US Green Card: ಭಾರತೀಯರು ಸೇರಿ ಲಕ್ಷಾಂತರ ಜನರ ಕನಸಿಗೆ ತಣ್ಣೀರೆರಚಿದ ಡೊನಾಲ್ಡ್ ಟ್ರಂಪ್!
ಅಮೆರಿಕಾ: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯರು ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ನೆಲೆಸಿರುವವರಿಗೆ ಹಾಗೂ ಅಮೆರಿಕಾ ಗ್ರೀನ್ ಕಾರ್ಡ್ ಎದುರು ನೋಡುತ್ತಿರುವವರಿಗೆ ಭಾರೀ ಶಾಕ್ ಕೊಟ್ಟಿದ್ದಾರೆ. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2025ನೇ ಸಾಲಿನಲ್ಲಿ ಹಲವು ಕಠಿಣ ಕಾನೂನುಗಳನ್ನು ರೂಪಿಸಿದ್ದರು. ಅದರಲ್ಲಿ ಬೇರೆ ಬೇರೆ ದೇಶಗಳಿಂದ ಅಮೆರಿಕಾಗೆ ಬರುವವರ ಮೇಲೆ ಕೆಲವೊಂದು ನಿರ್ಬಂಧ ವಿಧಿಸುವುದು ಸಹ ಸೇರಿದೆ. ಇದೀಗ 2026ನೇ ಸಾಲಿನಲ್ಲೂ ಪ್ರಮುಖ ನಿರ್ಧಾರವೊಂದನ್ನು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೆಗೆದುಕೊಂಡಿದ್ದಾರೆ.
ಅಧಿಕೃತವಾಗಿ ಶಾಶ್ವತ ನಿವಾಸಿ ಕಾರ್ಡ್ / ಗ್ರೀನ್ ಕಾರ್ಡ್ ಬಗ್ಗೆ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ವಿದೇಶಿ ಪ್ರಜೆಗೆ ಅಮೆರಿಕದಲ್ಲಿ ಶಾಶ್ವತವಾಗಿ ವಾಸಿಸುವ ಮತ್ತು ಕೆಲಸ ಮಾಡುವ ಕಾನೂನುಬದ್ಧ ಹಕ್ಕನ್ನು ಗ್ರೀನ್ ಕಾರ್ಡ್ ನೀಡುತ್ತದೆ. ಅಮೆರಿಕನ್ ಪ್ರಜೆಯನ್ನು ಮದುವೆಯಾಗುವ ಮೂಲಕ ಭಾರತೀಯರು ಸೇರಿದಂತೆ ವಿದೇಶಿಯರಿಗೆ ಇಲ್ಲಿಯ ವರೆಗೆ ಗ್ರೀನ್ ಕಾರ್ಡ್ ಸೌಲಭ್ಯ ಲಭ್ಯವಾಗುತ್ತಿತ್ತು. ಆದಾಗ್ಯೂ, ಅಮೆರಿಕ ಪ್ರಜೆಯನ್ನು ಮದುವೆಯಾದರೆ ಮಾತ್ರ ಇನ್ಮುಂದೆ ಗ್ರೀನ್ ಕಾರ್ಡ್ ಸಿಗುವುದಿಲ್ಲ ಅಥವಾ ಅಮೆರಿಕಾ ಪ್ರಜೆಯನ್ನು ಮದುವೆಯಾದರೆ ಮಾತ್ರ ಗ್ರೀನ್ ಕಾರ್ಡ್ ಪಡೆಯುವುದಕ್ಕೆ ಅರ್ಹತೆ ಇರುವುದಿಲ್ಲ ಎನ್ನುವ ಬದಲಾವಣೆಯನ್ನು ತರಲಾಗುತ್ತಿದೆ.

ಅಮೆರಿಕಾದಲ್ಲಿ ಗ್ರೀನ್ ಕಾರ್ಡ್ ಹೊಂದಿರುವವರನ್ನು ಔಪಚಾರಿಕವಾಗಿ ಕಾನೂನುಬದ್ಧ ಶಾಶ್ವತ ನಿವಾಸಿಗಳು ಎಂದು ಕರೆಯಲಾಗುತ್ತದೆ. ಕೆಲವು ನಿರ್ದಿಷ್ಟ ಪ್ರಕ್ರಿಯೆಗಳನ್ನು ಪೂರೈಸಿದ ನಂತರ ಅಮೆರಿಕಾ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು. ಸಾಮಾನ್ಯವಾಗಿ ಅವರು 1 ರಿಂದ 5 ವರ್ಷಗಳ ಅವಧಿಯ ವರೆಗೆ ಅಮೆರಿಕಾದಲ್ಲಿ ವಾಸಿಸಬೇಕಾಗುತ್ತದೆ ಮತ್ತು ಉತ್ತಮ ಪ್ರಜೆಯಾಗಿರಬೇಕು. ಅಂದರೆ ಅಮೆರಿಕಾದ ಕಾನೂನು ಪಾಲಿಸಬೇಕು ಹಾಗೂ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರಬಾರದು ಎನ್ನುವ ನಿಯಮಗಳು ಇವೆ.
