ಬದುಕಿಸಿ ಎಂದು ಭಾರತದ ಕಾಲು ಹಿಡಿಯಿತಾ ಉಕ್ರೇನ್?
ನವದೆಹಲಿ: ಪರಿಸ್ಥಿತಿ ಬದಲಾಗಿದೆ, ಒಂದು ಕಾಲದಲ್ಲಿ ಭಾರತದ ವಿರುದ್ಧವೇ ಮಾತನಾಡುತ್ತಿದ್ದ ಉಕ್ರೇನ್ ಈ ಸಂದರ್ಭದಲ್ಲಿ ಭಾರತದ ಕಾಲು ಹಿಡಿಯುವ ಸ್ಥಿತಿ ಬಂದಿದೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಪ್ರಧಾನಿ ನರೇಂದ್ರ ಮೋದಿ ಜೊತೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜಪಾನ್‌ನಲ್ಲಿ ಚರ್ಚಿಸಲಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಯಾಕೆ ಈ ಮಾತುಕತೆ? ತಿಳಿಯೋಣ ಬನ್ನಿ.
ಜಪಾನ್ ಹಿರೋಶಿಮಾ ನಗರದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಅಲ್ಲಿಗೆ ತೆರಳಿದ್ದಾರೆ. ಇದೇ ವೇಳೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜೊತೆಗೂ ಮಾತುಕತೆ ನಡೆಯುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಈ ಬಗ್ಗೆ ಭಾರತ ಮತ್ತು ಉಕ್ರೇನ್‌ನ ಹಿರಿಯ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಅಕಸ್ಮಾತ್ ಈ ಭೇಟಿ ನಡೆದರೆ ಉಕ್ರೇನ್ ಮೇಲೆ ರಷ್ಯಾ ದಾಳಿ ಶುರುವಾದ ಬಳಿಕ ಮೋದಿ ಮತ್ತು ಉಕ್ರೇನ್ ಅಧ್ಯಕ್ಷ ಝಲೆನ್‌ಸ್ಕಿ ನಡುವಿನ ಮೊದಲ ಮಾತುಕತೆ ಆಗಲಿದೆ.

ಶನಿವಾರ ಪಿಎಂ ಮೋದಿ & ಝಲೆನ್‌ಸ್ಕಿ ಮಾತುಕತೆ?
ಈಗಾಗಲೇ ಜಿ-7 ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಹಿರೋಶಿಮಾಗೆ ತೆರಳಿದ್ದಾರೆ. ಶೃಂಗಸಭೆ ಜತೆ ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಸೇರಿದಂತೆ ಜಾಗತಿಕ ನಾಯಕರ ಜೊತೆ ಅವರು ಸರಣಿ ದ್ವಿಪಕ್ಷೀಯ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಶನಿವಾರ ಮೋದಿ ಮತ್ತು ಝಲೆನ್‌ಸ್ಕಿ ಮಾತುಕತೆ ನಡೆಸುವ ಸಾಧ್ಯತೆ ಇದ್ದು, ಸಭೆ ಕುರಿತಂತೆ ಇನ್ನೂ ಅಂತಿಮ ನಿರ್ಧಾರ ಹೊರಬಿದ್ದಿಲ್ಲ. ಆದರೆ ಶೀಘ್ರದಲ್ಲೇ ಅದರ ವರದಿ ಸಿಗುವ ಸಾಧ್ಯತೆ ಇದೆ.
ಭಾರತದ ಅಗತ್ಯತೆ ಉಕ್ರೇನ್‌ಗೆ ಮುಖ್ಯ!
ಉಕ್ರೇನ್ ಈಗ ಸಂಕಷ್ಟದಲ್ಲಿ ಇದೆ, ಹೀಗಾಗಿ ಭಾರತದ ಸಹಾಯ ಉಕ್ರೇನ್‌ಗೆ ಅತ್ಯಗತ್ಯ. ಇದೇ ಕಾರಣಕ್ಕೆ ಈಗ ಭಾರತದ ಬಳಿ ಬೇಡುತ್ತಿದೆ ಉಕ್ರೇನ್ ಎನ್ನುವ ಮಾತುಗಳು ಕೇಳಿಬರುತ್ತಿವೆ. ಮತ್ತೊಂದ್ಕಡೆ ಉಕ್ರೇನ್ ಮೇಲಿನ ದಾಳಿ ನಿಲ್ಲಿಸುವಂತೆ ರಷ್ಯಾಗೆ ಮನವಿ ಮಾಡಿ ಎಂದು ಭಾರತದ ಬಳಿ ಈ ಹಿಂದೆ ಉಕ್ರೇನ್ ಕೇಳಿಕೊಂಡಿತ್ತು. ಇಷ್ಟೆಲ್ಲದರ ನಡುವೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಉಕ್ರೇನ್ ಅಧ್ಯಕ್ಷರು ಭಾರತದ ಪ್ರಧಾನಿ ಜೊತೆ ಮಾತುಕತೆಗೆ ಒಲವು ತೋರಿಸುತ್ತಿದ್ದಾರೆ.
ಭೀಕರ ಸ್ವರೂಪದ ಯುದ್ಧ ನಿಂತಿಲ್ಲ
ರಷ್ಯಾ & ಉಕ್ರೇನ್ ವಾರ್ ಶುರುವಾಗಿ 451 ದಿನಗಳೇ ಉರುಳಿದೆ, ಆದ್ರೂ ಯುದ್ಧ ನಿಲ್ಲುತ್ತಿಲ್ಲ. ಬದಲಾಗಿ ಎರಡೂ ದೇಶಗಳ ನಡುವೆ ದ್ವೇಷ ಹೆಚ್ಚಾಗುತ್ತಲೇ ಬಂದಿದೆ. ಹೀಗಾಗಿ ರಷ್ಯಾ & ಉಕ್ರೇನ್ ಯುದ್ಧ (Russia Ukraine War) ಮತ್ತಷ್ಟು ವಿನಾಶಕಾರಿ ಆಗುತ್ತಿದೆ. ಇಷ್ಟುದಿನ ಉಕ್ರೇನ್ ಮೇಲೆ ಬಹುತೇಕ ಹಿಡಿತ ಸಾಧಿಸಿತ್ತು ರಷ್ಯಾ ಸೇನೆ, ಆದರೆ ಅಮೆರಿಕ ತನ್ನ ಬಳಿ ಇರುವ ಅತ್ಯಂತ ವಿನಾಶಕಾರಿ ಅಸ್ತ್ರವನ್ನು ಉಕ್ರೇನ್‌ಗೆ ಉಡುಗೊರೆ ರೂಪದಲ್ಲಿ ಕೊಟ್ಟಿತ್ತು. ನಂತರ ರಷ್ಯಾಗೆ ಭಾರಿ ತೊಂದರೆ ಆಗುತ್ತಿದೆ. ಈ ಮಧ್ಯೆ ಭಾರತದ ಜೊತೆ ಚರ್ಚೆಗೆ ಉಕ್ರೇನ್ ಮುಂದಾಗಿರುವುದು ವಿಶೇಷ.

29 ಕ್ಷಿಪಣಿ ಉಡೀಸ್ ಮಾಡಿದ ಉಕ್ರೇನ್
ರಷ್ಯಾ ವಿರುದ್ಧ ಯುದ್ಧ ಆರಂಭವಾದ ಬಳಿಕ ಉಕ್ರೇನ್ ನೆಲಕಚ್ಚಿದೆ. ಇಂತಹ ಹೊತ್ತಲ್ಲೇ ನ್ಯಾಟೋ & ಅಮೆರಿಕ ಸಿಕ್ಕಾಪಟ್ಟೆ ಸಹಾಯ ಮಾಡಿ, ಉಕ್ರೇನ್‌ಗೆ ಬೆನ್ನೆಲುಬಾಗಿವೆ. ಹೀಗಾಗಿ ಹೊಸ ಎನರ್ಜಿ ಜೊತೆಗೆ ರಣತಂತ್ರ ರೂಪಿಸಿ ರಷ್ಯಾ ವಿರುದ್ಧ ಭೀಕರ ದಾಳಿ ಆರಂಭಿಸಿರುವ ಉಕ್ರೇನ್, ರಷ್ಯಾ ಸೇನೆ ಹಾರಿಸಿದ್ದ 30 ಕ್ಷಿಪಣಿಗಳನ್ನ ತನ್ನ ಕ್ಷಿಪಣಿ ನಿರೋಧಕದ ಸಹಾಯದಿಂದ ಹೊಡೆದು ಉರುಳಿಸಿತ್ತು. ನಿನ್ನೆ ಉಕ್ರೇನ್ ರಾಜಧಾನಿ ಕೀವ್ ಮೇಲೆ ಹಾರಿಬಂದ 30 ಕ್ಷಿಪಣಿಗಳ ಪೈಕಿ 29 ಮಿಸೈಲ್‌ಗಳು ಆಕಾಶದಲ್ಲೇ ಪುಡಿಪುಡಿ ಆಗಿವೆ.
ಒಟ್ನಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಭೀಕರ ಯುದ್ಧ ನಡೆಯುವ ಸಂದರ್ಭದಲ್ಲೇ ಉಕ್ರೇನ್ ಅಧ್ಯಕ್ಷರು ಮಧ್ಯಪ್ರವೇಶ ಮಾಡಿದ್ದಾರೆ. ಭಾರತದ ಜೊತೆ ಮಾತುಕತೆ ನಡೆಸುವ ಮೂಲಕ ರಷ್ಯಾ ಮೇಲೆ ಒತ್ತಡ ಹಾಕಿಸಿ, ಯುದ್ಧ ನಿಲ್ಲಿಸುವ ತಂತ್ರವೂ ಇರಬಹುದು. ಆದರೆ ರಷ್ಯಾ ಜೊತೆಗೆ ಉತ್ತಮ ಸಂಬಂಧ ಹೊಂದಿರುವ ಭಾರತ ಇದೀಗ ಉಕ್ರೇನ್ ಜೊತೆಗೆ ಯಾವ ರೀತಿಯ ಒಪ್ಪಂದ ಮಾಡಿಕೊಳ್ಳಲಿದೆ ಎಂಬುದನ್ನ ಕಾದು ನೋಡಬೇಕು.












Click it and Unblock the Notifications