 ಕೋಟಿ ಜನರಿಗೆ ಸಿಲಿಂಡರ್, ವಿದ್ಯುತ್ ಇಲ್ಲದ ಮನೆಗಳಿಗೆ ವಿದ್ಯುತ್ ಕೊಡಲಾಗಿದೆ. 80 ಕೋಟಿ ಜನರಿಗೆ ಉಚಿತ ಪಡಿತರ, ಉಚಿತ ಕೋವಿಡ್ ಲಸಿಕೆ ಕೊಟ್ಟದ್ದನ್ನು ಪ್ರಸ್ತಾಪಿಸಿದರು. ಉಚಿತ ವಿಮೆ, ಆರೋಗ್ಯ ರಕ್ಷಣೆ ಕೊಟ್ಟದ್ದನ್ನು ವಿವರಿಸಿದ ಅವರು, ದೇಶದ ರಕ್ಷಣೆಗಾಗಿ 370ನೇ ವಿಧಿಯನ್ನು ರದ್ದು ಮಾಡಿದ್ದನ್ನು ಜನರ ಮುಂದಿಟ್ಟರು.
ಕಾಂಗ್ರೆಸ್ ಮತಬ್ಯಾಂಕ್ ಪರವಾಗಿದೆ. ನಾವು ಮತಬ್ಯಾಂಕಿನ ಕಡೆ ಗಮನ ಕೊಡುತ್ತಿಲ್ಲ. ನಮಗೆ ದೇಶದ ಸುರಕ್ಷತೆ ಮುಖ್ಯ ಎಂದು ತಿಳಿಸಿದರು.
ರಾಮಮಂದಿರ ಬೇಕಿತ್ತೇ ಅಥವಾ ಬೇಡವಾಗಿತ್ತೇ ಎಂದು ಪ್ರಶ್ನಿಸಿದ ಅವರು, ಮಂದಿರ ವಿಚಾರವನ್ನು ವಿಳಂಬ ಮಾಡಿದ್ದೇ ಕಾಂಗ್ರೆಸ್. ಆದರೆ, ಮೋದಿಜಿ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದರು. ಕಾಶಿ, ಕೇದಾರನಾಥ, ಸೋಮನಾಥ ಮಂದಿರದ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ರಸ್ತೆ, ವಿಮಾನನಿಲ್ದಾಣ, ನಳ್ಳಿ ನೀರಿನ ಸಂಪರ್ಕ, ಶಿಕ್ಷಣ ಕ್ಷೇತ್ರ, ನೀರಾವರಿಗೆ ಗರಿಷ್ಠ ಹಣ ನೀಡಿದ್ದನ್ನು ಅವರು ಜನರ ಗಮನಕ್ಕೆ ತಂದರು. ನಮ್ಮ ಕ್ಲಿನಿಕ್ ಸೇರಿ ಮನೆ ಮನೆಗೆ ನೀರಿನ ಸೌಕರ್ಯ ಕೊಡಲಾಗುತ್ತಿದೆ. ಜಗಜ್ಯೋತಿ ಬಸವೇಶ್ವರರು ಪ್ರಜಾಪ್ರಭುತ್ವದ ಸಂದೇಶ ನೀಡಿದರು. ಮೋದಿಜಿ ಗೌರವಪೂರ್ಣವಾಗಿ ಇದನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿ ಮೆಚ್ಚುಗೆ ಸೂಚಿಸಿದ್ದರು ಎಂದು ಹೇಳಿದರು.












Click it and Unblock the Notifications