5 ಸಾವಿರ ರೂ. ದಂಡ ಕಟ್ಟಲು ಒಪ್ಪಿದ ಸಚಿವ ಪ್ರಿಯಾಂಕ್ ಖರ್ಗೆ!
ಕಲಬುರಗಿ, ಆಗಸ್ಟ್ 31; ಕರ್ನಾಟಕ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಮನೆಯೊಡತಿಗೆ ಮಾಸಿಕ 2,000 ರೂ. ನೀಡುವ 'ಗೃಹಲಕ್ಷ್ಮಿ' ಯೋಜನೆಗೆ ಆಗಸ್ಟ್ 30ರಂದು ಚಾಲನೆ ಸಿಕ್ಕಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವ ಪ್ರಿಯಾಂಕ್ ಖರ್ಗೆಗೆ 5 ಸಾವಿರ ರೂ. ದಂಡವನ್ನು ವಿಧಿಸಲಾಗಿದೆ.
ಕಲಬುರಗಿ ಮಹಾನಗರ ಪಾಲಿಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಗೆ 5 ಸಾವಿರ ರೂ. ದಂಡ ಹಾಕಿದ್ದು, ದಂಡ ಕಟ್ಟಲು ಸಚಿವರು ಸಹ ಒಪ್ಪಿಗೆ ನೀಡಿದ್ದಾರೆ.

ಗುರುವಾರ ಮಹಾನಗರ ಪಾಲಿಕೆ ಈ ಕುರಿತು ಟ್ವೀಟ್ ಮಾಡಿದೆ. 'ಶ್ರೀ ಪ್ರಿಯಾಂಕ್ ಖರ್ಗೆರವರು, ಮಾನ್ಯ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಕಲಬುರಗಿ ಮಹಾನಗರ ಪಾಲಿಕೆಯ ಅನುಮತಿ ಪಡೆಯದೇ ಬ್ಯಾನರ್ ಹಾಕಿದ್ದು ಕಂಡ ಬಂದ ಕಾರಣ, ಪಾಲಿಕೆಯಿಂದ ಮಾನ್ಯ ಸಚಿವರಿಗೆ ರೂ. 5,000/- ಗಳ ದಂಡ ವಿಧಿಸಲಾಯಿತು. ಸದರಿ ವಿಷಯವನ್ನು ಮನಗಂಡು, ಪಾಲಿಕೆಯ ಕ್ರಮವನ್ನು ಬೆಂಬಲಿಸಿ ದಂಡದ ಮೊತ್ತವನ್ನು ಪಾವತಿಸಲು ಒಪ್ಪಿದರು' ಎಂದು ಪಾಲಿಕೆ ಟ್ವೀಟ್‌ನಲ್ಲಿ ಹೇಳಿದೆ.
ಫೆಕ್ಸ್‌ನಲ್ಲಿ ಸಚಿವರ ಫೋಟೋ; 'ಗೃಹಲಕ್ಷ್ಮಿ' ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮ ಕಲಬುರಗಿಯಲ್ಲಿ ಬುಧವಾರ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಆಳಂದ ರಸ್ತೆಯಲ್ಲಿರುವ ಕಲಬುರಗಿ ತಾಲೂಕಿನ ಭೀಮಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಂಗರಗಾ ಕಲ್ಯಾಣ ಮಂಟಪದಲ್ಲಿ ನಡೆಯುವ ಚಾಲನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಶ್ರೀ ಪ್ರಿಯಾಂಕ್ ಖರ್ಗೆರವರು, ಮಾನ್ಯ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಕಲಬುರಗಿ ಮಹಾನಗರ ಪಾಲಿಕೆಯ ಅನುಮತಿ ಪಡೆಯದೇ ಬ್ಯಾನರ್ ಹಾಕಿದ್ದು ಕಂಡ ಬಂದ ಕಾರಣ, ಪಾಲಿಕೆಯಿಂದ ಮಾನ್ಯ ಸಚಿವರಿಗೆ ರೂ. 5,000/- ಗಳ ದಂಡ ವಿಧಿಸಲಾಯಿತು. ಸದರಿ ವಿಷಯವನ್ನು ಮನಗಂಡು, ಪಾಲಿಕೆಯ ಕ್ರಮವನ್ನು ಬೆಂಬಲಿಸಿ ದಂಡದ ಮೊತ್ತವನ್ನು ಪಾವತಿಸಲು ಒಪ್ಪಿದರು. pic.twitter.com/7yJdpuWItI
— Kalaburgi City Corporation (@KalaburgiCorp) August 31, 2023
ಈ ಕಾರ್ಯಕ್ರಮ ನಡೆಯುವ ಸ್ಥಳದ ಸಮೀಪ ಕಲಬುರಗಿ ಮಹಾನಗರ ಪಾಲಿಕೆಯ ಅನುಮತಿ ಪಡೆಯದೇ ಬ್ಯಾನರ್ ಹಾಕಲಾಗಿತ್ತು. ಈ ಬ್ಯಾನರ್‌ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಫೋಟೋವಿತ್ತು. ಆದ್ದರಿಂದ ಪಾಲಿಕೆ ಸಚಿವರಿಗೆ ದಂಡವನ್ನು ಹಾಕಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ 'ಗೃಹಲಕ್ಷ್ಮಿ' ಯೋಜನೆಗೆ ಚಾಲನೆ ನೀಡಿದ್ದರು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಗಿತ್ತು. ಕಲಬುರಗಿ ಜಿಲ್ಲೆಯ 261 ಗ್ರಾಮ ಪಂಚಾಯತಿ ಕೇಂದ್ರ ಸ್ಥಾನದಲ್ಲಿ ಮತ್ತು ನಗರ-ಸ್ಥಳೀಯ ಸಂಸ್ಥೆಗಳ 52 ವಾರ್ಡ್ ಸೇರಿದಂತೆ ಒಟ್ಟು 313 ಕಡೆ ಈ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಗಿತ್ತು.
ಕರ್ನಾಟಕ ಹೈಕೋರ್ಟ್ ಆದೇಶದ ಅನ್ವಯ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಫೆಕ್ಸ್, ಬ್ಯಾನರ್‌ಗಳನ್ನು ಹಾಕಿದರೆ ದಂಡ ವಿಧಿಸಲಾಗುತ್ತದೆ. ಬಹೃತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಸಹ ಬ್ಯಾನರ್ ಅಳವಡಿಕೆ ನಿಯಮವನ್ನು ಕಠಿಣಗೊಳಿಸಿದೆ.












Click it and Unblock the Notifications