ಎಪಿಎಲ್ ಕಾರ್ಡ್‌ದಾರರಿಗೆ ಮೇ 1ರಿಂದ ಪಡಿತರ ಹಂಚಿಕೆ
ಬೆಂಗಳೂರು, ಏಪ್ರಿಲ್ 17 : 'ಕರ್ನಾಟಕದಲ್ಲಿ ಎಪಿಎಲ್ ಪಡಿತರ ಚೀಟಿ ಹೊಂದಿದವರಿಗೂ ಮೇ 1ರಿಂದ ಪಡಿತರ ಹಂಚಿಕೆ ಮಾಡಲಾಗುತ್ತದೆ. ಶೇ 91ರಷ್ಟು ಪಡಿತರ ಅಂಗಡಿಗಳಲ್ಲಿ ಈಗಾಗಲೇ ಎರಡು ತಿಂಗಳ ಪಡಿತರ ವಿತರಣೆ ಮಾಡಲಾಗಿದೆ" ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ. ಗೋಪಾಲಯ್ಯ ಹೇಳಿದರು.
ಶುಕ್ರವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಚಿವರು, " ಪ್ರತಿ ಕೆಜಿಗೆ 15 ರೂ.ಗಳ ದರದಲ್ಲಿ 10 ಕೆಜಿ ಅಕ್ಕಿಯನ್ನು ಮೇ 1ರಿಂದ ಎಪಿಎಲ್ ಕಾರ್ಡ್ ಹೊಂದಿರುವವರಿಗೂ ವಿತರಣೆ ಮಾಡಲಾಗುತ್ತದೆ" ಎಂದರು.
"ಉಜ್ವಲ ಹಾಗೂ ಸಿಎಂ ಅನಿಲ ಭಾಗ್ಯ ಯೋಜನೆಯನ್ನು ಮುಂದಿನ ಮೂರು ತಿಂಗಳಿಗೆ ವಿಸ್ತರಣೆ ಮಾಡಲಾಗಿದೆ. ಶೇಕಡಾ 91ರಷ್ಟು ಪಡಿತರ ಅಂಗಡಿಗಳಲ್ಲಿ ಎರಡು ತಿಂಗಳುಗಳ ಪಡಿತರ ವಿತರಣೆಯನ್ನು ಈಗಾಗಲೇ ಮಾಡಲಾಗಿದೆ. ಬಿಪಿಎಲ್ ಕಾರ್ಡ್‌ಗೆ ಅರ್ಜಿ ಹಾಕಿರುವ 1.9 ಕೋಟಿ ಅರ್ಜಿದಾರರಿಗೆ ಶನಿವಾರದಿಂದ 10 ಕೆಜಿ ಅಕ್ಕಿ ವಿತರಣೆ ಆಗಲಿದೆ" ಎಂದು ಮಾಹಿತಿ ನೀಡಿದರು.

"ಮುಂದಿನ ಮೇ ಹಾಗೂ ಜೂನ್ ತಿಂಗಳಿನಲ್ಲಿಯೂ ತಲಾ 10 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತದೆ. ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ ಕಾಪಿ ಹಾಗೂ ಒಟಿಪಿ ಪಡೆದು ಕಾರ್ಡ್‌ಗೆ ಅರ್ಜಿ ಹಾಕಿದವರಿಗೆ ಪಡಿತರ ಹಂಚಿಕೆ ಮಾಡಲಾಗುತ್ತಿದೆ. 2.22 ಲಕ್ಷ ಜನರು ಹೊಸ ಕಾರ್ಡ್ ಪಡೆಯಲು ಅರ್ಜಿ ಹಾಕಿದ್ದಾರೆ" ಎಂದು ಸಚಿವ ಕೆ. ಗೋಪಾಲಯ್ಯ ಮಾಹಿತಿ ನೀಡಿದರು.












Click it and Unblock the Notifications