26/11 ಮುಂಬೈ ದಾಳಿಯ ಆರೋಪಿ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಕ್ಕೆ US ಕೋರ್ಟ್ ಒಪ್ಪಿಗೆ
ನ್ಯೂಯಾರ್ಕ್, ಮೇ 18: ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸಕ್ಕೆ ಇನ್ನೂ ಒಂದು ತಿಂಗಳು ಇದೆ. ಈ ಮಧ್ಯೆ 2008ರ ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ಪಾಕಿಸ್ತಾನಿ ಮೂಲದ ಕೆನಡಾದ ಉದ್ಯಮಿ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಯುಎಸ್ ಕೋರ್ಟ್ ಅನುಮತಿ ನೀಡಿದೆ.
26/11 ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ಅಮೆರಿಕಾದ ಜೈಲಿನಲ್ಲಿದ್ದಾನೆ. ಈತನನ್ನು ಭಾರತಕ್ಕೆ ಕಳುಹಿಸುವಂತೆ ಭಾರತದ ಅಧಿಕಾರಿಗಳು ಮನವಿ ಮಾಡಿದ್ದರು. ಅದಕ್ಕೆ ಫೆಡರಲ್ ನ್ಯಾಯಾಲಯ ಆರೋಪಿ ಹಸ್ತಾಂತರಕ್ಕೆ ಒಪ್ಪಿಗೆ ನೀಡಿದೆ. ಇದಲ್ಲದೇ ರಾಣನನ್ನು ತಾತ್ಕಾಲಿಕವಾಗಿ ಬಂಧಿಸುವಂತೆ ಕೋರಿದ್ದ ಭಾರತದ ಕೋರಿಕೆಗೆ ಅಮೆರಿಕಾ ಅಧ್ಯಕ್ಷ ಬೈಡನ್ ಒಪ್ಪಿಗೆ ಸೂಚಿಸಿದ್ದಾರೆ.

ಮುಂಬೈ ದಾಳಿಯ ಅಪರಾಧಿಗಳ ವಿಚಾರದಲ್ಲಿ ಭಾರತದ ಹೋರಾಟಕ್ಕೆ ಜಯ ಸಿಕ್ಕಿದೆ. ಕ್ಯಾಲಿಫೋರ್ನಿಯಾದ ಸೆಂಟ್ರಲ್ ಡಿಸ್ಟ್ರಿಕ್ಟ್‌ನ ಜಿಲ್ಲಾ ನ್ಯಾಯಾಲಯದ ಯುಎಸ್ ಮ್ಯಾಜಿಸ್ಟ್ರೇಟ್ ಜಡ್ಜ್ ಜಾಕ್ವೆಲಿನ್ ಚೂಲ್ಜಿಯಾನ್ ಅವರು ರಾಣಾ ಹಸ್ತಾಂತರ ಕುರಿತು ಬುಧವಾರ 48 ಪುಟಗಳ ಆದೇಶ ಹೊರಡಿಸಿದ್ದಾರೆ. ಭಾರತ ಮತ್ತು ಯುಎಸ್ ಮಧ್ಯದ ಒಪ್ಪಂದದ ಅಡಿ ರಾಣನನ್ನು ಭಾರತಕ್ಕೆ ಕರೆತರಲಾಗುವುದು ಎಂದು ಪಿಟಿಐ ವರದಿ ಮಾಡಿದೆ.
ಪ್ರಧಾನಿ ಭೇಟಿಗೂ ಮುನ್ನವೇ ಮಹತ್ವದ ಆದೇಶ
ಪ್ರಧಾನಿ ನರೇಂದ್ರ ಮೋದಿ ಅವರು ವಾಷಿಂಗ್ಟನ್ ಡಿಸಿಗೆ ಭೇಟಿಗೆಂದು ಯುಎಸ್‌ಗೆ ಆಗಮಿಸಲು ಒಂದು ತಿಂಗಳ ಇದೆ. ಅಷ್ಟರಲ್ಲಾಗಲಿ ಭಾರತ ಪರ ತೀರ್ಪು ಬಂದಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಗಳ ಪ್ರಕಾರ ಒಂದು ತಿಂಗಳ ಹಿಂದೆಯೇ ಭಾರತ ಈ ನಿರ್ಧಾರವನ್ನು ನಿರೀಕ್ಷೆ ಮಾಡಿತ್ತು. ಏಕೆಂದರೆ ಕೆಲವು ದಿವಸಗಳ ಹಿಂದೆ ರಾಣಾ ಕರೆತರಲು ಭಾರತ ಸಜ್ಜಾಗುತ್ತಿದೆ ಎಂಬ ಮಾಹಿತಿ ದೊರೆತಿತ್ತು.

