• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಳ್ಳನಿಗೆ ಎರಡು ಡಜನ್ ಬಾಳೆಹಣ್ಣು ತಿನ್ನಿಸಿದ ಪೊಲೀಸರು: ಆಪರೇಷನ್ ಬನಾನಾ ಸಕ್ಸಸ್!

|

ಬಿಕಾನೇರ್, ಆಗಸ್ಟ್ 23: ಚಾಣಾಕ್ಷ ಕಳ್ಳರು ಪೊಲೀಸರಿಗೆ ಯಾಮಾರಿಸಿ 'ಚಳ್ಳೆಹಣ್ಣು' ತಿನ್ನಿಸುವುದು ಹೊಸ ವಿಚಾರವಲ್ಲ. ಇನ್ನೇನು ಹಿಡಿದೇಬಿಟ್ಟೆವು ಎಂಬ ಉತ್ಸಾಹದಲ್ಲಿರುವ ಪೊಲೀಸರ ಕೈಗೆ ಸಿಗದೆ ಅವರಿಂದ ನುಣುಚಿಕೊಳ್ಳುವ ಕಳ್ಳರ ಬುದ್ಧಿವಂತಿಕೆಯನ್ನು 'ಚಳ್ಳೆಹಣ್ಣು ತಿನ್ನಿಸು' ಎಂಬ ಉಪಮೆ ನೀಡಿ ವರ್ಣಿಸಲಾಗುತ್ತದೆ.

ಆದರೆ, ಪರಿಸ್ಥಿತಿ ಯಾವಾಗಲೂ ಕಳ್ಳರ ಪರವಾಗಿ ಇರುವುದಿಲ್ಲ. ಎಷ್ಟೇ ಚಾಲಾಕಿಯಾದರೂ ಒಮ್ಮೊಮ್ಮೆ ಪೊಲೀಸರ ಬುದ್ಧಿವಂತಿಕೆಗೆ ಕಳ್ಳರು ಶರಣಾಗಲೇಬೇಕಾಗುತ್ತದೆ. ಇದಕ್ಕೆ ಒಂದು ತಾಜಾ ಉದಾಹರಣೆ ರಾಜಸ್ಥಾನದಲ್ಲಿ ಸಿಕ್ಕಿದೆ. ಇಲ್ಲಿ ಪೊಲೀಸರೇ ಕಳ್ಳನಿಗೆ ತಿನ್ನಿಸಿದ್ದಾರೆ. ಆದರೆ ಇದು ಚಳ್ಳೆಹಣ್ಣಲ್ಲ, ಬದಲಾಗಿ ಬಾಳೆಹಣ್ಣು.

ಒಂದೇ ಕೀ ಬಳಸಿ 23 ವಾಹನಗಳ ಕದ್ದ ಚಾಲಾಕಿ ಕಳ್ಳ

ಸಾಮಾನ್ಯವಾಗಿ ಕಳ್ಳರು ಸಿಕ್ಕಿಬಿದ್ದಾಗ ಪೊಲೀಸರು ಅವರಿಗೆ 'ಏರೋಪ್ಲೇನ್' ಹತ್ತಿಸಿ ಚೆನ್ನಾಗಿ ಟ್ರೀಟ್‌ಮೆಂಟ್ ಕೊಟ್ಟು ಆತ ನಡೆಸಿದ ಕಿಡಿಗೇಡಿತನಗಳ ಮಾಹಿತಿ ಕಲೆಹಾಕುತ್ತಾರೆ. ಆತ ಬಾಯ್ಬಿಟ್ಟರೂ ಹೊಟ್ಟೆ ತುಂಬುವಷ್ಟು ಊಟ ಸಿಗುತ್ತದೆ ಎಂಬ ಖಾತರಿಯಿಲ್ಲ. ಜೈಲೂಟದ ಹೇಗಿರುತ್ತದೆ ಎಂಬ ಬಗ್ಗೆ ಅನೇಕರು ಹೇಳಿಕೊಂಡಿದ್ದಾರೆ. ಹೀಗಿರುವಾಗ ಪೊಲೀಸರು ಕಳ್ಳನಿಗೆ ಬಾಳೆಹಣ್ಣು ತಿನ್ನಿಸುವುದೆಂದರೇನು? ಅದೂ ಒಂದೆರಡಲ್ಲ, ಬರೋಬ್ಬರಿ 24 ಹಣ್ಣು. ಅದಕ್ಕೆ ಕಾರಣವೇನು? ಮುಂದು ಓದಿ...

