ಬರದ ಸಮಯದಲ್ಲಿ ನಾನು ಅಧಿಕಾರಕ್ಕೆ ಬಂದೆ: ಸಿಎಂ ಯಡಿಯೂರಪ್ಪ!
ಬೆಂಗಳೂರು, ಜು. 27: ರಾಜ್ಯದ ಅಭಿವೃದ್ಧಿ ನೆನೆಸಿಕೊಂಡರೆ ಕಣ್ಣಲ್ಲಿ ನೀರು ಬರುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದರು. ರಾಜ್ಯ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆಗಳ ಕುರಿತ 'ಸವಾಲುಗಳ 1 ವರ್ಷ: ಪರಿಹಾರದ ಸ್ಪರ್ಶ' ಎನ್ನುವ ಕಿರು ಪುಸ್ತಕವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಿಡುಗಡೆ ಮಾಡಿ ಮಾತನಾಡಿದರು. ಜೊತೆಗೆ ತಾವು ಎದುರಿಸಿದ ಸಲಾವುಗಳ ಬಗ್ಗೆಯೂ ಅವರು ಮನಬಿಚ್ಚಿ ಮಾತನಾಡಿದರು.
Recommended Video
ವಿಧಾನಸೌಧದಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ನಾಡಿನ ಜನರನ್ನು ಉದ್ದೇಶಿಸಿ ಸಿಎಂ ಯಡಿಯೂರಪ್ಪ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಸ್ತರದ, ವಿವಿಧ ಕ್ಷೇತ್ರಗಳ ಜನರೊಂದಿಗೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದರು. ಒಂದು ವರ್ಷದ ಸಾಧನೆಗಳ ಕಿರು ಪುಸ್ತಕವನ್ನು ಆಯಾ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳು ಬಿಡುಗಡೆ ಮಾಡಿದರು. ಅದಕ್ಕೂ ಮೊದಲು ಆಯ್ದ 10 ಜನರೊಂದಿಗೆ ಸಿಎಂ ಆನ್‌ಲೈನ್ ಮೂಲಕ ಮಾತನಾಡಿ, ಸರ್ಕಾರದ ಬಗ್ಗೆ ಜನಾಭಿಪ್ರಾಯ ಪಡೆದರು.

ಜನರಿಂದ ನೇರ ಪ್ರತಿಕ್ರಿಯೆ
ರಾಜ್ಯ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಉಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆನ್‌ಲೈನ್ ಸಂವಾದದ ಮೂಲಕ ತಮ್ಮ ಸರ್ಕಾರದ ಬಗ್ಗೆ ಜನರಿಂದಲೇ ನೇರವಾಗಿ ಪ್ರತಿಕ್ರಿಯೆ ಪಡೆದರು. ಆರಂಭದಲ್ಲಿ ಕೋವಿಡ್‌ನಿಂದ ಗುಣಮುಖರಾಗಿರುವ ವಿಜಯಪುರದ 8 ತಿಂಗಳ ಗರ್ಭಿಣಿ ಪದ್ಮಶ್ರೀ ಎಂಬುವರ ಜೊತೆ ಮುಖ್ಯಮಂತ್ರಿಗಳು ಮಾತನಾಡಿದರು. ಇದೇ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಅವರು, ಏನಾದರೂ ಸಹಾಯ ಬೇಕಾ ಅಂತಾ ಕೇಳಿದರು. ಅದಕ್ಕೆ ಪದ್ಮಶ್ರೀ ನೀಡಿದ ಉತ್ತರ ವಿಶೇಷವಾಗಿತ್ತು. ಸಹಾಯ ಎಲ್ಲ ಗರ್ಭಿಣಿ ಸ್ತ್ರೀಯರಿಗೂ ಆಗಲಿ ಎಂದು ಪದ್ಮಶ್ರೀ ಅವರು ಸಿಎಂ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಂಡರು.
ಸಿಎಂ ಜೊತೆಗಿನ ಸಂವಾದದಲ್ಲಿ ಬೆಳಗಾವಿ ಜಿಲ್ಲೆಯ ಅರಭಾವಿಯ ಪವಿತ್ರಾ ಅವರು ಲಾಕ್‌ಡೌನ್‌ನಿಂದ ಆಗಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿದರು, ಪರಿಹಾರ ಮಾಡಿಕೊಡುವ ಭರವಸೆಯನ್ನು ಸಿಎಂ ನೀಡಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಸಂತ ಕುಮಾರಿ ಜೊತೆಗಿನ ಸಂವಾದದಲ್ಲಿ, ಈರುಳ್ಳಿ ಬೆಳೆ ನಷ್ಟ ಸಂಕಷ್ಟದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಾಗ ಸಿಎಂ ಕರೆ ಮಾಡಿ ಸ್ಪಂದಿಸಿದ ಬಗ್ಗೆ ವಸಂತಕುಮಾರಿ ಧನ್ಯವಾದ ಹೇಳಿದರು. ಜೊತೆಗೆ ನೀರಾವರಿ ಸಮಸ್ಯೆ ಪರಿಹರಿಸಿಕೊಡುವ ಭರವಸೆಯನ್ನು ಯಡಿಯೂರಪ್ಪ ಅವರು ವಸಂತಕುಮಾರಿ ಅವರಿಗೆ ನೀಡಿದರು.
ಕಟ್ಟಡ ಕಾರ್ಮಿಕರು, ಕೊರೊನಾ ವಾರಿಯರ್ಸ್, ಮಡಿವಾಳರು ಹೀಗೆ ಎಲ್ಲ ಸ್ತರದ ಜನರಿಂದ ಸಿಎಂ ಆಡಳಿತದ ಬಗ್ಗೆ ಮಾಹಿತಿ ಪಡೆದರು.

