ಕೇವಲ 3 ಕೇಸ್ ಪತ್ತೆಯಾಗಿದ್ದ ಚೀನಾದ ನಗರ ಸಂಪೂರ್ಣ ಲಾಕ್‌ಡೌನ್
ಬೀಜಿಂಗ್, ಜನವರಿ 04: ಕೇವಲ ಮೂರು ಪ್ರಕರಣಗಳು ಪತ್ತೆಯಾಗಿದ್ದ, ಚೀನಾದ ನಗರದಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದೆ.
ಚೀನಾದ ನಗರವೊಂದರಲ್ಲಿ ಮತ್ತೆ ಲಕ್ಷಣ ರಹಿತ ಮೂರು ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಆ ನಗರವನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ.
ಕೊರೊನಾ ಆರಂಭದಿಂದಲೂ ಝೀರೋ ಕೋವಿಡ್ ವಿಧಾನವನ್ನು ಚೀನಾ ಅನುಸರಿಸಿಕೊಂಡಿದೆ. ಆದ್ರೂ ಸಹ ಮಂಗಳವಾರ 175 ಹೊಸ ಕೊರೋನಾ ಪ್ರಕರಣಗಳು ಕಂಡುಬಂದಿವೆ.
ಚೀನಾದಲ್ಲಿ ಇತ್ತೀಚೆಗೆ ಪತ್ತೆಯಾದ ಪ್ರಕರಣಗಳು ಪ್ರಪಂಚದಲ್ಲಿ ಕಂಡುಬಂದ ಪ್ರಕರಣಗಳಿಗಿಂತ ಹಲವು ಪಟ್ಟು ಕಡಿಮೆ ಇದೆ. ಆದ್ರೂ ಮಾರ್ಚ್ 2020 ರಿಂದ ಮೊದಲ ಬಾರಿಗೆ ಚೀನಾದಲ್ಲಿ ಇಷ್ಟೊಂದು ಪ್ರಕರಣಗಳು ಕಾಣಿಸಿಕೊಂಡಿವೆ.

ಡ್ರ್ಯಾಗನ್ ರಾಷ್ಟ್ರದಲ್ಲಿ ಮೊದಲ ಬಾರಿಗೆ ಕೊರೋನಾ ವೈರಸ್ ಪತ್ತೆಯಾದ ನಂತರ ಶೂನ್ಯ ಕೋವಿಡ್ ವಿಧಾನವನ್ನು ಅನುಸರಿಸಲಾಗುತ್ತಿದೆ. ಇತ್ತೀಚೆಗೆ ಪತ್ತೆಯಾಗುತ್ತಿರುವ ಕೊರೋನಾ ಕೇಸ್ ಗಳಿಂದ ಬೆಚ್ಚಿಬಿದ್ದಿರುವ ಚೀನಿ ಸರ್ಕಾರ, ಗಡಿಗಳನ್ನು ಮುಚ್ಚಿದೆ ಮತ್ತು ದೇಶದ ಹಲವು ಭಾಗಗಳಲ್ಲಿ ಲಾಕ್‌ಡೌನ್ ವಿಧಿಸಿದೆ. 1.3 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಶಾಂಕ್ಸಿ ನಗರವು ಸುಮಾರು ಎರಡು ವಾರಗಳ ಕಾಲ ಲಾಕ್‌ಡೌನ್‌ನಲ್ಲಿಡಲಾಗಿದೆ.
ಮುಂದಿನ ತಿಂಗಳು ಫೆಬ್ರವರಿ 4 ರಿಂದ ಚೀನಾದಲ್ಲಿ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟಗಳು ಆರಂಭಗೊಂಡು ಫೆಬ್ರವರಿ 20ರವರೆಗೆ ನಡೆಯಲಿವೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಚೀನಾ ಸರ್ಕಾರ, ಕೇವಲ ಮೂರು ಕೇಸ್ ಗಳು ಬೆಳಕಿಗೆ ಬಂದ ಬಳಿಕ ಯುಝೌ ನಗರದಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಿದೆ.
ಚೀನಾದ ಹೆನಾನ್ ಪ್ರಾಂತ್ಯದಲ್ಲಿರುವ ಯುಝೌ ನಗರವು ಸುಮಾರು 12 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಇತ್ತೀಚೆಗೆ ಈ ನಗರದಲ್ಲಿ ಮೂರು ಲಕ್ಷಣ ರಹಿತ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ನಿನ್ನೆ ರಾತ್ರಿಯಿಂದ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ.
ಮಧ್ಯ ಚೀನಾದ ಯುಝೌ ನಗರದಲ್ಲಿ ಸೋಮವಾರ ರಾತ್ರಿಯಿಂದಲೇ ಎಲ್ಲ ನಾಗರಿಕರು ತಮ್ಮ ಮನೆಗಳಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. ನಗರದಲ್ಲಿ ಈಗಾಗಲೇ ಬಸ್ ಮತ್ತು ಟ್ಯಾಕ್ಸಿ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಶಾಪಿಂಗ್ ಮಾಲ್‌ಗಳು, ವಸ್ತುಸಂಗ್ರಹಾಲಯಗಳು ಮತ್ತು ಪ್ರವಾಸಿ ಕೇಂದ್ರಗಳನ್ನು ಸಹ ಮುಚ್ಚಲಾಗಿದೆ.












Click it and Unblock the Notifications