ಗಾಣಗಾಪುರದದಲ್ಲಿ ಜುಲೈ 6ರ ತನಕ ದತ್ತಾತ್ರೇಯ ದರ್ಶನವಿಲ್ಲ
ಕಲಬುರಗಿ, ಜೂನ್ 23 : ಗಾಣಗಾಪುರದ ಶ್ರೀ ದತ್ತಾತ್ರೇಯ ದೇವಾಲಯಕ್ಕೆ ಭಕ್ತರ ಭೇಟಿಯನ್ನು ನಿಷೇಧಿಸಿ ಕಲಬುರಗಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಜುಲೈ 6ರ ತನಕ ಭಕ್ತರಿಗೆ ದರ್ಶನ ಸಿಗುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಹಾಗೂ ಜನರ ಆರೋಗ್ಯದ ದೃಷ್ಟಿಯಿಂದ ಅಫಜಲಪುರ ತಾಲೂಕಿನ ಗಾಣಗಾಪುರದ ಶ್ರೀ ದತ್ತಾತ್ರೇಯ ದೇವಾಲಯಕ್ಕೆ ಜೂನ್ 23ರಿಂದ ಜುಲೈ 6ರ ತನಕ ಸಾರ್ವಜನಿಕ ಭೇಟಿ ನಿಷೇಧಿಸಲಾಗಿದೆ.
ಕಲಬುರಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಅಧ್ಯಕ್ಷರಾದ ಶರತ್ ಬಿ. ಈ ಕುರಿತು ಆದೇಶ ಹೊರಡಿಸಿದ್ದಾರೆ. 2020ರ ಜುಲೈ 5ರಂದು ಗುರು ಪೂರ್ಣಿಮಾ ಉತ್ಸವ ಇರುವುದರಿಂದ ನೆರೆ ರಾಜ್ಯಗಳಿಂದ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಆಗಮಿಸುತ್ತಾರೆ.

ದೇವಾಲಯದಲ್ಲಿ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ನೀಡಿದಲ್ಲಿ ಸಾಮಾಜಿಕ ಅಂತರ ಪಾಲನೆ ಮಾಡುವುದು ತುಂಬಾ ಕಷ್ಟವಾಗಲಿದೆ. ಆದ್ದರಿಂದ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ದಂಡ ಪ್ರಕ್ರಿಯ ಸಂಹಿತೆ 1973 ರ ಕಲಂ 144 ರನ್ವಯ ಭಕ್ತರ ಭೇಟಿ ನಿಷೇಧಿಸಲಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ ಮಂಗಳವಾರ ಒಟ್ಟು 6 ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1,232ಕ್ಕೆ ಏರಿಕೆಯಾಗಿದೆ. ಇದುವರೆಗೂ 11 ಜನರು ನಿಧನ ಹೊಂದಿದ್ದು, 442 ಸಕ್ರಿಯ ಪ್ರಕರಣಗಳಿವೆ.












Click it and Unblock the Notifications