ಕಣ್ಣೀರು ಬರುತ್ತಿದೆ
ಜನರೊಂದಿಗಿನ ಸಂವಾದದ ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ಎಲ್ಲವನ್ನೂ ಮಾಡಿದ್ದೇವೆ ಅಂತಾ ನಾನು ಹೇಳುವುದಿಲ್ಲ. ಭಗವಂತನ ಇಚ್ಚೆ ಏನಿತ್ತೋ ಗೊತ್ತಿಲ್ಲ. ನಾನು ಅಧಿಕಾರ ವಹಿಸಿಕೊಂಡಾಗ ಅತಿವೃಷ್ಟಿ. ಕೋವಿಡ್ ಸಂಕಷ್ಟ ಬರದಿದ್ದರೆ ಅಭಿವೃದ್ಧಿ ವೇಗ ಇರುತ್ತಿತ್ತು. ನೆನೆಸಿಕೊಂಡರೆ ಕಣ್ಣಿನಲ್ಲಿ ನೀರು ಬರುತ್ತದೆ. ಮಾಡಬೇಕಿರುವ ಕೆಲಸ ಬಹಳಷ್ಟಿದೆ. ನಾಡಿನ ಜನರ ಋಣ ತೀರಿಸಬೇಕಿದೆ.
ಅಭಿವೃದ್ಧಿಗೆ ಕೋವಿಡ್ ಕಂಟಕ ಆಯ್ತು ಎಂಬ ನೋವು ನನ್ನನ್ನು ಕಾಡುತ್ತಿದೆ. ಕೋವಿಡ್ ಇಲ್ಲದಿದ್ದಲ್ಲಿ ಇನ್ನೂ ಅಭಿವೃದ್ಧಿ ಆಗುತ್ತಿತ್ತು. ಲಾಕ್‌ಡೌನ್ ಬಗ್ಗೆ ನಾನು ಚರ್ಚೆ ಮಾಡಲು ಹೋಗುವುದಿಲ್ಲ. ಲಾಕ್‌ಡೌನ್ ಚರ್ಚೆ ಮಾಡದೇ ಕೋವಿಡ್ ಜೊತೆಗೆ ಬದುಕುವ ಕ್ರಮಗಳನ್ನು ಮಾಡಿ ಅಂತಾ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹೇಳಿದ್ದೇನೆ ಎಂದರು.

