ನನಗಿನ್ನೂ ವಯಸ್ಸಿದೆ, ಹುದ್ದೆ ಹುಡುಕಿ ಹೋಗಲ್ಲ: ಬಿ.ವೈ. ವಿಜಯೇಂದ್ರ
ಕಲಬುರಗಿ, ಆಗಸ್ಟ್ 12: "ನಾನು ಯಾವುದೇ ಹುದ್ದೆ ಹುಡುಕಿಕೊಂಡು ಹೋಗಿಲ್ಲ. ಸದ್ಯ ರಾಜ್ಯ ಬಿಜೆಪಿ ಉಪಾಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ," ಎಂದು ಬಿ.ವೈ. ವಿಜಯೇಂದ್ರ ಹೇಳಿದರು.
ಕಲಬುರಗಿಯಲ್ಲಿ ಮಾತನಾಡಿದ ಅವರು, "ನಾನು ಸಚಿವ, ಡಿಸಿಎಂ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ. ನಮ್ಮ ತಂದೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡುವ ವೇಳೆ ಯಾವುದೇ ಬೇಡಿಕೆ ಇಟ್ಟಿರಲಿಲ್ಲ," ಎಂದು ಸ್ಪಷ್ಟಪಡಿಸಿದರು.
"ನನಗೆ ಇನ್ನೂ ವಯಸ್ಸಿದೆ, ಪಕ್ಷ ಸಂಘಟನೆ ನನ್ನ ಕರ್ತವ್ಯವಾಗಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸುತ್ತೇನೆ. ಯಾವುದೇ ಮಂತ್ರಿ ಸ್ಥಾನವಾಗಲಿ, ಪಕ್ಷದ ಯಾವುದೇ ಉನ್ನತ ಹುದ್ದೆಗಾಗಲಿ ಹುಡುಕಿಕೊಂಡು ಹೋಗುವುದಿಲ್ಲ," ಎಂದು ಹೇಳಿದರು.

ರಾಜ್ಯದಲ್ಲಿ ಸಚಿವ ಖಾತೆ ಹಂಚಿಕೆ ಬಗ್ಗೆ ಅಸಮಾಧಾನ ವಿಚಾರವಾಗಿ ಮಾತನಾಡಿ, "ಸಿಎಂ ಬಸವರಾಜ ಬೊಮ್ಮಾಯಿಯವರು ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುತ್ತಾರೆ. ಬಿಜೆಪಿಗೆ ಬಂದ 17 ಶಾಸಕರಲ್ಲಿ ಆನಂದ್ ಸಿಂಗ್ ಮೊದಲಿಗರು. ಅವರಿಗೆ ಗೌರವ ನೀಡುವುದು ನಮ್ಮ ಕರ್ತವ್ಯ. ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ತನ್ನ ಅವಧಿಯನ್ನು ಪೂರೈಸುತ್ತದೆ," ಎಂದರು.
"ಕಲ್ಯಾಣ ಕರ್ನಾಟಕದ ಕಲಬುರಗಿ, ಯಾದಗಿರಿಗೆ ಮಂತ್ರಿ ಸ್ಥಾನ ಸಿಗಬೇಕಿತ್ತು. ಆದರೆ ಕಾರಣಾಂತರಗಳಿಂದ ಸಿಕ್ಕಿಲ್ಲ. ಇದು ನನಗೂ ಸೇರಿದಂತೆ ಎಲ್ಲರಿಗೂ ನೋವು ತಂದಿದ್ದು, ನಿಜ. ನಾನು ಕಲಬುರಗಿ ಅಳಿಯನಾಗಿ ಈ ಭಾಗಕ್ಕೆ ನ್ಯಾಯ ದೊರಕಿಸಲು ಪ್ರಯತ್ನಿಸುತ್ತೇನೆ," ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರೂ ಆಗಿರುವ ಬಿ.ವೈ. ವಿಜಯೇಂದ್ರ ತಿಳಿಸಿದರು.
"ನಮ್ಮ ತಂದೆ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರು ರಾಜ್ಯದಲ್ಲಿ ಸೈಕಲ್ ಮೇಲೆ ಓಡಾಡಿ ಬಿಜೆಪಿ ಪಕ್ಷವನ್ನು ಕಟ್ಟಿ, ಬೆಳಸಿದ್ದಾರೆ. ರಾಜ್ಯದ ಜನ ಅವರ ಹೋರಾಟ ಗುರುತಿಸಿ ಪಕ್ಷ ಅಧಿಕಾರಕ್ಕೆ ತಂದಿದ್ದಾರೆ. ಪಕ್ಷದ ವರಿಷ್ಠರು ಯಾವುದೇ ಸ್ಥಾನಮಾನ ಕೊಟ್ಟರೂ ಯಶಸ್ವಿಯಾಗಿ ನಿಭಾಯಿಸಿಕೊಂಡು ಹೋಗುತ್ತೇನೆ," ಎಂದು ಹೇಳಿದರು.

"ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಆನಂದ ಸಿಂಗ್ ಸೇರಿದಂತೆ 17 ಜನ ಶಾಸಕರು ಕಾಂಗ್ರೆಸ್, ಜೆಡಿಎಸ್ ತ್ಯಜಿಸಿ ಬಂದಿದ್ದಾರೆ. ಅವರ ಬಗ್ಗೆ ಸರ್ಕಾರಕ್ಕೆ ಹಾಗೂ ಯಡಿಯೂರಪ್ಪರಿಗೆ ಗೌರವವಿದೆ. ಎಲ್ಲರನ್ನು ಗೌರವಯುತವಾಗಿ ನಡೆಸಿಕೊಂಡು ಹೋಗಲಾಗುವುದು," ಎಂದು ಹೇಳಿದರು.
"ಸಂಪುಟದಲ್ಲಿ ಇನ್ನೂ ನಾಲ್ಕು ಸ್ಥಾನಗಳು ಖಾಲಿಯಿದ್ದು, ಕಲಬುರಗಿ ಜಿಲ್ಲೆಗೆ ಸೂಕ್ತ ಸ್ಥಾನಮಾನ ಸಿಗುವ ವಿಶ್ವಾಸವಿದೆ. ನಾನು ಕಲಬುರಗಿ ಜಿಲ್ಲೆಯ ಅಳಿಯನಾಗಿದ್ದು, ಜಿಲ್ಲೆಗೆ ಸಚಿವ ಸ್ಥಾನ ಸಿಗದಿರುವುದು ನನಗೂ ವೈಯಕ್ತಿಕವಾಗಿ ಬೇಸರ ತಂದಿದೆ," ಎಂದರು.

ಸರ್ಕಾರದಲ್ಲಿ ಇನ್ನೂ ವಿಜಯೇಂದ್ರ ಹಸ್ತಕ್ಷೇಪ
"ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ರಾಜ್ಯ ಸರ್ಕಾರದಲ್ಲಿ ಇನ್ನೂ ಹಸ್ತಕ್ಷೇಪ ಮಾಡುತ್ತಿದ್ದಾರೆ. ಕಾವೇರಿಯಲ್ಲಿನ ಕೆಲವು ದೃಶ್ಯಗಳ ಬಗ್ಗೆ ನನಗೆ ಮಾಹಿತಿ ಇದೆ. ಇನ್ನೊಂದು ವಾರ ಕಾಯಿರಿ ಎಲ್ಲವನ್ನೂ ಹೇಳುವೆ," ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಆಕ್ರೋಶ ವ್ಯಕ್ತಪಡಿಸಿದರು.
Recommended Video
ಹುಬ್ಬಳ್ಳಿಯಲ್ಲಿ ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, "ಈಗ ಹಿಂದು ವಿರೋಧಿ ಸಿಎಂ ಆಗಿದ್ದಾರೆ ಎಂಬ ನೋವು ಕಾರ್ಯಕರ್ತರಲ್ಲಿದೆ. ಯಾರು ಹಿಂದೆ ಹೊಡಿಸಿದ್ದರು, ಯಾರು ಹೊಡೆತ ತಿಂದಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಪಕ್ಷಕ್ಕೆ ಹಾನಿ ಆಗಬಾರದು ಎಂದು ಹೈಕಮಾಂಡ್ ಈ ನಿರ್ಣಯ ಕೈಗೊಂಡಿದೆ. ಹಿಂದೆ ಎಷ್ಟೋ ಜನ ಕಮ್ಯುನಿಷ್ಟ್ ಪಕ್ಷದಲ್ಲಿ ಇದ್ದವರು ಬಿಜೆಪಿಗೆ ಬಂದಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಹೋಗುವ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ," ಎಂದು ತಿಳಿಸಿದರು.
"ನಮ್ಮ ಬೇಡಿಕೆ ಸಿಎಂ ಬದಲಾವಣೆ ಆಗಬೇಕು ಅಂತಿತ್ತು, ಈಗ ನಾಯಕತ್ವ ಬದಲಾವಣೆ ಆಗಿದೆ. ಒಬ್ಬ ನಾಯಕ ತನ್ನ ಛಾಪು ಇಟ್ಟುಕೊಳ್ಳಬೇಕು. ಸಿಎಂ ಬಸವರಾಜ ಬೊಮ್ಮಾಯಿ ಮಾಜಿ ಸಿಎಂ ಯಡಿಯೂರಪ್ಪನವರ ನೆರಳು ಆಗಲ್ಲ. ಅವರಿಗೆ ಸ್ವಲ್ಪ ಸಮಯ ಕೊಡಿ ಎಂದ ಶಾಸನ ಬಸನಗೌಡ ಪಾಟಿಲ್ ಯತ್ನಾಳ್, ಹಿಂದೆ ಮೂರು ಜನ ಡಿಸಿಎಂ ಆಗಿದ್ದರು. ಅವರು ನಮ್ಮ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ ಅಂತಿದ್ದರು. ಈಗ ಡಿಸಿಎಂ ಸ್ಥಾನವೇ ಇಲ್ಲ," ಎಂದು ವ್ಯಂಗ್ಯವಾಡಿದರು.












Click it and Unblock the Notifications