2008ರಲ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಉಗ್ರರು ಮುಂಬೈ ಮೇಲೆ ದಾಳಿ ನಡೆಸಿದ್ದರು. ಕ್ಯಾಲಿಫೋರ್ನಿಯಾದ ಯುಎಸ್ ಡಿಸ್ಟ್ರಿಕ್ಟ್ ಕೋರ್ಟ್ ಸೆಂಟ್ರಲ್ ಡಿಸ್ಟ್ರಿಕ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆದಿತ್ತು.
ಈ ಸಂಬಂಧ ಯುಎಸ್ ಕೋರ್ಟ್‌ಗೆ ಭಾರತ ನೀಡಿದ ಸಾಕ್ಷ್ಯಾಧಾರಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಲಾಗಿದೆ. ನಂತರ ನ್ಯಾಯಾಲಯ ಹಸ್ತಾಂತರದ ತೀರ್ಮಾನಕ್ಕೆ ಬಂದಿದೆ. ಭಾರತವು ರಾಜತಾಂತ್ರಿಕ ಮಾರ್ಗಗಳ ಮೂಲಕ ರಾಣನನ್ನು ಕರೆತರಲು ಪ್ರಕ್ರಿಯೆಗಳನ್ನು ಆರಂಭವಿಸಲು ಸಿದ್ಧತೆ ನಡೆಸುತ್ತಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮಾಹಿತಿ ನೀಡಿದೆ.
ಪಾಕಿಸ್ತಾನಿ 10 ಉಗ್ರರ ದಾಳಿಗೆ 166 ಮಂದಿ ಸಾವು
ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ನಡೆಸಿದ ಮುಂಬೈ ದಾಳಿಯಲ್ಲಿ ರಾಣಾ ಕೈವಾಡ ಕುರಿತು ಈ ಹಿಂದಿನಿಂದ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆ ನಡೆಸುತ್ತಲೇ ಇದೆ. ಈ ಭಯೋತ್ಪಾದಕ ದಾಳಿಯಿಂದಾಗಿ ಆರು ಅಮೆರಿಕ ಮೂಲದವರು ಸೇರಿದಂತೆ ಒಟ್ಟು 166 ಜನರು ಜೀವ ಬಿಟ್ಟಿದ್ದರು. ಈ ದಾಳಿಯನ್ನು 10 ಪಾಕಿಸ್ತಾನಿ ಭಯೋತ್ಪಾದಕರು ಮಾಡಿದ್ದರು ಎಂದು ಸಂಸ್ಥೆ ಹೇಳಿತು.
ನ್ಯಾಯಾಲಯದ ವಿಚಾರಣೆ ವೇಳೆ ರಾಣಾ ತನ್ನ ಬಾಲ್ಯದ ಸ್ನೇಹಿತ ಡೇವಿಡ್ ಕೋಲ್ಮನ್ ಹೆಡ್ಲಿ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಯೊಂದಿಗೆ ಸಕ್ರಿಯವಾಗಿದ್ದಾನೆ. ದಾಳಿಯಂತಹ ಚಟುವಟಿಕೆಗಳಿಗೆ ಸಹಾಯ ಮಾಡುವ ಮೂಲಕ ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸುತ್ತಿದ್ದಾನೆ ಎಂಬ ವಿಚಾರವನ್ನು ಸಹ ಯುಎಸ್ ಸರ್ಕಾರದ ಪರ ವಕೀಲರು ವಾದಿಸಿದ್ದರು.
ದಾಳಿಯ ಸಂಚಿನಲ್ಲಿ ರಾಣಾ ಮತ್ತು ಆತನ ಬೆಂಬಲಿಗರು ಪಾಲುದಾರರು ಎಂದು ಯುಎಸ್ ಸರ್ಕಾರ ಪ್ರತಿಪಾದಿಸಿತ್ತು.












Click it and Unblock the Notifications