ಬರದ ಸಮಯದಲ್ಲಿ
ಬರದ ಸಮಯದಲ್ಲಿ ನಾನು ಅಧಿಕಾರಕ್ಕೆ ಬಂದೆ ಎಂದು ಆರಂಭದಲ್ಲಿನ ಬರ ಪರಿಸ್ಥಿತಿಯನ್ನು ಸಿಎಂ ಯಡಿಯೂರಪ್ಪ ಅವರು ನನೆಪಿಸಿಕೊಂಡರು. ಬರದ ನಂತರ ಕೆಲವೇ ದಿನಗಳಲ್ಲಿ ಜಲಾಶಯಗಳು ತುಂಬಿ ಅತಿವೃಷ್ಟಿಯನ್ನು ನಾನು ನೋಡಬೇಕಾಯ್ತು. ಸಚಿವರು ಕೂಡಾ ಇಲ್ಲದೇ ಒಬ್ಬನೇ ನೆರೆ ಪೀಡಿತ ಭಾಗದಲ್ಲಿ ಓಡಾಡಿದ್ದೇನೆ. ಪ್ರಧಾನಿ ಮೋದಿ ಅವರ ಪ್ರೇರಣೆಯಿಂದ ಕಿಸಾನ್ ಸಮ್ಮಾನ್ ರಾಜ್ಯದಲ್ಲೂ ಮುಂದುವರಿಸಿದ್ದೇವೆ ಎಂದರು.
ರೈತ ಮತ್ತು ನೇಕಾರ ನಮ್ಮ ಎರಡು ಕಣ್ಣುಗಳು. ಇನ್ನು ಮೂರು ವರ್ಷಗಳಲ್ಲಿ ಯಾರಿಗೂ ಮನೆ ಇಲ್ಲ ಅಂತಾ ಆಗಬಾರದು. ಟೀಕೆಗಳ ನಡುವೆಯೂ ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿ ಮಾಡಿದ್ದೇವೆ. ರಾಜ್ಯದಲ್ಲಿ ಹೊಸ ಕೈಗಾರಿಕಾ ನೀತಿ ಜಾರಿಗೆ ತರುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕೈಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದರು.

ದ್ವೇಷದ ರಾಜಕಾರಣ
ಜೊತೆಗೆ ಹೆಚ್ಚಿನ ಸಾಲ ಪಡೆದಾದರೂ ಕೂಡಾ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮಾಡುತ್ತೇವೆ. ಮಹದಾಯಿ ವಿವಾದ ಬಗೆಹರಿಸುವ ಕೆಲಸ ಮಾಡಿದ್ದೇವೆ. ಮೇಕೆದಾಟು ಯೋಜನೆ ಮಾಡುತ್ತಿದ್ದೇವೆ. ಆಶ್ಚರ್ಯಪಡುವ ರೀತಿಯಲ್ಲಿ ಮೂರು ವರ್ಷಗಳಲ್ಲಿ ಬೆಂಗಳೂರು ಅಭಿವೃದ್ಧಿಯಾಗಲಿದೆ. ಕಸದ ಬುಟ್ಟಿಯಲ್ಲಿ ಇದ್ದ ಡಾ. ನಂಜುಂಡಪ್ಪ ವರದಿಯನ್ನು ಹೊರಗೆ ತೆಗೆದು, ಹಣಕಾಸು ನೆರವು ನೀಡಿ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ ಎಂದು ಯಡಿಯೂರಪ್ಪ ತಮ್ಮ ಸರ್ಕಾರದ ಅಭಿವೃದ್ಧಿಯ ಬಗ್ಗೆ ಮಾತನಾಡಿದರು.
ನಾನು ಎಂದೂ ದ್ವೇಷದ ರಾಜಕಾರಣ ಮಾಡಿಲ್ಲ. ನನ್ನ ಬಗ್ಗೆ ಟೀಕೆ ಮಾಡಿದವರ ಬಗ್ಗೆ ಗೌರವದಿಂದ ನಡೆದು ಕೊಂಡಿದ್ದೇನೆ. ಕಾನೂನು ಸುವ್ಯವಸ್ಥೆ ಕಾಪಾಡಿ ಕೋಮು ಗಲಭೆಗೆ ಅವಕಾಶ ಕೊಡದೇ ಧರ್ಮಗಳ ಮಧ್ಯೆ ಭೇದ ಭಾವ ಮಾಡದೇ ಕೆಲಸ ಮಾಡಿದ್ದೇವೆ ಎಂದಿದ್ದಾರೆ.

ವೇದಿಕೆ ಮೇಲೆ ವಿಜಯೇಂದ್ರ
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಸರ್ಕಾರಕ್ಕೆ ಒಂದು ವರ್ಷದ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಯುವ ಮೋರ್ಛಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಭಾಗವಹಿಸಿದ್ದು ವಿಶೇಷವಾಗಿತ್ತು.
ಉಳಿದಂತೆ ಸಚಿವರಾದ ಆರ್. ಅಶೋಕ್, ಸುರೇಶ್ ಕುಮಾರ್, ಬೆಂಗಳೂರಿನ ಬಿಜೆಪಿ ಸಂಸದರು, ಶಾಸಕರು ಉಪಸ್ಥಿತರಿದ್ದರು. ಜಿಲ್ಲಾ ಕೇಂದ್ರಗಳಿಂದ ಆನ್‌ಲೈನ್ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರು, ಬಿಜೆಪಿ ಸಂಸದರು ಮತ್ತು ಶಾಸಕರು ಪಾಲ್ಗೊಂಡಿದ್ದರು.












Click it and Unblock the Notifications