ರಾಜೆಯ 'ತೂಕ'ದ ಬಗ್ಗೆ ಮಾತನಾಡಿದ ಯಾದವ್ ಗೆ ತಪರಾಕಿ
ಜೈಪುರ, ಡಿಸೆಂಬರ್ 07: ರಾಜಸ್ಥಾನದಲ್ಲಿ 'ತೂಕ'ದ ಹೇಳಿಕೆಗಳು ವಿವಾದ ಸೃಷ್ತಿಸುತ್ತಿವೆ! 'ವಸುಂಧರಾ ರಾಜೆ ದಪ್ಪವಾಗಿದ್ದಾರೆ. ಅವರಿಗೆ ರೆಸ್ಟ್ ಬೇಕು' ಎಂಬ ಹೇಳಿಕೆ ನೀಡಿದ್ದ ಜೆಡಿಯು ಉಚ್ಛಾಟಿತ ನಾಯಕ ಶರದ್ ಯಾದವ್ ಹೇಳಿಕೆಗೆ ಇದೀಗ ಮುಖ್ಯಮಂತ್ರಿ ವಸುಂಧರಾ ರಾಜೆ ಪ್ರತಿಕ್ರಿಯೆ ನೀಡಿದ್ದಾರೆ.
"ಶರದ್ ಯಾದವ್ ಅವರ ಹೇಳಿಕೆ ಕೇಳಿ ನನಗೆ ನಿಜಕ್ಕೂ ಆಘಾತವಾಯಿತು. ಬೇಸರವಾಯಿತು. ಇದು ಮಹಿಳೆಯರಿಗೆ ಮಾಡುವ ಅವಮಾನ. ಯುವಕರಿಗೆ ಇದರಿಂದ ಯಾವ ರೀತಿಯ ಸಂದೇಶ ನೀಡಿದಂತಾಗುತ್ತದೆ. ಇದು ಯುವಕರಿಗೆ ನಿಜಕ್ಕೂ ತಪ್ಪು ಸಂದೇಶ ನೀಡುತ್ತದೆ. ಕಾಂಗ್ರೆಸ್ ಮತ್ತು ಅದರ ಮೈತ್ರಿಪಕ್ಷಗಳು ನೀಡುವ ಸಂದೇಶ ಇದೇನಾ? ಅವರು ತಮ್ಮ ಭಾಷೆಯ ಮೇಲೆ ಹಿಡಿತ ಇಟ್ಟುಕೊಂಡರೆ ಒಳ್ಳೆಯದು" ಎಂದು ರಾಜೆ ಖಡಕ್ ತಿರುಗೇಟು ನೀಡಿದ್ದಾರೆ.
"ತೆಳ್ಳಗಿದ್ದ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ದಪ್ಪವಾಗಿದ್ದಾರೆ. ಅವರಿಗೆ ವಿಶ್ರಾಂತಿಯ ಅಗತ್ಯವಿದೆ" ಎಂದು ಯಾದವ್ ಹೇಳಿಕೆ ನೀಡಿದ್ದರು. ರಾಜೆ ಪ್ರತಿಕ್ರಿಯೆಯ ನಂತರ ಮತ್ತೆ ತಮ್ಮ ಮಾತನ್ನು ಸಮರ್ಥಿಸಿಕೊಂಡ ಯಾದವ್, 'ರಾಜೆ ಅವರ ಭಾವನೆಗಳನ್ನು ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ. ನಾನು ಅವರನ್ನು ಭೇಟಿ ಮಾಡಿದಾಗಲೂ ನಿಮ್ಮ ತೂಕ ಹೆಚ್ಚಾಗುತ್ತಿದೆ ಎಂದಿದ್ದೆ. ಈಗಲೂ ಅದನ್ನೇ ಹೇಳಿದ್ದೇನೆ' ಎಂದಿದ್ದಾರೆ.

ಯಾದವ್ ಹೇಳಿಕೆಯನ್ನು ಈಗಾಗಲೇ ರಾಜಸ್ಥಾನ ಬಿಜೆಪಿ ಚುನಾವಣಾ ಆಯೋಗದ ಗಮನಕ್ಕೆ ತಂದಿದೆ. 200 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜಸ್ಥಾನದಲ್ಲಿ ಶುಕ್ರವಾರ(ಡಿ.7) ರಂದು ಮತದಾನ ನಡೆಯುತ್ತಿದ್ದು, ಡಿ 11 ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications