ಬೆಂಗಳೂರು-ಕಲಬುರಗಿ ನಡುವೆ ಹೊಸ ರೈಲು ಸಂಚಾರ?
ಕಲಬುರಗಿ, ಜನವರಿ 28; ಕಲಬುರಗಿ ಮತ್ತು ಬೆಂಗಳೂರು ನಡುವೆ ಹೊಸ ರೈಲು ಓಡಿಸಬೇಕು ಎಂದು ಸಂಸದ ಡಾ. ಉಮೇಶ್ ಜಾಧವ್ ಕೇಂದ್ರ ರೈಲ್ವೆ ವಿಭಾಗವನ್ನು ಒತ್ತಾಯಿಸಿದರು. ಉಭಯ ನಗರಗಳ ನಡುವೆ ಸಂಚಾರ ನಡೆಸುವ ಜನರ ಸಂಖ್ಯೆ ಹೆಚ್ಚಾಗಿದ್ದು, ಹೊಸ ರೈಲು ಅಗತ್ಯವಿದೆ ಎಂದು ತಿಳಿಸಲಾಗಿದೆ.
ಪುಣೆ ಮತ್ತು ಸೊಲ್ಹಾಪುರ ಸಂಸದರ ವಿಭಾಗೀಯ ಮಟ್ಟದ ಸಭೆಯಲ್ಲಿ ಮಾತನಾಡಿದ ಡಾ. ಉಮೇಶ್ ಜಾಧವ್, ಕೇಂದ್ರ ರೈಲ್ವೆ ಜನರಲ್ ಮ್ಯಾನೇಜರ್‌ಗೆ ಹೊಸ ರೈಲು ಓಡಿಸುವಂತೆ ಒತ್ತಾಯಿಸಿದರು.
ಕೋವಿಡ್ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಎಲ್ಲಾ ರೈಲಗಳು ಇನ್ನೂ ಆರಂಭವಾಗಿಲ್ಲ. ಬೇರೆ ವಿಭಾಗಗಳಲ್ಲಿ ರೈಲುಗಳ ಸೇವೆ ಆರಂಭವಾಗಿದೆ ಎಂದು ಸಂಸದರು ಸಭೆಯಲ್ಲಿ ಹೇಳಿದರು. ಕಲಬುರಗಿ-ಹೈದರಾಬಾದ್ ರೈಲು ಸೇವೆ ಆರಂಭವಾಗದಿರುವ ಕುರಿತು ಸಹ ಸಂಸದರು ಧ್ವನಿ ಎತ್ತಿದರು.

ಅಧಿಕಾರಿಗಳು ಮಾತನಾಡಿದ ಕಲಬುರಗಿ-ಹೈದರಾಬಾದ್ ರೈಲು ಸಂಚಾರವನ್ನು ಪ್ರಯಾಣಿಕರ ಕೊರತೆ ಹಿನ್ನಲೆಯಲ್ಲಿ ರೈಲ್ವೆ ಬೋರ್ಡ್ ರದ್ದುಗೊಳಿಸಿದೆ ಎಂದರು. ಕೋವಿಡ್ ಸಂದರ್ಭದಲ್ಲಿ ರದ್ದುಗೊಳಿಸಿದ ಸೊಲ್ಹಾಪುರ-ಗುಂತಕಲ್ ಡೆಮು ರೈಲು ಸೇವೆಯನ್ನು ಮತ್ತೆ ಆರಂಭಿಸಬೇಕು ಎಂದು ಸಂಸದರು ಒತ್ತಾಯಿಸಿದರು.
ಸಿಕಂದರಾಬಾದ್-ಚಿತ್ತಾಪುರ ರೈಲನ್ನು ಕಲಬುರಗಿ ತನಕ ವಿಸ್ತರಣೆ ಮಾಡುವ ಕಾರ್ಯ ಇನ್ನೂ ನಡೆದಿಲ್ಲ ಎಂದು ಸಂಸದರು ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. ದಕ್ಷಿಣ ರೈಲ್ವೆ 2021ರ ಜುಲೈನಲ್ಲಿಯೇ ರೈಲು ಸೇವೆ ವಿಸ್ತರಣೆಗೆ ಒಪ್ಪಿಗೆ ನೀಡಿದೆ ಎಂದು ಸಂದಸರು ಹೇಳಿದರು.
ಕಲಬುರಗಿ ರೈಲು ನಿಲ್ದಾಣದ ಪ್ಲಾಟ್ ಫಾರಂ ನಂಬರ್ 1ರಲ್ಲಿ ಎರಡು ಲಿಫ್ಟ್ ಆಳವಡಿಕೆ, ಪ್ಲಾಟ್ ಫಾರಂ ನಂಬರ್ 4ರಲ್ಲಿ ನಿರೀಕ್ಷಣಾ ಕೊಠಡಿ ಬಗ್ಗೆಯೂ ಸಭೆಯಲ್ಲಿ ಸಂಸದರು ವಿಷಯ ಪ್ರಸ್ತಾಪ ಮಾಡಿದರು.
ಹುಬ್ಬಳ್ಳಿ-ದಾದರ್ ಸಂಚಾರ ರದ್ದು; ಜೋಡಿ ರೈಲು ಮಾರ್ಗದ ಕಾಮಗಾರಿ ಹಿನ್ನಲೆಯಲ್ಲಿ ಫೆಬ್ರವರಿ 1 ರಿಂದ 4ರ ತನಕ ಹುಬ್ಬಳ್ಳಿ-ದಾದರ್ ಡೈಲಿ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.
