ಸ್ಟಾರ್ ಪ್ರಚಾರಕ ಯೋಗಿ ಆದಿತ್ಯನಾಥ್ ಗೆ ರಾಜಸ್ಥಾನದಲ್ಲಿ ಸಕತ್ ಬೇಡಿಕೆ
ಜೈಪುರ, ಡಿಸೆಂಬರ್ 02: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಚುನಾವಣಾ ಭಾಷಣದ ವೈಖರಿಗೆ ಸಕತ್ ಬೇಡಿಕೆ ಹುಟ್ಟುಕೊಂಡಿದೆ. ಪಂಚರಾಜ್ಯಗಳ ಚುನಾವಣೆಯಲ್ಲಿ ಸರಿ ಸುಮಾರು 100ಕ್ಕೂ ಅಧಿಕ ಪ್ರಚಾರ ಸಮಾವೇಶಗಳಲ್ಲಿ ಪಾಲ್ಗೊಳ್ಳಲಿರುವ ಯೋಗಿ ಅವರಿಗೆ ಇನ್ನಷ್ಟು ಸಭೆಗಳಿಗೆ ಬರುವಂತೆ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಅವರಿಂದ ಆಹ್ವಾನ ಬಂದಿದೆ.
ಗುಜರಾತ್, ಕರ್ನಾಟಕ, ತ್ರಿಪುರಾ ಹಾಗೂ ಹಿಮಾಚಲ ಪ್ರದೇಶ ಚುನಾವಣೆಗಳಲ್ಲಿ ಮೋದಿ ಅವರ ಭಾಷಣದ ಪರಿಣಾಮಕಾರಿಯಾಗಿತ್ತು. ಇದೇ ರೀತಿ ಯೋಗಿ ಆದಿತ್ಯನಾಥ್ ಅವರು ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿದ್ದಾರೆ ಎಂಬ ನಂಬಿಕೆ ಹುಟ್ಟುಕೊಂಡಿದೆ.
ಪಂಚರಾಜ್ಯ ಚುನಾವಣೆಗಳ ಸ್ಟಾರ್ ಪ್ರಚಾರಕರಾಗಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಭಾಷಣಕ್ಕೆ ಹಿಂದಿ ಭಾಷಿಕ ರಾಜ್ಯಗಳಲ್ಲಿ ಹೆಚ್ಚಿನ ಪ್ರಭಾವವಿದೆ. ಹೀಗಾಗಿ, ಈಗ ಚುನಾವಣೆ ನಡೆಯುತ್ತಿರುವ ಎಲ್ಲಾ ರಾಜ್ಯಗಳಲ್ಲಿ ಯೋಗಿ ಅವರ ಬೇಡಿಕೆ ಹೆಚ್ಚಿದ್ದು, ಸರಿ ಸುಮಾರು 100ಕ್ಕೂ ಅಧಿಕ ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.

ಛತ್ತೀಸ್ ಗಢ, ರಾಜಸ್ಥಾನದಿಂದ ಮೊದಲಿಗೆ ಬೇಡಿಕೆ ಹೆಚ್ಚು ಕೇಳಿ ಬಂದಿತು. ನಂತರ ಮಧ್ಯಪ್ರದೇಶ, ತೆಲಂಗಾಣ ಹಾಗೂ ಮಿಜೋರಾಂನಿಂದಲೂ ಆಹ್ವಾನ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಂತರ ಜನ ಸಮೂಹವನ್ನು ಆಕರ್ಷಿಸಬಲ್ಲ ಮುಖಂಡರಾಗಿ ಯೋಗಿ ಹೊರ ಹೊಮ್ಮಿದ್ದಾರೆ.
ನಾಥ ಪರಂಪರೆ, ಗುರು ಗೋರಖ್ ನಾಥ್ ಬಗ್ಗೆ ರಾಜಸ್ಥಾನದ ಪಠ್ಯಪುಸ್ತಕದಲ್ಲಿ ಅಳವಡಿಸಲು ರಾಜೇ ಸರ್ಕಾರ ನಿರ್ಧರಿಸಿದೆ. ನಾಥ ಪಂಥ, ಯೋಗ ಪರಂಪರೆ ಬಗ್ಗೆ ಮಕ್ಕಳಿಗೆ ತಿಳಿಸುವುದು ಮುಖ್ಯ ಎಂದು ಸರ್ಕಾರ ಮುಂದಾಗಿದೆ.
ಗುರು ಗೋರಖ್ ನಾಥ್ ಅವರ ಸ್ಮಾರಕ, ಗ್ರಂಥಾಲಯವನ್ನು ಸ್ಥಾಪಿಸುವ ಭರವಸೆಯನ್ನು ನೀಡಲಾಗಿದೆ. ಬಿಕಾನೇರ್ ನಿಂದ ಬದ್ಮಾರ್ ಸೇರಿದಂತೆ ಜಲೋರ್ ನ ಹಲವು ಜಿಲ್ಲೆಗಳಲ್ಲಿ ನಾಥ ಪಂಥದ ಪ್ರಭಾವ ಹೆಚ್ಚಾಗಿದೆ. ಪಶ್ಚಿಮ ರಾಜಸ್ಥಾನದಲ್ಲಿ ಯೋಗಿ ಆದಿತ್ಯನಾಥ್ ಪ್ರಚಾರ ಸಭೆಗೆ ಬೇಡಿಕೆಯಿದೆ.












Click it and Unblock the Notifications