ಶತ್ರುವಿನ ಶತ್ರು ಮಿತ್ರ: ಭಾರತದ ಜೊತೆ ಕೈ ಜೋಡಿಸಲು ಅಮೆರಿಕಾ ಮಂತ್ರ!
ನವದೆಹಲಿ, ಮೇ.07: ವಿಶ್ವವ್ಯಾಪಿ ನೊವೆಲ್ ಕೊರೊನಾ ವೈರಸ್ ಸೋಂಕು ಹರಡಲುಕ್ಕೆ ಚೀನಾ ಕಾರಣ ಎಂದು ಆರೋಪಿಸುತ್ತಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಡ್ರ್ಯಾಗನ್ ರಾಷ್ಟ್ರದ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ಚೀನಾದ ಬೀಜಿಂಗ್ ನಗರದಲ್ಲಿ ಇರುವ ಅಮೆರಿಕಾ ಮೂಲದ 1,000ಕ್ಕೂ ಅಧಿಕ ಕಂಪನಿಗಳನ್ನು ಭಾರತಕ್ಕೆ ಶಿಫ್ಟ್ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಕಳೆದ ಏಪ್ರಿಲ್ ತಿಂಗಳಿನಲ್ಲೇ ಸರ್ಕಾರ ಅಮೆರಿಕಾ ಮತ್ತು ವಿದೇಶಗಳಲ್ಲಿರುವ ಒಂದು ಸಾವಿರಕ್ಕೂ ಅಧಿಕ ಕಂಪನಿಗಳ ಜೊತೆ ಚರ್ಚೆ ನಡೆಸಿದೆ.
ಲಕ್ಷಲಕ್ಷ ಬಲಿ ಪಡೆದ ಕೊರೊನಾ ವೈರಸ್ ಸೋಂಕಿಗೆ ಸಿಕ್ಕಿತು ಔಷಧಿ!
ಭಾರತದಲ್ಲಿ ವೈದ್ಯಕೀಯ ಉಪಕರಣಗಳ ಪೂರೈಕೆ, ಆಹಾರ ತಯಾರಿಕಾ ಘಟಕ, ಟೆಕ್ಸ್ ಟೈಲ್, ಲೆದರ್ ಮತ್ತು ಬಿಡಿಭಾಗಗಳ ಉತ್ಪಾದನೆಗೆ ಸಂಬಂಧಿಸಿದಂತೆ 550ಕ್ಕೂ ಹೆಚ್ಚು ಕಂಪನಿಗಳ ಜೊತೆಗೆ ಚರ್ಚೆ ನಡೆಸಿರುವುದಾಗಿ ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.

ಐರೋಪ್ಯ ರಾಷ್ಟ್ರಗಳು ಚೀನಾದಿಂದ ದೂರ ದೂರ!
ವಿಶ್ವದಾದ್ಯಂತ 38, 43,484ಕ್ಕೂ ಹೆಚ್ಚು ಜನರಿಗೆ ಕೊರೊನಾ ವೈರಸ್ ಸೋಂಕು ಅಂಟಿಕೊಂಡಿದ್ದು, ಮಹಾಮಾರಿಗೆ 2,65,659 ಮಂದಿ ಮಹಾಮಾರಿಗೆ ಪ್ರಾಣ ಚೆಲ್ಲಿದ್ದಾರೆ. ಇದಕ್ಕೆಲ್ಲ ಚೀನಾ ಕಾರಣವೆಂದು ಅಮೆರಿಕಾ ಆರೋಪಿಸುತ್ತಿದೆ. ಇದರ ಬೆನ್ನಲ್ಲೇ ಐರೋಪ್ಯ ರಾಷ್ಟ್ರಗಳು ಚೀನಾದಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿವೆ. ಚೈನೀಸ್ ಉತ್ಪನ್ನಗಳಿಂದ ದೂರವಿರಲು ಯುರೋಪ್ ರಾಷ್ಟ್ರಗಳು ಚಿಂತನೆ ನಡೆಸುತ್ತಿವೆ. ಅಮೆರಿಕಾ ಜೊತೆಗೆ ಜಪಾನ್ ಕೂಡ ತಮ್ಮ ಫ್ಯಾಕ್ಟರಿಗಳನ್ನು ಶಿಫ್ಟ್ ಮಾಡುವುದಕ್ಕಾಗಿ 2.2 ಬಿಲಿಯನ್ ಡಾಲರ್ ಹಣವನ್ನು ಖರ್ಚು ಮಾಡುತ್ತಿದೆ.

