ತಾಯಿಯ ಪತ್ರ ಹಿಡಿದು 1400 ಕಿ.ಮೀ. ಸಾಗಿದ 11ರ ಉಕ್ರೇನ್ ಬಾಲಕ!
ಕೀವ್, ಮಾರ್ಚ್ 08: ಉಕ್ರೇನ್‌ನ ಝಪೊರೊಝೈನ ಹನ್ನೊಂದು ವರ್ಷದ ಬಾಲಕನೊಬ್ಬ ಓರ್ವನೇ ಸ್ಲೋವಾಕಿಯಾ ಗಡಿಯನ್ನು ತಲುಪಿದ್ದಾನೆ. ತನ್ನ ತಾಯಿಯ ಪತ್ರವನ್ನು ಕೈಯಲ್ಲಿ ಹಿಡಿದು ಈ 11 ವರ್ಷದ ಬಾಲಕ ಗಡಿಯತ್ತ ಸಂಚಾರ ಮಾಡಿದ್ದು, ಸುಮಾರು 1400 ಕಿಲೋ ಮೀಟರ್ ದೂರ ಸಾಗಿದ್ದಾನೆ.
ಈ ಬಗ್ಗೆ ಉಕ್ರೇನ್‌ನ ವಿದೇಶಾಂಗ ಸಚಿವಾಲಯವು ಮಾಹಿತಿ ನೀಡಿದೆ. ಯಾವುದೇ ಹಿರಿಯರು ಜೊತೆಗೆ ಇರದೆಯೇ ಈ ಬಾಲಕನು ಸುಮಾರು 1400 ಕಿಲೋ ಮೀಟರ್ ದೂರ ಸಂಚಾರ ಮಾಡಿ, ಸ್ಲೋವಾಕಿಯಾ ಗಡಿಯನ್ನು ತಲುಪಿದ್ದಾನೆ. ಆತನಿಗೆ ಯಾವುದೇ ತೊಂದರೆ ಇಲ್ಲ ಎಂದು ಉಕ್ರೇನ್ ವಿದೇಶಾಂಗ ಸಚಿವಾಲಯ ಹೇಳಿದೆ.
ಉಕ್ರೇನ್ ಮೇಲೆ ರಷ್ಯಾದ ದಾಳಿ ನಡೆಸಿದ ಬೆನ್ನಲ್ಲೇ ಉಕ್ರೇನ್‌ನ ಜನರು ತಮ್ಮ ದೇಶವನ್ನು ತೊರೆದು ನೆರೆಯ ದೇಶಗಳಿಗೆ ಸಾಗುತ್ತಿದ್ದಾರೆ. ಹಲವಾರು ಮಂದಿ ಸಾರಿಗೆ ವ್ಯವಸ್ಥೆ ಇಲ್ಲದೆ ನಡೆದುಕೊಂಡು ಗಡಿಯತ್ತ ಸಾಗಿದ್ದಾರೆ. ಭಾರತದ ಜನರು ಕೂಡಾ ಗಡಿಯತ್ತ ಸಾಗುತ್ತಿದ್ದು, ಅಲ್ಲಿಂದ ಭಾರತಕ್ಕೆ ವಾಪಾಸ್ ಕರೆತರಲಾಗುತ್ತಿದೆ. ಈ ನಡುವೆ ಈ ಬಾಲಕನು ಓರ್ವನೇ ಯಾರ ಸಹಾಯವೂ ಇಲ್ಲದೆ ಗಡಿಯತ್ತ ಸಂಚಾರ ಮಾಡಿದ್ದಾನೆ. ಅದು ಕೂಡಾ ತನ್ನ ತಾಯಿ ಕೊಟ್ಟ ಪತ್ರವನ್ನು ಕೈಯಲ್ಲಿ ಹಿಡಿದು 1400 ಕಿಲೋ ಮೀಟರ್ ದೂರ ಈ 11ರ ಉಕ್ರೇನ್ ಬಾಲಕ ಸಂಚರಿಸಿದ್ದಾನೆ.

ತನ್ನ ನಗುವಿನಿಂದಲೇ ಮನಗೆದ್ದ ಬಾಲಕ
"ಈ ಬಾಲಕನು ತನ್ನ ನಗುವಿನಿಂದಲೇ ಎಲ್ಲರ ಮನವನ್ನು ಗೆದ್ದಿದ್ದಾನೆ. ಹಾಗೆಯೇ ತನ್ನ ದೈರ್ಯದ ಗುಣ ಹಾಗೂ ದೃಢತೆಯಿಂದ ಎಲ್ಲರ ಶ್ಲಾಘನೆಗೆ ಅರ್ಹವಾಗಿದ್ದಾನೆ," ಎಂದು ಉಕ್ರೇನ್ ವಿದೇಶಾಂಗ ಸಚಿವಾಲಯವು ಹೇಳಿದೆ. ಈತನ ಪೋಷಕರು ಉಕ್ರೇನ್‌ನಲ್ಲಿಯೇ ಉಳಿಯಬೇಕಾದ ಪರಿಸ್ಥಿತಿ ಉಂಟಾದ ಕಾರಣದಿಂದಾಗಿ ಈ ಬಾಲಕ ಓರ್ವನೇ ಗಡಿಯತ್ತ ಸಾಗಿದ್ದಾನೆ ಎಂದು ವರದಿಯು ಉಲ್ಲೇಖ ಮಾಡಿದೆ...
