'ಎಂ.ಬಿ.ಪಾಟೀಲರು ಸಿದ್ದರಾಮಯ್ಯ ಮೇಲೆ ಆಣೆ-ಪ್ರಮಾಣ ಮಾಡಲಿ'
ಕಲಬುರಗಿ, ಸೆಪ್ಟೆಂಬರ್ 14 : 'ಸಚಿವ ಎಂ.ಬಿ.ಪಾಟೀಲರು ಆಣೆ-ಪ್ರಮಾಣ ಮಾಡುವುದಾದದರೆ ಸಿದ್ದರಾಮಯ್ಯ ಅವರ ಮೇಲೆ ಮಾಡಲಿ' ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದರು.
ಗುರುವಾರ ಕಲಬುರಗಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎಸ್.ಈಶ್ವರಪ್ಪ ಅವರು, 'ವೀರಶೈವ-ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದ ಹೋರಾಟ ಬಹಳ ಹಿಂದಿನಿಂದ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಂಡು ಮತ್ತೆ ಮುಖ್ಯಮಂತ್ರಿಯಾಗುವ ಷಡ್ಯಂತ್ರ ರೂಪಿಸಿದ್ದಾರೆ' ಎಂದು ಆರೋಪಿಸಿದರು.

'ಬಹುತೇಕ ಒಕ್ಕಲಿಗರು ದೇವೇಗೌಡ ಅವರನ್ನು ಬೆಂಬಲಿಸುತ್ತಾರೆ. ಲಿಂಗಾಯತರು, ಬ್ರಾಹ್ಮಣರು ಯಡಿಯೂರಪ್ಪ ಜೊತೆ ಇದ್ದಾರೆ. ಇದನ್ನು ಅರಿತ ಸಿದ್ದರಾಮಯ್ಯ ಅವರು ವೀರಶೈವರು, ಲಿಂಗಾಯತರ ನಡುವೆ ಜಗಳ ಹಚ್ಚಿ, ರಾಜಕೀಯ ಲಾಭ ಪಡೆಯಲು ಮುಂದಾಗಿದ್ದಾರೆ' ಎಂದು ಈಶ್ವರಪ್ಪ ದೂರಿದರು.
'ಸಿದ್ದಗಂಗಾ ಶ್ರೀಗಳ ಹೇಳಿಕೆ ಕುರಿತು ಸಚಿವ ಎಂ.ಬಿ.ಪಾಟೀಲ್ ಅವರು ಆಣೆ-ಪ್ರಮಾಣ ಮಾಡುವುದಾದದರೆ ಸಿದ್ದರಾಮಯ್ಯ ಮೇಲೆ ಆಣೆ ಮಾಡಲಿ' ಎಂದು ಈಶ್ವರಪ್ಪ ಸವಾಲೆಸೆದರು.
'ರಾಜ್ಯದ ಜನರು ಪ್ರಜ್ಞಾವಂತರಾಗಿದ್ದಾರೆ. ಆದ್ದರಿಂದ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗುವ ಕನಸು ಭಗ್ನವಾಗಲಿದೆ' ಎಂದು ಹೇಳಿದರು.












Click it and Unblock the Notifications