ಕಲಬುರಗಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ; ಕಬ್ಬು ಬೆಳೆದ ರೈತರು ಕಂಗಾಲು
ಕಲಬುರಗಿ, ಮೇ 30: ಜಿಲ್ಲೆಯಲ್ಲಿ ಒಂದೆಡೆ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿವೆ. ಇದರ ಜೊತೆಗೆ ಬೆಳೆಗಳಿಗೆ ಸೂಕ್ತ ಬೆಲೆಯೂ ಸಿಗದೇ ರೈತರು ಚಿಂತೆಯಲ್ಲಿದ್ದಾರೆ. ಆದರೆ ಈ ನಡುವೆ ಜಿಲ್ಲೆಯಲ್ಲಿ ಮರಳು ಮಾಫಿಯಾ ಕೂಡ ಆರಂಭವಾಗಿರುವುದು ರೈತರು ಕಂಗಾಲಾಗುವಂತೆ ಮಾಡಿದೆ.
ಜಿಲ್ಲೆಯ ಅಫಜಲಪುರ ತಾಲೂಕಿನ ಘತ್ತರಗ ಕೊಳ್ಳೂರ ಬಳಿಯ ಭೀಮಾ ನದಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ಎಗ್ಗಿಲ್ಲದೇ ಸಾಗುತ್ತಿದೆ. ಜೆಸಿಬಿ ಬಳಸಿ ಮರಳು ಅಗೆಯುತ್ತಿದ್ದು, ನಿತ್ಯ ನೂರಾರು ಟಿಪ್ಪರ್ ಗಳಲ್ಲಿ ಮರಳನ್ನು ಸಾಗಣೆ ಮಾಡಲಾಗುತ್ತಿದೆ. ಇದನ್ನು ಪ್ರಶ್ನಿಸುವವರೂ ಯಾರಿಲ್ಲದಂತಾಗಿದೆ.
ಹೀಗೆ ನಿರಂತರವಾಗಿ ಮರಳು ತೆಗೆಯುತ್ತಿದ್ದರೆ, ಭೀಮಾ ನದಿಯಲ್ಲಿ ಇರುವ ಅಲ್ಪ ಸ್ವಲ್ಪ ನೀರೂ ಬರಿದಾಗುತ್ತದೆ ಎಂಬ ಆತಂಕ ಇಲ್ಲಿನ ರೈತರದ್ದು. ಈ ಭೀಮಾ ನದಿ ನೀರನ್ನೇ ನಂಬಿಕೊಂಡು ಇಲ್ಲಿನ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆದಿದ್ದಾರೆ. ಆದರೆ ಈ ಅಕ್ರಮ ಮರಳುಗಾರಿಕೆಯಿಂದ ನೀರು ಖಾಲಿಯಾದರೆ ಮುಂದಿನ ಕಥೆಯೇನು ಎಂಬ ಭೀತಿ ಇದೀಗ ರೈತರನ್ನು ಕಾಡತೊಡಗಿದೆ.

ಹೀಗೇ ಮರಳು ತೆಗೆಯುವ ಕೆಲಸ ಮುಂದುವರೆದಿದ್ದೇ ಆದರೆ, ನದಿ ನೀರೂ ಇಲ್ಲದಂತಾಗಿ, ನದಿ ತೀರದ ಹತ್ತಾರು ಹಳ್ಳಿಗಳ ಸಾವಿರಾರು ಎಕರೆ ಕಬ್ಬು ಒಣಗುವುದು ಖಚಿತವಾಗಿದೆ. ಹೀಗಾಗೇ ರೈತರಲ್ಲಿ ಆತಂಕ ಮನೆಮಾಡಿದೆ. ಸದ್ಯಕ್ಕೆ, ಈ ಅಕ್ರಮ ಮರಳು ಗಣಿಗಾರಿಕೆ ತಡೆಯಿರಿ ಎಂದು ರೈತರು ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ. ಜಿಲ್ಲಾಧಿಕಾರಿಗಳು ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೆ ನೋಡಬೇಕಿದೆ...












Click it and Unblock the Notifications