ಯುಎಸ್: ಅಯೋವಾದ ಶಾಲೆಯಲ್ಲಿ ಗುಂಡಿನ ದಾಳಿ: ಓರ್ವ ವಿದ್ಯಾರ್ಥಿ ಹತ್ಯೆ- ಐವರಿಗೆ ಗಾಯ!
ಪೆರ್ರಿ ಜನವರಿ 5: ಮಧ್ಯಪಶ್ಚಿಮ ಯುಎಸ್ ರಾಜ್ಯವಾದ ಅಯೋವಾದಲ್ಲಿನ ಪ್ರೌಢಶಾಲೆಯಲ್ಲಿ ಗುರುವಾರ ಗುಂಡಿನ ದಾಳಿ ನಡೆದಿದೆ. ಮಕ್ಕಳ ಮೇಲೆ ಗುಂಡು ಹಾರಿಸಿದ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು ಐವರು ಗಾಯಗೊಂಡಿದ್ದಾರೆಂದು ವರದಿಯಾಗಿದೆ.
ಹದಿಹರೆಯದ ವಿದ್ಯಾರ್ಥಿಯೊಬ್ಬ ತನ್ನ ಸಹ ವಿದ್ಯಾರ್ಥಿ ಮೇಲೆ ಗುಂಡು ಹಾರಿಸಿ ನಂತರ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೆಳಿಗ್ಗೆ 7:30ರ ಸುಮಾರಿಗೆ ಈ ಘಟನೆ ನಡೆದಿದೆ. ಸಾವನ್ನಪ್ಪಿದ ಬಲಿಪಶು ಆರನೇ ತರಗತಿಯಲ್ಲಿದ್ದು, ಅಂದರೆ 11 ಅಥವಾ 12 ವರ್ಷ ವಯಸ್ಸಿನವರಾಗಿದ್ದಾರೆ.

ಬೆಳಗಿನ ಉಪಾಹಾರ ಸೇವನೆ ವೇಳೆ ಈ ಘಟನೆ ನಡೆದಿದೆ. ಅದರಲ್ಲೂ ಚಳಿಗಾಲದ ರಜೆಯನ್ನು ಮುಗಿಸಿ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ ಮೊದಲ ದಿನ ಇದಾಗಿತ್ತು. 17 ವರ್ಷದ ಶೂಟರ್‌ನಿಂದ ಗಾಯಗೊಂಡವರಲ್ಲಿ ಇತರ ನಾಲ್ವರು ವಿದ್ಯಾರ್ಥಿಗಳು ಮತ್ತು ಶಾಲೆಯ ನಿರ್ವಾಹಕರು ಸೇರಿದ್ದಾರೆ.
ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಶಾಲೆಯಲ್ಲಿ ಸುಧಾರಿತ ಸ್ಫೋಟಕ ಸಾಧನವನ್ನು ಪತ್ತೆಹಚ್ಚಿರುವುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ಅದನ್ನು ಅವರು ಅದನ್ನು ನಿಷ್ಕ್ರಿಯಗೊಳಿಸಿರುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಪೆರ್ರಿ ರಾಜ್ಯದ ರಾಜಧಾನಿ ಡೆಸ್ ಮೊಯಿನ್ಸ್‌ನಿಂದ ಸುಮಾರು 35 ಮೈಲಿಗಳು (55 ಕಿಲೋಮೀಟರ್) ದೂರದಲ್ಲಿದೆ.
ಸ್ಥಳೀಯ ಸುದ್ದಿ ವಾಹಿನಿ ಟಿವಿ ಸ್ಟೇಷನ್ ವರದಿಗಾರರೊಂದಿಗೆ ಮಾತನಾಡುವಾಗ, ಹೈಸ್ಕೂಲ್ ವಿದ್ಯಾರ್ಥಿನಿ ಅವಾ ಅಗಸ್ಟಸ್ ಅವರು ಘಟನೆಯ ವಿವರಣೆ ನೀಡಿದ್ದಾರೆ. 'ನಾನು ಶೂಟಿಂಗ್ ಸಮಯದಲ್ಲಿ ತರಗತಿಯಲ್ಲಿ ಅಡಗಿಕೊಂಡಿದ್ದೆ. ಘಟನೆಯು ಮುಗಿದಿದೆ ಎಂದು ಅಧಿಕಾರಿಗಳು ಹೇಳಿದ ನಂತರ ಹೊರಬಂದೆ. ಎಲ್ಲೆಡೆ ಗಾಜು, ನೆಲದ ಮೇಲೆ ರಕ್ತ ಬಿದ್ದಿತ್ತು' ಎಂದು ಭಯದಲ್ಲಿ ಮತನಾಡಿದರು.
ಶಾಲೆಯಲ್ಲಿ ಗುಂಡಿನ ದಾಳಿಯ ಹಾವಳಿ
ಈ ಹಿಂದೆ ವರ್ಜೀನಿಯಾದ ಪ್ರೌಢಶಾಲೆಯೊಂದರ ಹೊರಗೆ 15 ವರ್ಷದ ವ್ಯಕ್ತಿಯೊಬ್ಬರು ಗುಂಡು ಹಾರಿಸಿದ ಪ್ರಕರಣ ನಡೆದಿತ್ತು. ಆದರೆ ಅವರಿಬ್ಬರೂ ವಿದ್ಯಾರ್ಥಿಗಳೇ ಎಂಬುದು ಸ್ಪಷ್ಟವಾಗಿಲ್ಲ. ಸುದ್ದಿ ಔಟ್ಲೆಟ್ ಎಜುಕೇಶನ್ ವೀಕ್ ನಿರ್ವಹಿಸಿದ ಡೇಟಾಬೇಸ್ ಪ್ರಕಾರ, ಪೆರ್ರಿಯಲ್ಲಿ ನಡೆದ ಘಟನೆ ಈ ವರ್ಷದಲ್ಲಿ ಇದುವರೆಗೆ ನಡೆದ ದಾಳಿಯಲ್ಲಿ ಎರಡನೇ ಶಾಲಾ ಶೂಟಿಂಗ್ ಆಗಿದೆ. ಇನ್ನೂ 2018ರಲ್ಲಿ ಶಾಲೆಯಲ್ಲಿ 182 ಶೂಟ್ ಪ್ರಕರಣಗಳು ದಾಖಲಾಗಿವೆ.
ಜನರಿಗಿಂತ ಹೆಚ್ಚು ಬಂದೂಕುಗಳಿರುವ ದೇಶವಾದ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಗನ್ ಹಿಂಸಾಚಾರವು ಸಾಮಾನ್ಯವಾಗಿದೆ. ಅವುಗಳ ಹರಡುವಿಕೆಯನ್ನು ತಡೆಯುವ ಪ್ರಯತ್ನಗಳು ಯಾವಾಗಲೂ ಕಠಿಣ ರಾಜಕೀಯ ಪ್ರತಿರೋಧವನ್ನು ಎದುರಿಸುತ್ತವೆ. ಈ ವರ್ಷ ದೇಶವು ಈಗಾಗಲೇ ಮೂರು ಸಾಮೂಹಿಕ ಗುಂಡಿನ ದಾಳಿಗಳನ್ನು ದಾಖಲಿಸಿದೆ. ಕಳೆದ ವರ್ಷ ಇಂತಹ ಒಟ್ಟು 656 ಶೂಟಿಂಗ್‌ಗಳೊಂದಿಗೆ ಕೊನೆಗೊಂಡಿತು.












Click it and Unblock the Notifications