BS Yediyurappa Helicopter : ಯಡಿಯೂರಪ್ಪ ಇದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ತೊಂದರೆ
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಇದ್ದ ಹೆಲಿಕಾಪ್ಟರ್ ಲ್ಯಾಂಡ್ ಆಗುವಾಗ ತೊಂದರೆ ಉಂಟಾಗಿದೆ.
ಕಲಬುರಗಿ, ಮಾರ್ಚ್ 06; ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ನಾಯಕ ಬಿ. ಎಸ್. ಯಡಿಯೂರಪ್ಪ ಇದ್ದ ಹೆಲಿಕಾಪ್ಟರ್ ಲ್ಯಾಂಡ್ ಆಗುವಾಗ ತೊಂದರೆ ಉಂಟಾಗಿದೆ. ತಕ್ಷಣ ಜಾಗೃತನಾದ ಪೈಲೆಟ್ ಮತ್ತೆ ಎರಡು ಸುತ್ತು ಹಾರಾಟ ನಡೆಸಿ, ಬಳಿಕ ಯಶಸ್ವಿಯಾಗಿ ಲ್ಯಾಂಡ್ ಮಾಡಿದ್ದಾರೆ. ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಈ ಘಟನೆ ನಡೆಸಿದೆ.
ಸೋಮವಾರ ಬಿ. ಎಸ್. ಯಡಿಯೂರಪ್ಪ ಜೇವರ್ಗಿ ಪಟ್ಟಣಕ್ಕೆ ಆಗಮಿಸಿದರು. ಆದರೆ ಹೆಲಿಪ್ಯಾಡ್‌ನಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಆಗುವಾಗ ಅಕ್ಕಪಕ್ಕದ ಹೊಲಗಳಿಂದ ಪ್ಲಾಸ್ಟಿಕ್ ಚೀಲಗಳು ಹಾರಿಬಂದವು. ಸ್ಥಳದಲ್ಲಿ ದಟ್ಟವಾದ ಧೂಳು ತುಂಬಿಕೊಂಡಿತು. ಇದರಿಂದಾಗಿ ಹೆಲಿಕಾಪ್ಟರ್ ಇಳಿಸಲು ಸಾಧ್ಯವಾಗಲಿಲ್ಲ.

ತಕ್ಷಣ ಪೈಲೆಟ್ ಹೆಲಿಕಾಪ್ಟರ್ ಅನ್ನು ಮತ್ತೆ ಮೇಲಕ್ಕೆ ತೆಗೆದುಕೊಂಡು ಹೋದರು. ಆಗಸದಲ್ಲಿಯೇ ಎರಡು ಸುತ್ತು ಹೊಡೆಸಿದರು. ಅಷ್ಟರಲ್ಲಿ ಸ್ಥಳದಲ್ಲಿದ್ದ ಪೊಲೀಸರು ಹೆಲಿಪ್ಯಾಡ್‌ಗೆ ಬಂದಿದ್ದ ಪ್ಲಾಸ್ಟಿಕ್ ಚೀಲಗಳನ್ನು ಅಲ್ಲಿಂದ ತೆಗೆದು ಹೆಲಿಕಾಪ್ಟರ್ ಸುರಕ್ಷಿತವಾಗಿ ಲ್ಯಾಂಡ್ ಆಗಲು ಬೇಕಾದ ವ್ಯವಸ್ಥೆ ಮಾಡಿದರು. ಬಳಿಕ ಸುರಕ್ಷಿತವಾಗಿ ಹೆಲಿಕಾಪ್ಟರ್ ಲ್ಯಾಂಡ್ ಆಯಿತು. ಈ ಘಟನೆಯಿಂದ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು.
#WATCH | Kalaburagi | A helicopter, carrying former Karnataka CM and senior leader BS Yediyurappa, faced difficulty in landing after the helipad ground filled with plastic sheets and waste around. pic.twitter.com/BJTAMT1lpr
— ANI (@ANI) March 6, 2023
ಜೇವರ್ಗಿ ಪಟ್ಟಣದ ಹೆಲಿಪ್ಯಾಡ್ ಸಮೀಪ ಹೊಲಗಳಿವೆ. ಹೆಲಿಕಾಪ್ಟರ್ ಕೆಳಗೆ ಬಂದಾಗ ಅದರ ಗಾಳಿಯ ತೀವ್ರತೆಗೆ ಹೊಲದಲ್ಲಿ ರೈತರು ಹಾಕಿದ್ದ ಪ್ಲಾಸ್ಟಿಕ್ ಚೀಲಗಳು ಹಾರಿ ಬಂದವು. ಅವರು ಹೆಲಿಪ್ಯಾಡ್ ಸುತ್ತ ಬಂದು ಹೆಲಿಕಾಪ್ಟರ್ ರೆಕ್ಕೆಗೆ ಸಿಲುಕುವ ಅಪಾಯವಿತ್ತು. ಆದ್ದರಿಂದ ಹೆಲಿಕಾಪ್ಟರ್ ಲ್ಯಾಂಡ್ ಮಾಡಲಿಲ್ಲ.
ಹೆಲಿಕಾಪ್ಟರ್ ಲ್ಯಾಂಡ್ ಆಗುವಾಗ ಉಂಟಾದ ತೊಂದರೆಯ ವಿಡಿಯೋ ಸೆರೆಯಾಗಿದೆ. ಕೆಲವು ಕ್ಷಣಗಳ ಬಳಿಕ ಹೆಲಿಕಾಪ್ಟರ್ ಯಶಸ್ವಿಯಾಗಿ ಲ್ಯಾಂಡ್ ಆಯಿತು.
ಜೇವರ್ಗಿ ಪಟ್ಟಣದಲ್ಲಿ ನಡೆಯುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳಲು ಯಡಿಯೂರಪ್ಪ ಆಗಮಿಸಿದ್ದರು. ಆದರೆ ಹೆಲಿಕಾಪ್ಟರ್ ಲ್ಯಾಂಡ್ ಆಗುವ ವೇಳೆ ನಡೆದ ಘಟನೆಯಿಂದ ಪೊಲೀಸರು ಕ್ಷಣಕಾಲ ಗಾಬರಿಗೊಂಡರು.












Click it and Unblock the Notifications