ದೇಸೂ-ಖಾನಾಪುರ-ಗುಂಜಿ ನಡುವಿನ ಜೋಡಿ ಹಳಿ ಕಾಮಗಾರಿ ಹಿನ್ನಲೆಯಲ್ಲಿ ರೈಲು ಸಂಚಾರ ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಮಾರ್ಗದಲ್ಲಿ ಸಂಚಾರ ನಡೆಸುವ ಕೊಲ್ಲಾಪುರ-ತಿರುಪತಿ ಹರಿಪ್ರಿಯಾ ಎಕ್ಸ್‌ಪ್ರೆಸ್, ದಾದರ್-ಹುಬ್ಬಳ್ಳಿ ಎಕ್ಸ್‌ಪ್ರೆಸ್, ಪುದುಚೇರಿ-ದಾದರ್ ಚಾಲುಕ್ಯ ಎಕ್ಸ್‌ಪ್ರೆಸ್, ತಿರುವೇನಲ್ಲಿ-ದಾದರ್ ಎಕ್ಸ್‌ಪ್ರೆಸ್, ವಾಸ್ಕೋ-ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರದಲ್ಲಿಯೂ ವ್ಯತ್ಯಯ ಉಂಟಾಗಲಿದೆ.
ಜನವರಿ 30ರ ತನಕ 15 ರಿಂದ 30 ನಿಮಿಷದ ತನಕ ವ್ಯತ್ಯಯ ಉಂಟಾಗಲಿದೆ ಅಲ್ಲದೇ ಫೆಬ್ರವರಿ 1ರಂದು ಕೊಲ್ಲಾಪುರ-ತಿರುಪತಿ ಎಕ್ಸ್‌ಪ್ರೆಸ್ ರೈಲು ಸಂಚಾರದಲ್ಲಿ 90 ನಿಮಿಷಗಳ ವ್ಯತ್ಯಯ ಉಂಟಾಗಲಿದೆ ಎಂದ ಪ್ರಕಟಣೆ ಹೇಳಿದೆ.
ಲೋಕೊಮೊಟಿವ್ ಅಳವಡಿಕೆ; ಜನವರಿ 28ರಿಂದ ಹಾನಸ-ಸೊಲ್ಲಾಪುರ-ಹಾಸನ ಎಕ್ಸ್‌ಪ್ರೆಸ್ ಸೊಲ್ಲಾಪುರ-ಯಶವಂತಪುರ-ಸೊಲ್ಲಾಪುರ ನಡುವೆ ಎಲೆಕ್ಟ್ರಿಕ್ ಲೋಕೊಮೊಟಿವ್ ಅಳವಡಿಕೆ ಮಾಡಿಕೊಂಡು ಸಂಚಾರ ನಡೆಸಲಿದೆ.
ನೈಋತ್ಯ ರೈಲ್ವೆ ಈ ಕುರಿತು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಈ ಮೊದಲು ಹಾಸನದಿಂದ ಸೊಲ್ಲಾಪುರದ ತನಕ ಡೀಸೆಲ್ ಲೋಕೊಮೊಟಿವ್‌ನೊಂದಿಗೆ ರೈಲು ಸಂಚಾರ ನಡೆಸುತ್ತಿತ್ತು. ಅದೇ ರೀತಿ ಮೈಸೂರು-ಬಾಗಲಕೋಟೆ-ಮೈಸೂರು ಬಸವ ಎಕ್ಸ್‌ಪ್ರೆಸ್ ರೈಲನ್ನು ಮೈಸೂರು-ಸೊಲ್ಲಾಪುರ-ಮೈಸೂರು ನಡುವೆ ಎಲೆಕ್ಟ್ರಿಕ್ ಲೋಕೊಮೊಟಿವ್ ಅಳವಡಿಸಿಕೊಂಡು ಸಂಚಾರ ನಡೆಸಲಿದೆ.
ಈ ಮಾರ್ಗದ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿರುವುದರಿಂದ ಎಲೆಕ್ಟ್ರಿಕ್ ಲೋಕೊಮೊಟಿವ್ ಅಳವಡಿಸಿಕೊಂಡು ರೈಲುಗಳು ಸಂಚಾರ ನಡೆಸಲಿವೆ. ಈ ರೈಲುಗಳ ಸಂಚಾರದಿಂದ ನಿತ್ಯ 10 ಸಾವಿರ ಲೀಟರ್ ಡಿಸೇಲ್ ಉಳಿತಾಯವಾಗಲಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
ಕಳೆದ ಎರಡು ಹಣಕಾಸು ವರ್ಷದಲ್ಲಿ ಒಟ್ಟು 48 ಎಲೆಕ್ಟ್ರಿಕ್ ರೈಲು ಸಂಚಾರವನ್ನು ಆರಂಭಿಸಲಾಗಿದೆ. ಈ ಹಣಕಾಸು ವರ್ಷದಲ್ಲಿ 2021ರ ಏಪ್ರಿಲ್‌ನಿಂದ 232 ಕಿ. ಮೀ. ವಿದ್ಯುದೀಕರಣ ಮಾಡಲಾಗಿದೆ. ಇನ್ನೂ 2 ತಿಂಗಳಿನಲ್ಲಿ 200 ಕಿ. ಮೀ. ವಿದ್ಯುದೀಕರಣ ಮಾಡುವ ಗುರಿ ಹೊಂದಲಾಗಿದೆ.












Click it and Unblock the Notifications