Donald Trump: ಡೊನಾಲ್ಡ್ ಟ್ರಂಪ್ ದುಬಾರಿ ಸುಂಕಕ್ಕೆ ಸದ್ಯಕ್ಕಿಲ್ಲ ಬ್ರೇಕ್: ಯುಎಸ್ ಕೋರ್ಟ್ ಹೇಳಿದ್ದೇನು
ಅಮೆರಿಕ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತವೂ ಸೇರಿದಂತೆ ವಿವಿಧ ರಾಷ್ಟ್ರಗಳ ಮೇಲೆ ವಿಧಿಸಿರುವ ದುಬಾರಿ ಸುಂಕಕ್ಕೆ ಸಂಬಂಧಿಸಿದಂತೆ ಬ್ರೇಕ್ ಬೀಳುವ ನಿರೀಕ್ಷೆಯಲ್ಲಿದ್ದವರಿಗೆ ತಾತ್ಕಾಲಿಕ ಹಿನ್ನಡೆ ಆಗಿದೆ. ವಿವಿಧ ದೇಶಗಳ ಮೇಲೆ ವಿಪರೀತವಾಗಿ ವಿಧಿಸಿರುವ ಆಮದು ಮತ್ತು ಉತ್ಪನ್ನಗಳ ಮೇಲಿನ ಸುಂಕದ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕಾದ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆದಿದ್ದು, ಈ ವಿಚಾರಣೆಯನ್ನು ಮುಂದೂಡಲಾಗಿದೆ. ಇದರಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಧಿಸಿರುವ ಸುಂಕಗಳು ತಾತ್ಕಾಲಿಕವಾಗಿ ಮುಂದುವರಿಯಲಿವೆ. ಅಲ್ಲದೇ ಎರಡನೇ ಹಂತದ ದುಬಾರಿ ಸುಂಕಗಳು ಸಹ ಜಾರಿ ಆಗುವ ಆತಂಕ ಶುರುವಾಗಿದೆ.
ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ (IEEPA) ಅಡಿಯಲ್ಲಿ ಟ್ರಂಪ್ ಆಡಳಿತ ವಿಧಿಸಿರುವ ಸುಂಕಗಳ ಕುರಿತು ಅಮೆರಿಕದ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತ್ತು. ವಿಚಾರಣೆಯನ್ನು ಮುಂದೂಡಲಾಗಿದ್ದು, ತೀರ್ಪು ಕಾಯ್ದಿರಿಸಲಾಗಿದೆ. ಆದರೆ, ತೀರ್ಪು ಪ್ರಕಟವಾಗುವ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ನಿರ್ಧಾರವು ಅಮೆರಿಕದ ವ್ಯಾಪಾರ ನೀತಿಯನ್ನು ಪುನರ್ ರೂಪಿಸಬಹುದು ಎನ್ನುವ ನಿರೀಕ್ಷೆ ಇದೆ. ಇದು ಪ್ರಮುಖ ವ್ಯಾಪಾರ ಪಾಲುದಾರರ ಮೇಲೆ ಸುಂಕಗಳನ್ನು ವಿಧಿಸುವುದು ಮತ್ತು ಜಾಗತಿಕ ವಾಣಿಜ್ಯವನ್ನು ಅಡ್ಡಿಪಡಿಸುವ ವಿಷಯಗಳನ್ನು ಒಳಗೊಂಡಿರುವುದರಿಂದ ಭಾರತವೂ ಸೇರಿದಂತೆ ಇಡೀ ವಿಶ್ವವೇ ಅಮೆರಿಕದ ಸುಪ್ರೀಂ ಕೋರ್ಟ್ ಯಾವ ತೀರ್ಪು ನೀಡಲಿದೆ ಎಂದು ಎದುರು ನೋಡುತ್ತಿದೆ.
ಸುಪ್ರೀಂ ಕೋರ್ಟ್‌ನ ವಿಚಾರಣೆಯು ದೇಶೀಯವಾಗಿ ಅಧ್ಯಕ್ಷರ ತುರ್ತು ಅಧಿಕಾರವನ್ನು ಆರ್ಥಿಕತೆಗೆ ಎಷ್ಟರ ಮಟ್ಟಿಗೆ ವಿಸ್ತರಿಸಬಹುದು ಎನ್ನುವ ವಿಷಯವನ್ನೂ ಪರಿಗಣಿಸುವ ಸಾಧ್ಯತೆ ಇದೆ. ಇನ್ನು ನ್ಯಾಯಾಲಯದ ಅಭಿಪ್ರಾಯಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, 2025ನೇ ಸಾಲಿನ ಏಪ್ರಿಲ್‌ನಲ್ಲಿ ಘೋಷಿಸಿದ ಪರಸ್ಪರ ಸುಂಕ ಚೌಕಟ್ಟಿನ ಮೇಲೆ ಕೇಂದ್ರೀಕೃತವಾಗಿವೆ.
ಅಮೆರಿಕ ವಿವಿಧ ದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ 10 ಪ್ರತಿ ಶತದಷ್ಟು ಮೂಲ ಸುಂಕವನ್ನು ವಿಧಿಸಿತ್ತು. ಈ ಕ್ರಮವು ಏಪ್ರಿಲ್ 5 ರಿಂದ ಪ್ರಾರಂಭವಾಗಲಿದೆ. ವ್ಯಾಪಾರ ಅಡೆತಡೆಗಳನ್ನು ಹೊಂದಿರುವ ದೇಶಗಳಿಗೆ ಹೆಚ್ಚಿನ ಸುಂಕ ವಿಧಿಸುವ ಎರಡನೇ ದರಪಟ್ಟಿಯನ್ನು ಸಹ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಿಗದಿ ಮಾಡಿದ್ದಾರೆ. ಪಟ್ಟಿ ಮಾಡಲಾದ ಗುಂಪನ್ನು ಅವಲಂಬಿಸಿ ಆ ದೇಶದ - ನಿರ್ದಿಷ್ಟ ಸುಂಕ ದರಗಳು ಅಂದಾಜು 50 ಪ್ರತಿಶತಕ್ಕೆ ಹೆಚ್ಚಳವಾಗುವ ಸಾಧ್ಯತೆ ಇದೆ. ಹೊಸ ಸುಂಕ ನೀತಿಯು ಏಪ್ರಿಲ್ 9 ರಿಂದ ಜಾರಿಗೆ ಬರಲಿವೆ.
ಭಾರತೀಯ ಸರಕುಗಳ ಮೇಲಿನ ಅಮೆರಿಕಾದ ಸುಂಕಗಳು ಒಟ್ಟು 50 ಪ್ರತಿಶತದಷ್ಟಿದೆ. ಇದರಲ್ಲಿ ಏಪ್ರಿಲ್ 2 ರಂದು ಘೋಷಿಸಲಾದ 25 ಪ್ರತಿಶತ ಪರಸ್ಪರ ಸುಂಕ ಮತ್ತು ರಷ್ಯಾದೊಂದಿಗೆ ಭಾರತದ ನಿರಂತರ ತೈಲ ವ್ಯಾಪಾರಕ್ಕೆ ಸಂಬಂಧಿಸಿದ ಹೆಚ್ಚುವರಿ 25 ಪ್ರತಿಶತ ಸುಂಕವನ್ನೂ ಸಹ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೇರಿಸಿದ್ದಾರೆ.












Click it and Unblock the Notifications