ಸರ ಕದ್ದಿದ್ದ ದುಷ್ಕರ್ಮಿಗಳು

ಸರ ಕದ್ದಿದ್ದ ದುಷ್ಕರ್ಮಿಗಳು

ರಾಜಸ್ಥಾನದ ಬಿಕಾನೇರ್ ಗಂಗಾಶಹರ್ ಎಂಬಲ್ಲಿ ಮಂಗಳವಾರ ಸಂಜೆ ಬೈಕ್‌ನಲ್ಲಿ ಬಂದ ಇಬ್ಬರು ಕಿಡಿಗೇಡಿಗಳು ಮಹಿಳೆಯೊಬ್ಬರಿಂದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಕೆಲವೇ ಗಂಟೆಗಳಲ್ಲಿ ಪೊಲೀಸರು ಇಬ್ಬರೂ ಸರಗಳ್ಳರನ್ನು ಹಿಡಿದಿದ್ದರು. ಅವರಲ್ಲಿ ಒಬ್ಬನ ಗುರುತು ಪತ್ತೆಮಾಡಲಾಗಿತ್ತು. ಆದರೆ ಚಾಲಾಕಿ ಕಳ್ಳ ಪೊಲೀಸರ ದಾರಿ ತಪ್ಪಿಸಲು ಸರವನ್ನು ನುಂಗಿಬಿಟ್ಟಿದ್ದ.

ಆಸ್ಪತ್ರೆಯಲ್ಲಿ ಎಕ್ಸರೇ

ಆಸ್ಪತ್ರೆಯಲ್ಲಿ ಎಕ್ಸರೇ

ರಾಕೇಶ್ ಎಂಬ ಕಿಲಾಡಿ ಕಳ್ಳ ಸರ ನುಂಗಿದ್ದಾನೆ ಎಂದು ಪೊಲೀಸರಿಗೆ ಅನುಮಾನ ಮೂಡಿತು. ಆತನನ್ನು ಪಿಬಿಎಂ ಆಸ್ಪತ್ರೆಗೆ ಕರೆದೊಯ್ದು ಎಕ್ಸರೇಗೆ ಒಳಪಡಿಸಿದರು. ನೋಡಿದರೆ ಆತನ ಗಂಟಲಿನಲ್ಲಿ ಚಿನ್ನದ ಸರಗಳ ತುಂಡುಗಳು ಕಾಣಿಸಿದವು. ಆದರೆ ಅದನ್ನು ಹೊರ ತೆಗೆಯುವುದು ಹೇಗೆ? ಎಂಡೋಸ್ಕೋಪಿಕ್ ಸರ್ಜರಿ ಮಾಡಬೇಕು. ಅದಕ್ಕಿಂತ ಸರಳ ಉಪಾಯವೆಂದರೆ ಹಣ್ಣು ತಿನ್ನಿಸುವುದು ಎಂದು ವೈದ್ಯರೇ ಸಲಹೆ ನೀಡಿದರು.

ಪೊಟ್ಯಾಷಿಯಂ ಅಧಿಕ ಪ್ರಮಾಣದಲ್ಲಿರುವ ಆಹಾರ ತಿನ್ನಿಸುವುದು ಒಳಿತು. ಬಾಳೆಹಣ್ಣು ಮತ್ತು ಪಪಾಯ ಬಹಳ ಸುಲಭದ ಮಾರ್ಗ ಎಂದು ವೈದ್ಯರು ಹೇಳಿದರು.

ಪ್ರೇಯಸಿಗಾಗಿ ಕಳ್ಳತನ ಮಾಡುತ್ತಿದ್ದ ಕ್ಲೀನರ್ ಸಿಕ್ಕಿಬಿದ್ದಿದ್ಹೇಗೆ?

