ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದ ಲಿಟ್ಲ್ ಇಂಡಿಯಾದಲ್ಲಿ ಭುಗಿಲೆದ್ದ ಹಿಂಸಾಚಾರ

By Prasad
|
Google Oneindia Kannada News

ಸಿಂಗಪುರ, ಡಿ. 9 : ಭಾರತೀಯ ನೌಕರನೊಬ್ಬ ಸಿಂಗಪುರಿಗ ಓಡಿಸುತ್ತಿದ್ದ ವಾಹನ ಡಿಕ್ಕಿ ಹೊಡೆದು ಸತ್ತ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಭಾರತೀಯ ಮೂಲದ ನಿವಾಸಿಗಳು ಸಿಂಗಪುರದಲ್ಲಿ ಹಿಂಸಾಚಾರದಲ್ಲಿ ತೊಡಗಿದ್ದಾರೆ. ನಾಲ್ಕು ದಶಕದಲ್ಲಿ ನಡೆದ ಅತ್ಯಂತ ಭೀಕರ ಹಿಂಸಾಕೃತ್ಯದಲ್ಲಿ 18 ಜನರು ಗಾಯಗೊಂಡಿದ್ದಾರೆ ಎಂದು ಸೋಮವಾರ ಸರಕಾರಿ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಿಂಗಪುರದ ಮೂಲ ನಿವಾಸಿ ಓಡಿಸುತ್ತಿದ್ದ ಖಾಸಗಿ ವಾಹನ ಡಿಕ್ಕಿ ಹೊಡೆದು ಭಾರತೀಯ ನೌಕರ ಭಾನುವಾರ ರಾತ್ರಿ ಮೃತಪಟ್ಟಿದ್ದ. ಈ ಘಟನೆಯ ವಿರುದ್ಧ ಸಿಡಿದೆದ್ದ ಲಿಟ್ಲ್ ಇಂಡಿಯಾದ ಸುಮಾರು 400ಕ್ಕೂ ಹೆಚ್ಚು ನಿವಾಸಿಗಳು ಸಿಕ್ಕಸಿಕ್ಕ ವಾಹನಗಳನ್ನು ಸುಟ್ಟು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಗಾಯಗೊಂಡವರಲ್ಲಿ 10 ಜನ ಪೊಲೀಸ್ ಅಧಿಕಾರಿಗಳು ಮತ್ತು 4 ಜನರು ರಕ್ಷಣಾ ಸಿಬ್ಬಂದಿ ಇದ್ದಾರೆ. ಆಕ್ರೋಶಗೊಂಡಿದ್ದ ದಕ್ಷಿಣ ಏಷ್ಯಾದ ಮೂಲದ ನಿವಾಸಿಗಳನ್ನು ಶಾಂತಗೊಳಿಸಲು ಬಂದಾಗ ಅವರ ಮೇಲೆ ಗಾಜಿನ ಬಾಟಲಿ ಇತ್ಯಾದಿ ಹರಿತವಾದ ಅಸ್ತ್ರಗಳನ್ನು ಉದ್ರಿಕ್ತ ಜನರು ಎಸೆದಿದ್ದಾರೆ. ಹಿಂಸಾಕೃತ್ಯದಲ್ಲಿ ತೊಡಗಿದ್ದ 27 ಜನರನ್ನು ಪೊಲೀಸರು ಈಗಾಗಲೆ ಬಂಧಿಸಿದ್ದಾರೆ.

Violence breaks out in Singapore Little India

ಮುಗುಚಿಬಿದ್ದ ಒಂದು ಪೊಲೀಸ್ ವಾಹನಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚುತ್ತಿದ್ದುದನ್ನು ಮತ್ತು ಮತ್ತೊಂದು ವಾಹನದ ಕಿಟಕಿ ಗಾಜುಗಳನ್ನು ಕೋಲಿನಿಂದ ಪುಡಿಪುಡಿ ಮಾಡುತ್ತಿದ್ದುದನ್ನು ನ್ಯೂಸ್ ಏಷ್ಯಾ ಚಾನಲ್ ಬಿತ್ತರಿಸಿದೆ. ಕಾನೂನನ್ನು ಗೌರವಿಸುವ ಜನರಿರುವ ಈ ಆಧುನಿಕ ನಗರದಲ್ಲಿ ಕಳೆದ 4 ದಶಕಗಳಲ್ಲಿ ಇಂತಹ ಭೀಕರ ಹಿಂಸಾಚಾರ ಸಿಂಗಪುರದಲ್ಲಿ ನಡೆದಿರಲಿಲ್ಲ ಎಂದು ಸುದ್ದಿ ವಾಹಿನಿ ವರದಿ ಮಾಡಿದೆ.

ಸಾರ್ವಜನಿಕ ಅಥವಾ ಖಾಸಗಿ ಆಸ್ತಿಪಾಸ್ತಿಗೆ ಧಕ್ಕೆ ತಂದ ಯಾರನ್ನೇ ಆಗಲಿ ಬಿಡುವುದಿಲ್ಲ, ಅಧಿಕಾರಿಗಳು ಅವರನ್ನು ಹಿಡಿದು ತಕ್ಕ ಕ್ರಮ ಜರುಗಿಸುತ್ತಾರೆ. ಹಿಂಸಾಚಾರಕ್ಕೆ ಯಾವುದೇ ಘಟನೆ ಕಾರಣವಾಗಿರಬಹುದು. ಆದರೆ, ವಿಧ್ವಂಸಕ ಅಥವಾ ಅಪರಾಧಿ ಕೃತ್ಯ ಎಸಗಲು ಅವಕಾಶ ನೀಡುವುದಿಲ್ಲ ಎಂದು ಸಿಂಗಪುರದ ಪ್ರಧಾನಿ ಲೀ ಹೀನ್ ಲಾಂಗ್ ಅವರು ಜನರನ್ನು ಫೇಸ್ ಬುಕ್ ನಲ್ಲಿ ಎಚ್ಚರಿಸಿದ್ದಾರೆ.

ಈ ಘಟನೆಯಿಂದಾಗಿ ಸಿಂಗಪುರದಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ವಲಸಿಗರು ಮತ್ತು ಸಿಂಗಪುರ ಜನನಿಬಿಡವಾಗುತ್ತಿರುವ ಬಗ್ಗೆ ಕಾಳಜಿ ವ್ಯಕ್ತಪಡಿಸಿ ಸಾಮಾಜಿಕ ತಾಣಗಳಲ್ಲಿ ಭಾರೀ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಲಿಟ್ಲ್ ಇಂಡಿಯಾದಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೇಪಾಳದ ವಲಸಿಗರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಇಲ್ಲಿ ಆ ದೇಶಗಳಲ್ಲಿ ಸಿಗುವ ಎಲ್ಲ ವಸ್ತುಗಳು ಸಿಗುವುದರಿಂದ ಭಾನುವಾರ ಜನನಿಬಿಡವಾಗಿರುತ್ತದೆ.

English summary
Violence broke out at Little India in Singapore on Sunday night as an Indian worker was killed in a road accident. More than 400 people belonging to South Asia resorted to stone pelting, bottle throwing and torching the vehicles. 18 security personnel have been injured and 27 people arrested.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X