ಬಾಲಕ ಸ್ಲೋವಾಕಿಯಾ ಗಡಿ ತಲುಪಿದ ಬಗ್ಗೆ ಸಚಿವಾಲಯದ ಮಾಹಿತಿ
ಇನ್ನು ಈ ಬಾಲಕನು ಸ್ಲೋವಾಕಿಯಾ ಗಡಿ ತಲುಪಿದ ಬಗ್ಗೆ ಸ್ಲೋವಾಕಿಯಾ ಸಚಿವಾಲಯವು ಮಾಹಿತಿ ನೀಡಿದೆ. ಬಾಲಕನು ಸುರಕ್ಷಿತವಾಗಿ ಗಡಿಯನ್ನು ತಲುಪಿದ್ದಾನೆ ಎಂದು ಸ್ಲೋವಾಕಿಯಾ ಸಚಿವಾಲಯವು ಹೇಳುತ್ತಿದೆ. ಪ್ಲಾಸ್ಟಿಕ್ ಬ್ಯಾಗ್, ಪಾಸ್‌ಪೋಟ್ ಹಾಗೂ ಫೋನ್ ನಂಬರ್ ಬರೆದ ಒಂದು ಪತ್ರವನ್ನು ಕೈಯಲ್ಲಿ ಹಿಡಿದು ಸ್ಲೋವಾಕಿಯಾ ಗಡಿ ತಲುಪಿದ್ದಾನೆ ಎಂದು ಸ್ಲೋವಾಕಿಯಾ ಸಚಿವಾಲಯವು ಹೇಳಿದೆ.
ಗಡಿ ಭಾಗಕ್ಕೆ ಸ್ವಯಂ ಸೇವಕರು ತಲುಪಿ ಬಾಲಕನಿಗೆ ಆಹಾರ ಹಾಗೂ ನೀರನ್ನು ಪೂರೈಸಿದ್ದಾರೆ ಎಂದು ವರದಿಯು ಉಲ್ಲೇಖ ಮಾಡಿದೆ. "ಪತ್ರದಲ್ಲಿ ಫೋನ್ ಸಂಖ್ಯೆಯನ್ನು ಬರೆದುದ್ದಕ್ಕೆ ಹಾಗೂ ತಾಯಿಯು ಪತ್ರ ಬರೆದು ಕಳುಹಿಸಿದ್ದಕ್ಕೆ ಧನ್ಯವಾದಗಳು. ನಾವು ಆತನ ಸಂಬಂಧಿಕರನ್ನು ಈ ನಂಬರ್ ಮೂಲಕ ಸಂಪರ್ಕ ಮಾಡಲು ಸಾಧ್ಯವಾಯಿತು. ಸಂಬಂಧಿಕರನ್ನು ಸಂಪರ್ಕ ಮಾಡಿದ ಬಳಿಕ ಅವರು ಬಂದು ಈ ಬಾಲಕನನ್ನು ಕರೆದೊಯ್ದಿದ್ದಾರೆ," ಎಂದು ಸಚಿವಾಲಯ ಮಾಹಿತಿ ನೀಡಿದೆ.
ಈವರೆಗೆ 1.5 ಮಿಲಿಯನ್ ಜನರು ಉಕ್ರೇನ್‌ನಿಂದ ಪಲಾಯನ
ಯುಎನ್‌ಎಚ್‌ಸಿಆರ್ ಪ್ರಕಾರ ಮಾರ್ಚ್ 6ರವರೆಗೆ ಸುಮಾರು 1.5 ಮಿಲಿಯನ್ ಉಕ್ರೇನಿಗರು ಹತ್ತು ದಿನದಲ್ಲಿ ಪಲಾಯನ ಮಾಡಿದ್ದಾರೆ. ಫೋಲೆಂಡ್‌ಗೆ ಅಧಿಕ ಸಂಖ್ಯೆಯಲ್ಲಿ ಜನರು ತೆರಳಿದ್ದಾರೆ. 1,735,068 ನಾಗರಿಕರು ಉಕ್ರೇನ್ ಅನ್ನು ಬಿಟ್ಟು ಬೇರೆ ದೇಶಗಳಿಗೆ ಹೋಗಿದ್ದಾರೆ. ಈ ಪೈಕಿ ಹೆಚ್ಚಾಗಿ ಮಹಿಳೆಯರು ಹಾಗೂ ಮಕ್ಕಳು ಆಗಿದ್ದಾರೆ ಎಂದು ಯುಎನ್‌ಎಚ್‌ಸಿಆರ್ ಹೇಳಿದೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಣೆ ಮಾಡಿದ ಬೆನ್ನಲ್ಲೇ ಆತಂಕಕ್ಕೆ ಒಳಗಾದ ಉಕ್ರೇನ್ನಿಯನ್ನರು ಪಲಾಯನ ಮಾಡಲು ಆರಂಭ ಮಾಡಿದ್ದಾರೆ. ಉಕ್ರೇನ್ ಹಾಗೂ ರಷ್ಯಾ ನಡುವೆ ಯುದ್ಧ ಆರಂಭವಾದ 48 ಗಂಟೆಗಳಲ್ಲಿ 50,000 ಕ್ಕೂ ಹೆಚ್ಚು ಉಕ್ರೇನಿಯನ್ನರು ದೇಶದಿಂದ ಪಲಾಯನ ಮಾಡಿದ್ದಾರೆ ಎಂದು ಯುಎನ್ ಈ ಹಿಂದೆ ಮಾಹಿತಿ ನೀಡಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications