ಗೆಹ್ಲೋಟ್ ಜೇಬಲ್ಲಿ ಮ್ಯಾಜಿಕ್ ನಂಬರ್; ಕಾಂಗ್ರೆಸ್ ಸರ್ಕಾರ ಸುಭದ್ರ!
ಜೈಪುರ, ಜುಲೈ 19 : ರಾಜಸ್ಥಾನದ ಕಾಂಗ್ರೆಸ್ ಬಿಕ್ಕಟ್ಟು ಈ ವಾರದಲ್ಲಿ ತಾರ್ಕಿಕ ಅಂತ್ಯವನ್ನು ಕಾಣಲಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮ್ಯಾಜಿಕ್ ನಂಬರ್ ಹೊಂದಿದ್ದು, ಕಾಂಗ್ರೆಸ್ ಸರ್ಕಾರ ಸುಭ್ರವಾಗಿರಲಿದೆ.
ಸಚಿನ್ ಪೈಲೆಟ್ ಮತ್ತು ಅಶೋಕ್ ಗೆಹ್ಲೋಟ್ ನಡುವಿನ ಅಸಮಾಧಾನ ಕಾಂಗ್ರೆಸ್ ಸರ್ಕಾರವನ್ನು ಅಲ್ಲಾಡಿಸಿತ್ತು. 200 ಸದಸ್ಯರ ಬಲದ ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಲು 101 ಶಾಸಕರ ಬಲ ಬೇಕಿದೆ.
ರಾಜಸ್ಥಾನ ಕಾಂಗ್ರೆಸ್ ಸಚಿನ್ ಪೈಲೆಟ್ ಸೇರಿದಂತೆ ಬಂಡಾಯದ ಬಾವುಟ ಹಾರಿಸಿದ್ದ 18 ಶಾಸಕರನ್ನು ಅನರ್ಹಗೊಳಿಸಲು ಮುಂದಾಗಿದೆ. ಸ್ಪೀಕರ್ ಈಗಾಗಲೇ ಈ ಕುರಿತು ಶಾಸಕರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಈ ಕುರಿತು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.
ಈ ವಾರದಲ್ಲಿ ಅಶೋಕ್ ಗೆಹ್ಲೋಟ್ ವಿಶೇಷ ವಿಧಾನಸಭೆ ಅಧಿವೇಶನವನ್ನು ಕರೆಯಲಿದ್ದಾರೆ. ವಿಧಾನಸಭೆಯಲ್ಲಿ ವಿಶ್ವಾಸಮತವನ್ನುಯಾಚಿಸಲಿದ್ದಾರೆ. ಮತ್ತೊಂದು ಕಡೆ ರಾಜ್ಯದ ಪ್ರತಿಪಕ್ಷ ಬಿಜೆಪಿ ರಾಜಕೀಯ ಬೆಳವಣಿಗೆಗಳನ್ನು ನೋಡುತ್ತಿದೆ.

ರಾಜಸ್ಥಾನ ವಿಧಾನಸಭೆ ಚಿತ್ರಣ
ರಾಜಸ್ಥಾನ ವಿಧಾನಸಭೆ ಒಟ್ಟು ಬಲ 200. ಸರ್ಕಾರ ಬಹುಮತ ಸಾಬೀತು ಮಾಡಲು 101 ಸದಸ್ಯರ ಬಲಬೇಕು. ಕಾಂಗ್ರೆಸ್ 107 ಸದಸ್ಯರನ್ನು ಹೊಂದಿದೆ. ಅಶೋಕ್ ಗೆಹ್ಲೋಟ್ ಜೊತೆ 104 ಶಾಸಕರು ಇದ್ದಾರೆ. ಸಚಿನ್ ಪೈಲೆಟ್ ಬಣದಲ್ಲಿ 19 ಶಾಸಕರು ಇದ್ದಾರೆ.

ಅನರ್ಹಗೊಂಡರೆ ಲೆಕ್ಕಾಚಾರ
ಒಂದು ವೇಳೆ ಸಚಿನ್ ಪೈಲೆಟ್ ಬಣದ 19 ಶಾಸಕರು ಅನರ್ಹಗೊಂಡರೆ ವಿಧಾನಸಭೆ ಬಲ 181ಕ್ಕೆ ಕುಸಿಯಲಿದೆ. ಆಗ ಮ್ಯಾಜಿಕ್ ನಂಬರ್ 91 ಆಗಲಿದೆ. ಗೆಹ್ಲೋಟ್ ತಮ್ಮ ಬಳಿ 104 ಶಾಸಕರು ಇದ್ದಾರೆ ಎಂದು ಹೇಳಿದ್ದಾರೆ. ಸರ್ಕಾರಕ್ಕೆ ಬಿಟಿಪಿಯ ಇಬ್ಬರು ಶಾಸಕರು ಬೆಂಬಲವನ್ನು ನೀಡಿದ್ದಾರೆ. ಆಗ ಒಟ್ಟು ಬಲ 106 ಆಗುತ್ತದೆ.

ಪ್ರತಿಪಕ್ಷದ ಸದಸ್ಯ ಬಲ
ರಾಜಸ್ಥಾನ ವಿಧಾನಸಭೆಯಲ್ಲಿ ಬಿಜೆಪಿ ಪ್ರತಿಪಕ್ಷವಾಗಿದೆ. ವಿಧಾನಸಭೆಯಲ್ಲಿ ಒಟ್ಟು ಬಲ 75. ಈಗಿನ ಚಿತ್ರಣ ನೋಡಿದರೆ ಅಶೋಕ್ ಗೆಹ್ಲೋಟ್ ಸರ್ಕಾರ ಸುಲಭವಾಗಿ ಬಹುಮತ ಸಾಬೀತು ಮಾಡುತ್ತದೆ. ರಾಜ್ಯಪಾಲರು ಬಹುಮತ ಸಾಬೀತಿಗೆ ಸೂಚನೆ ಕೊಡಲಿದ್ದಾರೆಯೇ? ಕಾದು ನೋಡಬೇಕು.

ಅನರ್ಹತೆ ವಿವಾದ ಕೋರ್ಟ್‌ನಲ್ಲಿ
ಶಾಸಕ ಸ್ಥಾನದಿಂದ ತಮ್ಮನ್ನು ಅನರ್ಹಗೊಳಿಸುವುದನ್ನು ಪ್ರಶ್ನಿಸಿ ಸಚಿನ್ ಪೈಲೆಟ್ ಸೇರಿದಂತೆ 18 ಶಾಸಕರು ರಾಜಸ್ಥಾನ ಹೈಕೋರ್ಟ್ ಮೊರೆ ಹೋಗಿದ್ದಾರೆ. ಮಂಗಳವಾರ ಸಂಜೆ ತನಕ ಸ್ಪೀಕರ್ ನೋಟಿಸ್‌ಗೆ ಹೈಕೋರ್ಟ್ ತಡೆ ನೀಡಿದೆ. ಬಳಿಕ ಮುಂದಿನ ಬೆಳವಣಿಗೆ ತೀರ್ಮಾನವಾಗಲಿದೆ.












Click it and Unblock the Notifications