ಸಚಿನ್ ಪೈಲೆಟ್ ಅನರ್ಹತೆ; ಸ್ಪೀಕರ್ ವ್ಯಾಪ್ತಿ ಬಗ್ಗೆ ಮತ್ತೆ ಚರ್ಚೆ
ಜೈಪುರ, ಜುಲೈ 20 : ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟು ಶಾಸಕರನ್ನು ಅನರ್ಹಗೊಳಿಸುವ ಹಂತಕ್ಕೆ ತಲುಪಿದೆ. ಬೇರೆ ರಾಜ್ಯಗಳಲ್ಲಿ ಆದಂತೆ ಈಗ ವಿಧಾನಸಭೆ ಸ್ಪೀಕರ್ ವ್ಯಾಪ್ತಿ ಬಗ್ಗೆ ಹೈಕೋರ್ಟ್‌ನಲ್ಲಿ ವಾದ ನಡೆಯುತ್ತಿದೆ.
ಅಭಿಷೇಕ್ ಮನು ಸಿಂಘ್ವಿ ರಾಜಸ್ಥಾನ ಸ್ಪೀಕರ್ ಸಿ. ಪಿ. ಜೋಶಿ ಪರವಾಗಿ ಹೈಕೋರ್ಟ್‌ನಲ್ಲಿ ವಾದ ಮಾಡುತ್ತಿದ್ದಾರೆ. ಸಚಿನ್ ಪೈಲೆಟ್ ಸೇರಿದಂತೆ 19 ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್ ನೀಡಿರುವ ನೋಟಿಸ್ ಕುರಿತು ವಿಚಾರಣೆ ನಡೆಯುತ್ತಿದೆ.
ಸೋಮವಾರ ಅರ್ಜಿಯ ವಿಚಾರಣೆ ಸಮಯದಲ್ಲಿ ಅಭಿಷೇಕ್ ಮನು ಸಿಂಘ್ವಿ, "ಸ್ಪೀಕರ್ ನೀಡಿರುವ ಅನರ್ಹತೆ ನೋಟಿಸ್ ಬಗ್ಗೆ ಯಾವುದೇ ನ್ಯಾಯಾಲಯ ತೀರ್ಮಾನ ತೆಗೆದುಕೊಳ್ಳುವಂತಿಲ್ಲ. ಕೇವಲ ನೋಟಿಸ್ ಮಾತ್ರ ನೀಡಲಾಗಿತ್ತು. ಯಾವುದೇ ಕ್ರಮ ಕೈಗೊಂಡಿಲ್ಲ" ಎಂದು ವಾದ ಮಂಡಿಸಿದರು.

"ಬಂಡಾಯ ಶಾಸಕರು ಸ್ಪೀಕರ್ ನೋಟಿಸ್ ಅನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವಂತಿಲ್ಲ. ಸ್ಪೀಕರ್ ತಮ್ಮ ತೀರ್ಪು ನೀಡುವ ತನಕ ಅದನ್ನು ಪ್ರಶ್ನಿಸುವಂತಿಲ್ಲ. ಸ್ಪೀಕರ್ ಮತ್ತು ವಿಧಾನಸಭೆ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ" ಎಂದು ಸಿಂಘ್ವಿ ವಾದಿಸಿದರು.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕರೆದಿದ್ದ ಶಾಸಕರ ಎರಡು ಸಭೆಗೆ ಸಚಿನ್ ಪೈಲೆಟ್ ಸೇರಿದಂತೆ 19 ಶಾಸಕರು ಗೈರಾಗಿದ್ದರು. ಅವರಿಗೆ ಪಕ್ಷ ವಿರೋಧಿ ಚಟುವಟಿಕೆ ನೋಟಿಸ್ ನೀಡಲಾಗಿತ್ತು. ಸ್ಪೀಕರ್ ಅವರನ್ನು ಅನರ್ಹಗೊಳಿಸುವ ಕುರಿತು ಶೋಕಾಸ್ ನೋಟಿಸ್ ನೀಡಿದ್ದರು.
ಸಚಿನ್ ಪೈಲೆಟ್ ಮತ್ತು ಇತರ ಶಾಸಕರು ಈ ನೋಟಿಸ್ ಅನ್ನು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ. ಹೈಕೋರ್ಟ್ ಮಂಗಳವಾರ ಸಂಜೆ ತನಕ ಸ್ಪೀಕರ್ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಹೇಳಿದೆ. ಇಂದು ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದೆ.












Click it and Unblock the Notifications