ಬಾಳೆಹಣ್ಣು-ಪಪಾಯ: ಭರ್ಜರಿ ಫಲಾಹಾರ!

ಬಾಳೆಹಣ್ಣು-ಪಪಾಯ: ಭರ್ಜರಿ ಫಲಾಹಾರ!

ಅಷ್ಟೇ ತಡ, ಪೊಲೀಸರು ಡಜನ್‌ಗಟ್ಟಲೆ ಬಾಳೆಹಣ್ಣು ಮತ್ತು ಪಪಾಯ ಹಣ್ಣುಗಳನ್ನು ತರಿಸಿದರು. ಬೇರೆ ಸಮಯದಲ್ಲಿ ಹೀಗೆ ಹಣ್ಣು ನೀಡಿದ್ದರೆ ಆತ ಖುಷಿಯಿಂದ ತಿನ್ನುತಿದ್ದನೇನೋ? ಆದರೆ ಪೊಲೀಸರ ಭಯಕ್ಕೆ ಒಲ್ಲದ ಮನಸಿನಿಂದಲೇ ತಿನ್ನಲು ಆರಂಭಿಸಿದ. ಆತನ ಹೊಟ್ಟೆ ತುಂಬಿದೆ ಎಂದರೂ ಪೊಲೀಸರು ಬಿಡಲಿಲ್ಲ. ರಾತ್ರಿ ಊಟದ ಬದಲು ಬಾಳೆಹಣ್ಣು ಮತ್ತು ಪಪಾಯವೇ ಆತನಿಗೆ ಆಹಾರವಾಗಿತ್ತು. ಹೀಗೆ ಆತ ತಿಂದಿದ್ದು ಬರೋಬ್ಬರಿ ಎರಡು ಡಜನ್ ಬಾಳೆಹಳ್ಳು ಮತ್ತು ಎರಡು ಪಪಾಯ ಹಣ್ಣುಗಳನ್ನು.

'ಆಪರೇಷನ್ ಬನಾನಾ' ಸಕ್ಸಸ್

'ಆಪರೇಷನ್ ಬನಾನಾ' ಸಕ್ಸಸ್

'ಆಪರೇಷನ್ ಬನಾನಾ' ಕೊನೆಗೂ ಯಶಸ್ವಿಯಾಗಿದ್ದು ಬುಧವಾರ ಬೆಳಿಗ್ಗೆ. ಕಳ್ಳ ಮಲವಿಸರ್ಜನೆ ಮಾಡುವಾಗ ಬಂಗಾರದ ಸರವೂ ಹೊರಬಂತು. ಪೊಲೀಸರು ಅದನ್ನು ಹೇಗೆ ಅದರ ಮಾಲೀಕರಿಗೆ ಮರಳಿಸಿದರೋ, ಅವರು ಅದನ್ನು ಮತ್ತೆ ಧರಿಸಿದ್ದಾರೆಯೋ ಎಂಬ ಬಗ್ಗೆ ಮಾಹಿತಿ ಗೊತ್ತಾಗಿಲ್ಲ! ಒಟ್ಟಿನಲ್ಲಿ ಪೊಲೀಸರು ಮಾತ್ರ ತಮ್ಮ ಸಾಹಸ ಫಲಪ್ರದವಾಗಿದ್ದಕ್ಕೆ ಸಂಭ್ರಮದಿಂದ ಬೀಗುತ್ತಿದ್ದಾರೆ.

ಅಂದಹಾಗೆ, ಇದು ಮೊದಲ ನಿದರ್ಶನವೇನಲ್ಲ. 2016ರಲ್ಲಿ ಮುಂಬೈನಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಸರ ನುಂಗಿದ್ದ ಕಳ್ಳನಿಗೆ ಅಲ್ಲಿ 40 ಬಾಳೆಹಣ್ಣುಗಳನ್ನು ತಿನ್ನಿಸಲಾಗಿತ್ತು.

English summary
Rajasthan Police had force-feed a theif to eat dozens of bananas to recover swallowed gold chain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X