ಆರೋಗ್ಯ ಉತ್ಪನ್ನಗಳು ಮತ್ತು ಸಾಧನ ಕಂಪನಿಗಳು ಸ್ಥಳಾಂತರ
ಅಮೆರಿಕಾ ಮೂಲದ ಅಬಾಟ್ ಲ್ಯಾಬೋರೇಟರಿಸ್ ಕಂಪನಿ ಹಾಗೂ ಮೆಡ್ ಟ್ರಾನಿಕ್ ಡಿವೈಸ್ ಕಂಪನಿ ಸೇರಿದಂತೆ ಆರೋಗ್ಯ ಉತ್ಪನ್ನ ಮತ್ತು ಸಾಧನಗಳ ಉತ್ಪಾದನಾ ಘಟಕಗಳನ್ನು ಭಾರತಕ್ಕೆ ಸ್ಥಳಾಂತರಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಟ್ರಾನಿಕ್ ಡಿವೈಸ್ ಕಂಪನಿ ವಕ್ತಾರ ಬೆನ್ ಪೆಟೊಕ್, ಅಬಾಟ್ ಲ್ಯಾಬೋರೇಟರಿಸ್ ಕಂಪನಿ ವಕ್ತಾರ ದಾರ್ಸಿ ರೋಸ್ ಜೊತೆ ಚರ್ಚಿಸಲಾಗಿದೆ.

ವಾಣಿಜ್ಯ ನಗರಿ ಮುಂಬೈನಲ್ಲಿ ಎರಡೂ ಕಂಪನಿಯ ಘಟಕ
ಅಬಾಟ್ ಲ್ಯಾಬೋರೇಟರಿಸ್ ಕಂಪನಿ ಹಾಗೂ ಮೆಡ್ ಟ್ರಾನಿಕ್ ಡಿವೈಸ್ ಕಂಪನಿಗಳು ಈಗಾಗಲೇ ವಾಣಿಜ್ಯ ನಗರಿ ಮುಂಬೈನಲ್ಲಿ ಘಟಕಗಳನ್ನು ಹೊಂದಿದೆ. ಚೀನಾದಿಂದ ಎರಡು ಕಂಪನಿಯ ಉತ್ಪಾದನಾ ಘಟಕಗಳನ್ನು ಸ್ಥಳಾಂತರಿಸುವುದು ಸುಲಭವಾಗಿದೆ. ಅಲ್ಲದೇ ಕಂಪನಿಯ ಸರಕುಗಳ ಸರಬರಾಜಿಗೂ ಅಷ್ಟೊಂದು ಸಮಸ್ಯೆ ಆಗುವುದಿಲ್ಲ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.

ಅಮೆರಿಕಾ ಮತ್ತು ಜಪಾನ್ ಗೆ ಸ್ಥಳಾಂತರ ಹೊರೆ
ಭಾರತದಲ್ಲಿ ಕೈಗೆಟಕುವ ದರದಲ್ಲಿ ಭೂಮಿ ಮತ್ತು ಕಾರ್ಮಿಕರ ಲಭ್ಯತೆಯಿದೆ. ಅಮೆರಿಕಾ ಮತ್ತು ಜಪಾನ್ ರಾಷ್ಟ್ರಗಳಿಗೆ ಕಂಪನಿಗಳನ್ನು ಮರಳಿ ಸ್ಥಳಾಂತರಿಸಿದ್ದಲ್ಲಿ ಕಂಪನಿಗಳಿಗೆ ಇದು ದುಬಾರಿ ಆಗಲಿದೆ. ಚೀನಾಗಿಂತಲೂ ಹೆಚ್ಚು ಹೊರೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ವಿದೇಶಿ ಕಂಪನಿಗಳಿಗೆ ಅನುಕೂಲವಾಗುವಂತಾ ಕೆಲವು ಕಾನೂನುಗಳನ್ನು ಸರ್ಕಾರವು ತಿದ್ದುಪಡಿಗೊಳಿಸಬೇಕಿದೆ. ಜೊತೆಗೆ ಇ-ಕಾಮರ್ಸ್ ಹಾಗೂ ಡಿಜಿಟಲ್ ತೆರಿಗೆ ನೀತಿಯನ್ನು ಜಾರಿಗೊಳಿಸಬೇಕಿದೆ. ಕಂಪನಿಗಳ ಪ್ರಸ್ತಾವನೆ ಬಗ್ಗೆ ಭಾರತೀಯ ವಾಣಿಜ್ಯ ಸಚಿವಾಲಯವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದು ಬಂದಿದೆ.