ಪ್ರಸ್ತುತ ಟ್ರಂಪ್ ಆಡಳಿತದಲ್ಲಿ ವಿವಾಹ ಆಧಾರಿತ ಗ್ರೀನ್ ಕಾರ್ಡ್ ಅರ್ಜಿಗಳು ಹೆಚ್ಚಿನ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ವಲಸೆ ಪ್ರಯೋಜನಗಳಿಗಾಗಿ ಮಾತ್ರ ಪ್ರವೇಶಿಸುವ ಬದಲು, ಪ್ರಾಮಾಣಿಕವಾಗಿ ಮದುವೆಯಾಗಿದ್ದಾರೆ ಎಂಬುದಕ್ಕೆ ಅಮೆರಿಕಾದ ಅಧಿಕಾರಿಗಳು ಇದೀಗ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರತ್ಯೇಕವಾಗಿ ವಾಸಿಸುವಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದು, ವಂಚನೆ ಪ್ರಕರಣಗಳು ತನಿಖೆ ಹಂತದಲ್ಲಿದೆ ಎಂದು ಸ್ಪಾರ್ ಅಂಡ್ ಬರ್ನ್‌ಸ್ಟೈನ್‌ನ ವಲಸೆ ವಕೀಲ ಬ್ರಾಡ್ ಬರ್ನ್‌ಸ್ಟೈನ್ ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.
ದಂಪತಿ ಒಂದೇ ಮನೆಯಲ್ಲಿ ವಾಸವಿಲ್ಲದೆ ಇದ್ದರೆ, ಅವರ ಗ್ರೀನ್ ಕಾರ್ಡ್ ಅರ್ಹತೆಯ ಮೇಲೆ ಪ್ರಭಾವ ಬೀರಲಿದೆ. ಕೇವಲ ಅಮೆರಿಕಾದ ಪ್ರಜೆಯನ್ನು ಮದುವೆಯಾಗಿದ್ದೀರಿ ಎನ್ನುವ ಕಾರಣಕ್ಕೆ ನಿಮಗೆ ಅಮೆರಿಕಾದ ಗ್ರೀನ್ ಕಾರ್ಡ್ ಸೌಲಭ್ಯ ಸಿಗುವುದಿಲ್ಲ. ಒಟ್ಟಿಗೆ ವಾಸಿಸುವುದರಿಂದ ಗ್ರೀನ್ ಕಾರ್ಡ್ ಸಿಗಲಿದೆ. ಅಮೆರಿಕಾದಲ್ಲಿ ಪತಿ ಮತ್ತು ಪತ್ನಿ ಒಟ್ಟಿಗೆ ವಾಸಿಸುತ್ತಿದ್ದಾರೆಯೇ ಎಂದು ವಲಸೆ ಅಧಿಕಾರಿಗಳು ಪರಿಶೀಲಿಸುತ್ತಾರೆ. ಅಲ್ಲದೇ ವಲಸೆ ಅಧಿಕಾರಿಗಳು ನೀವು ಏಕೆ ಬೇರೆಯಾಗಿ ವಾಸಿಸುತ್ತಿದ್ದೀರಿ ಎಂಬುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ನೀವು ಪ್ರತಿದಿನ ಒಂದೇ ಮನೆಯಲ್ಲಿ ವಾಸಿಸದಿದ್ದರೆ, ಈ ಮಾದರಿಯ ಮದುವೆಯ ಬಗ್ಗೆ ಪ್ರಶ್ನೆ ಮಾಡಲಾಗುತ್ತದೆ. ನಂತರ ಈ ಸಂಬಂಧ ತನಿಖೆ ನಡೆಸಲಾಗುತ್ತದೆ ಎಂದು ಬರ್ನ್‌ಸ್ಟೈನ್ ಅವರು ತಿಳಿಸಿದ್ದಾರೆ.
ಗ್ರೀನ್ ಕಾರ್ಡ್ ಲಾಟರಿ ಸ್ಥಗಿತ
ಇನ್ನು ಅಮೆರಿಕಾದಲ್ಲಿ ಇದೀಗ ಗ್ರೀನ್ ಕಾರ್ಡ್ ಲಾಟರಿ ಪ್ರಕ್ರಿಯೆ ಸ್ಥಗಿತವಾಗಿದೆ. ಬ್ರೌನ್ ವಿಶ್ವವಿದ್ಯಾಲಯದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿ ಮತ್ತು ಎಂಐಟಿ ಪ್ರೊಫೆಸರ್ ಅವರ ಹತ್ಯೆಯ ಹಿಂದೆ ವಿದೇಶಿ ಪ್ರಜೆಯ ಪಾತ್ರವಿದೆ ಎನ್ನುವ ಅನುಮಾನ ವ್ಯಕ್ತವಾಗಿರುವುದರಿಂದ ಟ್ರಂಪ್ ಸರ್ಕಾರವು ಇತ್ತೀಚೆಗೆ ಗ್ರೀನ್ ಕಾರ್ಡ್ ಲಾಟರಿಯನ್ನು ಸ್ಥಗಿತಗೊಳಿಸಿದೆ. ಅಮೆರಿಕಾಗೆ ಕಡಿಮೆ ವಲಸೆ ದರ ಹೊಂದಿರುವ ದೇಶಗಳಿಂದ ಜನರಿಗೆ ಯುಎಸ್ ಗ್ರೀನ್ ಕಾರ್ಡ್ ಲಾಟರಿ ವಾರ್ಷಿಕವಾಗಿ 55,000 ಶಾಶ್ವತ ನಿವಾಸಿ ವೀಸಾಗಳನ್ನು ನೀಡುತ್ತದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.












Click it and Unblock the Notifications