ಕಲಬುರಗಿಯಲ್ಲಿ ಕುಖ್ಯಾತ ಸುಪಾರಿ ಹಂತಕನ ಮೇಲೆ ಬೆಳ್ಳಂಬೆಳಗ್ಗೆ ಫೈರಿಂಗ್
ಕಲಬುರಗಿ, ಡಿಸೆಂಬರ್ 15: ಕಲಬುರಗಿಯಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿಸಿದೆ. ಕುಖ್ಯಾತ ಸುಪಾರಿ ಹಂತಕನ ಮೇಲೆ ಇಂದು ಬೆಳಿಗ್ಗೆ ಇಲ್ಲಿನ ಗ್ರಾಮೀಣ ಠಾಣೆ ಪೊಲೀಸರು ಗುಂಡಿನ ದಾಳಿ ನಡೆಸಿ ಸೆರೆ ಹಿಡಿದಿದ್ದಾರೆ.
ಕಲಬುರಗಿ ತಾಲೂಕಿನ ಬೆಣ್ಣೆತೋರಾ ಡ್ಯಾಂ ಬಳಿ ಈ ಘಟನೆ ನಡೆದಿದೆ.
ಕೆಇಬಿ ಗುತ್ತಿಗೆದಾರನನ್ನು ಸುಲ್ತಾನಪುರ ಗ್ರಾಮದ ಯಶವಂತ ಎಂಬಾತ ಹಣಕ್ಕಾಗಿ ಹತ್ಯೆ ಮಾಡಿದ್ದ. ಈ ಹಿನ್ನಲೆಯಲ್ಲಿ ಈತನನ್ನು ಸೆರೆ ಹಿಡಿಯಲು ಗ್ರಾಮೀಣ ಠಾಣೆ ಪೊಲೀಸರು ಕಾರ್ಯಚರಣೆಗೆ ಇಳಿದಿದ್ದರು. ಕಳೆದ ಎರಡು ತಿಂಗಳಿಂದ ತಲೆ ಮರೆಸಿಕೊಂಡು ತಿರುಗುತ್ತಿದ್ದ ರೌಡಿ ಯಶವಂತ ಕೊನೆಗೂ ಇಂದು ಬೆಳಿಗ್ಗೆ ಪೊಲೀಸರ ಕೈಗೆ ಸಿಕ್ಕು ಬಿದ್ದಿದ್ದ.

ಈ ವೇಳೆ ಕಮಲಾಪುರ, ತಾವರಗೇರ ಬಳಿ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯಶವಂತ ಸುಲ್ತಾನಪುರ ಯತ್ನಿಸಿದ. ಆಗ ಪೊಲೀಸರು ಮೊದಲು ವಾಹನದ ಟಯರ್ ಗೆ ಗುಂಡು ಹಾರಿಸಿದರು. ತಕ್ಷಣ ಕೆಳಗಿಳಿದ ಯಶವಂತ್ ಪೊಲೀಸರತ್ತ ತಿರುಗಿಬಿದ್ದ. ಈ ಸಂದರ್ಭ ಆತ್ಮ ರಕ್ಷಣೆಗಾಗಿ ಗ್ರಾಮೀಣ ಠಾಣೆ ಪಿಎಸ್‌ಐ ಚಂದ್ರಶೇಖರ್ ತಿಗಡಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಗ್ರಾಮೀಣ ಠಾಣೆಯ ಇಬ್ಬರು ಪೇದೆಗಳಾದ ಕುಶಣ್ಣ, ಕುಪೇಂದ್ರ ಅವರಿಗೆ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳು ಆರೋಪಿಯನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೊಲೆ, ಸುಲಿಗೆ, ಅಕ್ರಮ ಪಿಸ್ತೂಲು ಮಾರಾಟ ಜಾಲ ಸೇರಿದಂತೆ ಐದಕ್ಕೂ ಹೆಚ್ಚು ಪ್ರಕರಣಗಳಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದ.
ಸ್ಥಳಕ್ಕೆ ಎಸ್ಪಿ ಎನ್ ಶಶಿಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.












Click it and Unblock the Notifications