KKRTC : ಕೆಕೆಆರ್‌ಟಿಸಿ ಬಸ್ ಕಳ್ಳತನ, ಪೊಲೀಸರ ಹುಡುಕಾಟ!
ಕಲಬುರಗಿಯ ಚಿಂಚೋಳಿ ಬಸ್ ನಿಲ್ದಾಣದಿಂದ ಕೆಕೆಆರ್‌ಟಿಸಿ ಬಸ್ ಕಳ್ಳತನವಾಗಿದೆ. ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕಲಬುರಗಿ, ಫೆಬ್ರವರಿ 21; ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಬಸ್ ಕಳ್ಳತನವಾಗಿದೆ. ಬಸ್ ತೆಲಂಗಾಣ ಕಡೆ ಹೋಗಿರುವ ಮಾಹಿತಿ ಸಿಕ್ಕಿದ್ದು, ಪೊಲೀಸರ ಎರಡು ತಂಡ ಹುಡುಕಾಟ ನಡೆಸಿದೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಮಂಗಳವಾರ ಮುಂಜಾನೆ 3.30ರ ಸುಮಾರಿಗೆ ಬೀದರ್ ಡಿಪೋಗೆ ಸೇರಿದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಅಪಹರಣ ಮಾಡಲಾಗಿದೆ.
ಬೀದರ್ ಬಸ್ ಡಿಪೋ-2ಕ್ಕೆ ಸೇರಿದ ಕೆಎ 38, ಎಫ್ 971 ನೋಂದಣಿ ಸಂಖ್ಯೆಯ ಸಾಮಾನ್ಯ ಬಸ್ ಕಳ್ಳತನವಾಗಿದೆ. ಒಟ್ಟು ಮೂವರಿದ್ದ ಗುಂಪು ಈ ಕಳ್ಳತನ ನಡೆಸಿ ತೆಲಂಗಾಣ ಕಡೆ ಬಸ್‌ನಲ್ಲಿ ಸಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಚಿಂಚೋಳಿ ಠಾಣೆಯ ಪೊಲೀಸರು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಬಸ್ ಪತ್ತೆಗಾಗಿ ಪೊಲೀಸರು ಎರಡು ತಂಡಗಳನ್ನು ರಚನೆ ಮಾಡಿದ್ದಾರೆ.
ಕಳ್ಳರು ಚಿಂಚೋಳಿ ನಿಲ್ದಾಣದಿಂದ ಬಸ್ ಕದ್ದ ಬಳಿಕ ಮಿರಿಯಾಣ, ತಾಂಡೂರು ಮೂಲಕ ತೆಲಂಗಾಣ ಕಡೆ ಸಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ತೆಲಂಗಾಣ ಕಡೆಗೆ ಎರಡು ಪೊಲೀಸ್ ತಂಡಗಳನ್ನು ಕಳಿಸಲಾಗಿದೆ.
ನಿಲ್ದಾಣದಿಂದ ಕಳ್ಳತನ; ಸೋಮವಾರ ಕೊನೆಯ ಟ್ರಿಪ್ ಮುಗಿಸಿ ಚಿಂಚೋಳಿ ನಿಲ್ದಾಣಕ್ಕೆ ಬಸ್ ತಂದು ನಿಲ್ಲಿಸಲಾಗಿತ್ತು. ಆದರೆ ಬೆಳಗ್ಗೆ ಬಂದು ನೋಡಿದರೆ ಬಸ್ ಕಾಣುತ್ತಿಲ್ಲ. ಬಸ್ ನಿಲ್ದಾಣದಲ್ಲಿ ಬ್ಯಾಗು, ಮೊಬೈಲ್ ದೋಚುವುದು ಸಾಮಾನ್ಯ. ಆದರೆ ಬಸ್ ಅನ್ನೇ ಕಳ್ಳತನ ಮಾಡಿದ್ದು ನೋಡಿ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ.
ಮೂವರ ತಂಡ ಬಸ್ ಏರಿ ಅದನ್ನು ನೈಪುಣ್ಯತೆಯಿಂದ ಸ್ಟಾರ್ಟ್ ಮಾಡಿಕೊಂಡು ಹೋಗಿದ್ದಾರೆ. ಸಿಸಿಟಿವಿಯಲ್ಲಿ ಈ ದೃಶ್ಯಾವಳಿಗಳು ಸೆರೆಯಾಗಿವೆ. ಬೆಳಗ್ಗೆ ಸಿಬ್ಬಂದಿ ಬಂದು ನೋಡಿದಾಗ ಬಸ್ ಕಳುವಾಗಿರುವುದು ತಿಳಿದಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಇದೇ ಮೊದಲ ಪ್ರಕರಣವಲ್ಲ; ಸರ್ಕಾರಿ ಬಸ್ ಕಳ್ಳತನ ಕರ್ನಾಟಕದಲ್ಲಿ ಇದೇ ಮೊದಲ ಪ್ರಕರಣವಲ್ಲ. ಕುಡಿದ ಮತ್ತಿನಲ್ಲಿ ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಬಿಎಂಟಿಸಿ ಬಸ್ ಕಳ್ಳತನ ಮಾಡಲಾಗಿತ್ತು, ಹೊಸಕೋಟೆ ಬಳಿ ಬಸ್ ಸಿಕ್ಕಿತ್ತು.
ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಬಸ್ ನಿಲ್ದಾಣದಿಂದ ಕೆಎಸ್ಆರ್‌ಟಿಸಿ ಬಸ್ ಕಳ್ಳತನ ಮಾಡಲಾಗಿತ್ತು. ಕುಣಿಗಲ್ ಸುತ್ತಮತ್ತಲೂ ಸಂಚಾರ ನಡೆಸಿದ್ದ ಕಳ್ಳರು ಡೀಸೆಲ್ ಖಾಲಿಯಾದ ಬಳಿಕ ಗ್ರಾಮವೊಂದರಲ್ಲಿ ಬಸ್ ಬಿಟ್ಟು ಪರಾರಿಯಾಗಿದ್ದರು.












Click it and Unblock the Notifications