ಅನ್ಯಧರ್ಮೀಯ ಯುವತಿಯ ಜೊತೆ ಪ್ರೇಮ, ನಡುರಸ್ತೆಯಲ್ಲಿ ಕೊಲೆ
ಕಲಬುರಗಿ, ಮೇ 26: ಅನ್ಯಧರ್ಮದ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕನನ್ನು ಆಕೆಯ ಕುಟುಂಬಸ್ಥರೇ ಬರ್ಬರವಾಗಿ ಹತ್ಯೆಗೈದ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ.
ಭೀಮನಗರ ಬಡಾವಣೆ ನಿವಾಸಿ ವಿಜಯ ಕಾಂಬಳೆ (25) ಎಂಬಾತನೇ ಕೊಲೆಯಾದ ದುರ್ದೈವಿ. ವಿಜಯ್ ಅನ್ಯಧರ್ಮೀಯ ಯುವತಿಯನ್ನು ಪ್ರೀತಿಸುತ್ತಿದ ಎಂಬ ಕಾರಣಕ್ಕೆ ಯುವತಿಯ ಕುಟುಂಬಸ್ಥರು ಹಾಗೂ ಸಹೋದರರು ನಡು ರಸ್ತೆಯಲ್ಲಿ ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ವಾಡಿ ಪಟ್ಟಣದ ಎಂದಿನಂತೆ ತಿರುಗಾಡುತ್ತಿದ್ದ ವಿಜಯ್‌ನನ್ನು ರೈಲ್ವೆ ತಡೆಗೋಡೆಯ ಬಳಿ ತಡೆದು ಜಗಳ ತೆಗೆದಿದ್ದಾರೆ. ನಂತರ ದುಷ್ಕರ್ಮಿಗಳು ಮಾರಕಾಸ್ತ್ರ, ಕಲ್ಲು, ಕಟ್ಟಿಗೆಯಿಂದ ಹೊಡೆದು ಪರಾರಿಯಾಗಿದ್ದಾರೆ. ಬಲವಾದ ಪೆಟ್ಟು ಬಿದ್ದಿದ್ದರಿಂದ ತೀವ್ರ ರಕ್ತಸ್ರಾವದಿಂದ ಒದ್ದಾಡಿದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ವಿಜಯ್ ಕೊಲೆಯಿಂದ ಪಟ್ಟಣದಲ್ಲಿ ಆತಂಕದ ಛಾಯೆ ಮನೆ ಮಾಡಿದೆ. ಯುವಕನನ್ನು ಕಳೆದುಕೊಂಡಿರುವ ಕುಟುಂಬಸ್ಥರ ರೋಧನೆ ಹೇಳತೀರದಾಗಿದೆ. ಘಟನಾ ಸ್ಥಳಕ್ಕೆ ವಾಡಿ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದು, ಹಂತಕರಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಕರೆ ಮಾಡಿ ಕರೆಸಿಕೊಂಡ ಕೊಲೆ
ವಿಜಯ್ ಕೆಲಸ ಮುಗಿಸಿ ಮನೆಗೆ ಬಂದಿದ್ದ. ಅವರಿಗೆ ಯಾರೋ ಕರೆ ಮಾಡಿದರು. ಹತ್ತು ನಿಮಿಷ ಬರುತ್ತೇನೆಂದು ಹೇಳಿ ಹೋಗಿದ್ದ. ನಂತರ ಘಟನೆ ಬಗ್ಗೆ ನಮಗೆ ಸುದ್ದಿ ಬಂತು. ಹೋಗಿ ನೋಡುವಷ್ಟರಲ್ಲಿ ಆತ ಮೃತಪಟ್ಟಿದ್ದ. ನನ್ನ ಮಗನನ್ನು ಹೀನಾಯವಾಗಿ ಕೊಚ್ಚಿ ಕೊಲೆಗೈದಿದ್ದಾರೆ. ಆತನ ಸ್ನೇಹಿತೆಯ ಮನೆಯವರು ಯಾವುದೇ ಬೆದರಿಕೆಯಾಕಿರಲಿಲ್ಲ, ಆದರೆ ಆಕೆಯ ಅಣ್ಣ ಮಾತ್ರ ಜೀವ ಬೆದರಿಕೆ ಹಾಕಿದ್ದ ಎಂದು ತಿಳಿಸಿದರು.
ಕಾರಣ ಗೊತ್ತಿಲ್ಲ , ಅಚಾನಕ್ ಆಗಿ ನಡೆದೋಯ್ತು
ವಿಜಯ್ ಪ್ರೀತಿಸುತ್ತಿದ್ದ ಹುಡುಗಿ ಮನೆಯವರು, ನಮ್ಮ ಮನೆಯವರು ಈ ವಿಷಯದ ಬಗ್ಗೆ ಮಾತನಾಡಿದ್ದೆವು. ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಅಚಾನಕ್ ಆಗಿ ಈ ಘಟನೆ ನಡೆಸಿದೆ. ಆದರೆ ಇದಕ್ಕೆ ನಿಖರ ಕಾರಣ ಏನು ಎಂಬುದು ಗೊತ್ತಿಲ್ಲ ಮೃತನ ಸಂಬಂಧಿ ರಾಜಶೇಖರ ಎಂಬುವವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಒಬ್ಬಂಟಿಯಾದ ತಾಯಿ
ಕಾಲ ಮುಂದುವರಿದಂತೆ ಎಲ್ಲವೂ ಮೊಬೈಲ್ ಮೂಲಕವೇ ಪ್ರೀತಿ ಪ್ರೇಮ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇದಕ್ಕೆಲ್ಲಾ ಕೊಲೆ ಮಾಡಿದ್ರೆ ಹೇಗೆ? ಪೊಲೀಸ್ , ಕಾನೂನು ಅನ್ನೋದಾದರು ಇರೋದು ಯಾಕೆ? ಈಗಾಗಲೇ ಯುವಕನ ತಂದೆ ನಿಧನರಾಗಿದ್ದಾರೆ, ಇದೀಗ ಮಗನನ್ನು ಕಳೆದುಕೊಂಡ ಆ ಮಹಿಳೆ ಒಬ್ಬಂಟಿಯಾಗಿದ್ದಾರೆ ಎಂದು ಹಿಂದೂ ಪರ ಸಂಘಟನೆಯ ಈರಣ್ಣಾ ಏರಿ ತಿಳಿಸಿದ್ದು, ಸರಕಾರ ಒಬ್ಬಂಟಿ ತಾಯಿಯ ನೆರವಿಗೆ ಬರಬೇಕು ಎಂದು ಮನವಿ ಮಾಡಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications